ಸಮವಸ್ತ್ರ ಧರಿಸುವ ಕನಸಿನ ಬೆನ್ನೇರಿ!

ಮಂಗಳವಾರ, ಮಾರ್ಚ್ 26, 2019
33 °C
ರಕ್ಷಣಾ ಇಲಾಖೆಯ ವಿವಿಧ ತಂಡಗಳಲ್ಲಿ ಸಾವಿರಾರು ಯುವತಿಯರಿಂದ ಕರ್ತವ್ಯ

ಸಮವಸ್ತ್ರ ಧರಿಸುವ ಕನಸಿನ ಬೆನ್ನೇರಿ!

Published:
Updated:
Prajavani

ಕಾರವಾರ: ಸಮವಸ್ತ್ರ ಧರಿಸಿ ಕೈಯಲ್ಲಿ ಬಂದೂಕು ಹಿಡಿದು ನಿಂತ ಭಂಗಿ. ಗುರಿಯೆಡೆಗೆ ಏಕಾಗ್ರತೆಯಿಂದ ನೋಡುತ್ತ, ‘ನಾವು ರಕ್ಷಣಾ ಕಾರ್ಯಕ್ಕೆ ಅತ್ಯಂತ ಸಮರ್ಥರಿದ್ದೇವೆ’ ಎಂಬರ್ಥದ ನೋಟ.

ದೇಶದ ರಕ್ಷಣಾ ಇಲಾಖೆಯಲ್ಲಿ ಪುರುಷರಂತೆಯೇ ಸಾವಿರಾರು ಮಹಿಳೆಯರು ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭೂ ಸೇನೆ, ವಾಯು ಸೇನೆ, ನೌಕಾಸೇನೆಗಳ ಜತೆಗೇ ಇತರ ಅಂಗಸಂಸ್ಥೆಗಳಲ್ಲೂ ಸಮರ್ಪಕವಾಗಿ ಕೆಲಸ ನಿಭಾಯಿಸುತ್ತಿದ್ದಾರೆ.

ತಾಲ್ಲೂಕಿನ ಬಿಣಗಾ ಸಮೀಪದ ಮೂಡಲಮಕ್ಕಿಯ ಸ್ನೇಹಿತೆಯರಿಬ್ಬರು ಇಂತಹ ಕಾರ್ಯದಲ್ಲಿ ನಿರತರಾಗಿದ್ದಾರೆ. ವನಿತಾ ಗೌಡ ಮತ್ತು ಮೀನಾಕ್ಷಿ ಗೌಡ ನೆರೆಹೊರೆಯವರು. ಮೊದಲಿನಿಂದಲೂ ಸೇನೆ, ಪೊಲೀಸ್ ಮುಂತಾದ ವಿಭಾಗಗಳತ್ತ ಆಕರ್ಷಿತರಾಗಿದ್ದರು. ತಮ್ಮ ಗುರಿಯತ್ತ ಹೊರಟ ಇಬ್ಬರೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ಸೇರಿಕೊಂಡರು. 10 ವರ್ಷಗಳಿಂದ ಮಹಿಳಾ ಕಾನ್‌ಸ್ಟೆಬಲ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮೀನಾಕ್ಷಿ ದೆಹಲಿ, ಗೋವಾ, ಕೊಚ್ಚಿಯಲ್ಲಿ ಕೆಲಸ ಮಾಡಿದರು. ಅವರ ಗೆಳತಿ ವನಿತಾ ಕೂಡ ಇದೇರೀತಿ ದೇಶದ ವಿವಿಧೆಡೆ ಇದ್ದರು. ಇಬ್ಬರೂ ಸದ್ಯ ಮಂಗಳೂರಿನಲ್ಲಿ ನಿಯೋಜನೆಗೊಂಡಿದ್ದಾರೆ.

ತಮ್ಮ ಮಗಳು ದೇಶ ಸೇವೆ ಮಾಡುತ್ತಿದ್ದಾಳೆ ಎಂಬುದು ವನಿತಾ ಅವರ ತಾಯಿ ಸುಮನಾ ಬಾನು ಗೌಡ ಅವರಿಗೆ ಅತೀವ ಹೆಮ್ಮೆಯ ಸಂಗತಿ. ‘ಪ್ರಜಾವಾಣಿ’ ಜತೆ ಮಾತನಾಡುವಾಗ ಆ ಭಾವನೆ ವ್ಯಕ್ತವಾಗುತ್ತಿತ್ತು.

‘ಕಾರವಾದ ಗ್ಯಾಸ್ (GAS: ಸರ್ಕಾರಿ ಕಲಾ ಮತ್ತು ವಿಜ್ಞಾನ) ಕಾಲೇಜಿನಲ್ಲಿ ಡಿಗ್ರಿ ಮಾಡಿದ್ಳು. ಆಗ್ಲೇ ಕೆಲಸಕ್ಕೆ ಅರ್ಜಿ ಭರ್ತಿ ಮಾಡಿ ಕೊಟ್ಟಿದ್ಳು. ಕಡೆಗೆ ಕೆಲ್ಸ ಆಗಿ ಹೊರ ರಾಜ್ಯದಲ್ಲಿ ಇರ್ಬೇಕು ಅಂದಾಗ ಬೇಸರವಾಯ್ತು. ಆದ್ರೆ, ಅವ್ಳಿಗೊಂದು ನೌಕ್ರಿ ಸಿಕ್ತಲ್ಲ, ದೇಶ ಸೇವೆ ಮಾಡ್ತಾಳೆ ಅಂತ ಹೆಮ್ಮೆಯಾಯಿತು. ಹಾಗಾಗಿ ನಾನು ಧೈರ್ಯ ಮಾಡಿ ಸುಮ್ನಿದ್ದೆ. ದಿನಕ್ಕೊಮ್ಮೆ ಫೋನ್ ಮಾಡಿ ಮಾತಾಡಿದ್ರೇ ಸಮಾಧಾನ ಆಗ್ತಿತ್ತು’ ಎಂದು ತಮ್ಮ ಮಗಳ ವೃತ್ತಿಯ ಆರಂಭದ ದಿನಗಳನ್ನು ನೆನಪಿಸಿಕೊಂಡರು.

‘ಬಾಲ್ಯದಿಂದಲೂ ಒಂದೇ ಗುರಿ’: ‘ಸಮವಸ್ತ್ರದ ಬಗ್ಗೆ ನನಗೆ ಬಾಲ್ಯದಿಂದಲೂ ತುಂಬ ಒಲವಿತ್ತು. ದೇಶದ ಭದ್ರತೆಗೆ ಸಂಬಂಧಿಸಿದ ಯಾವುದಾದರೂ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದುಕೊಂಡಿದ್ದೆ. ಅದು ಸಾಧ್ಯವಾಗಿದೆ’ ಮೀನಾಕ್ಷಿ ಗೌಡ ಪ್ರತಿಕ್ರಿಯಿಸಿದರು.

‘ಪ್ರಜಾವಾಣಿ’ ಜತೆ ದೂರವಾಣಿಯಲ್ಲಿ ಮಾತನಾಡಿದ ಅವರು, ‘2009ರಲ್ಲಿ ಸಿಐಎಸ್‌ಎಫ್‌ಗೆ ಅರ್ಜಿ ಹಾಕಿದ್ದೆ. ಮೈಸೂರಿನಲ್ಲಿ ಆಯ್ಕೆ ಪ್ರಕ್ರಿಯೆ ಇತ್ತು. ವೈದ್ಯಕೀಯ ಪರೀಕ್ಷೆಗಳು ಬೆಂಗಳೂರಿನಲ್ಲಿದ್ದವು. ನನ್ನ ಅಮ್ಮ ಓಮಿ ಗೌಡ ಒಂದು ವರ್ಷದ ಹಿಂದೆ ತೀರಿಹೋದರು. ಅವರ ಹಾಗೂ ಮನೆಯವರ ಬೆಂಬಲದಿಂದ ನನ್ನ ಗುರಿ ಮುಟ್ಟಲು ಸಾಧ್ಯವಾಯಿತು’ ಎಂದು ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !