ಗೌಳಿಗರ ವಾಡದಲ್ಲೊಂದು ಅಪರೂಪದ ಅಕ್ಷರ ದೇಗುಲ, ಚಿತ್ತಾರದಲ್ಲಿ ಕಂಗೊಳಿಸುವ ಶಾಲೆ

7

ಗೌಳಿಗರ ವಾಡದಲ್ಲೊಂದು ಅಪರೂಪದ ಅಕ್ಷರ ದೇಗುಲ, ಚಿತ್ತಾರದಲ್ಲಿ ಕಂಗೊಳಿಸುವ ಶಾಲೆ

Published:
Updated:
Prajavani

ಯಲ್ಲಾಪುರ: ರಂಗುರಂಗಿನ ಚಿತ್ತಾರ, ನಾಡಿನ ಪ್ರೇಕ್ಷಣೀಯ ಸ್ಥಳಗಳು, ಸುವಾಸನೆ ಬೀರುವ ಔಷಧ ಸಸ್ಯಗಳು ಈ ಶಾಲೆಗೆ ಬರುವ ಜನರನ್ನು ಸ್ವಾಗತಿಸುತ್ತವೆ.

ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯ್ತಿಯಲ್ಲಿರುವ ಬೈಲಂದೂರು ತಾಲ್ಲೂಕು ಕೇಂದ್ರದಿಂದ ಸುಮಾರು 28 ಕಿ.ಮೀ ದೂರದಲ್ಲಿದೆ. ಇಲ್ಲಿನ ಗೌಳಿವಾಡದ ನಡುವೆ ಮೈದಳೆದಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಅನೇಕ ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ.

1994ರಲ್ಲಿ ಸಣ್ಣ ಗುಡಿಸಲಿನಲ್ಲಿ ಪ್ರಾರಂಭವಾಗಿರುವ ಶಾಲೆಗೆ 2000ನೇ ಇಸವಿಯಲ್ಲಿ ಒಂದು ಕೊಠಡಿಯ ಭಾಗ್ಯ ದೊರೆಯಿತು. ನಂತರ ಹೆಚ್ಚುವರಿ ತರಗತಿ ಕೊಠಡಿಗಳು, ಅಡುಗೆ ಕೋಣೆ, ಶೌಚಾಲಯ ಹೀಗೆ ಸೌಲಭ್ಯಗಳು ವಿಸ್ತರಣೆಯಾಗುತ್ತ ಹೋದವು. ಕೈತೋಟವು ಶಾಲೆಯ ಸೊಬಗನ್ನು ಹೆಚ್ಚಿಸಿದೆ. ಆವರಣ ಗೋಡೆಯ ಮೇಲೆ ವಿದ್ಯಾರ್ಥಿಗಳು ವರ್ಲಿ ಕಲೆಯ ಚಿತ್ರಗಳನ್ನು ಬಿಡಿಸಿದ್ದಾರೆ. ಯುವ ಕಲಾವಿದ ಜ್ಞಾನೇಶ್ವರ ಹೊಂಡ್ರಪ್ಪ ಗೌಡ ಅವರು ಗೋಡೆಯ ಮೇಲೆ ಪ್ರೇಕ್ಷಣೀಯ, ಐತಿಹಾಸಿಕ ಸ್ಥಳಗಳನ್ನು ಚಿತ್ರಿಸಿದ್ದಾರೆ. ಇದಕ್ಕೆ ಊರ ನಾಗರಿಕರು ಧನ ಸಹಾಯ ಒದಗಿಸಿದ್ದಾರೆ.

ಮಕ್ಕಳ ಪಾಲ್ಗೊಳ್ಳುವಿಕೆಯಲ್ಲಿ ಔಷಧ ಸಸ್ಯಗಳ ವನ ನಿರ್ಮಾಣವಾಗಿದೆ. ಪ್ರತಿ ವರ್ಷ ನಡೆಯುವ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಬಹುಮಾನ ಗಿಟ್ಟಿಸಿಕೊಳ್ಳುತ್ತಾರೆ. ಪ್ರತಿ ಶನಿವಾರ ಶಾಲೆಯಲ್ಲಿ ನಡೆಯುವ ಕಾವ್ಯ ಕಲರವದಲ್ಲಿ ಮಕ್ಕಳು ತಮಗಿಷ್ಟವಾದ ಕವಿಗಳ ಕವನ ವಾಚಿಸುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಹಣೆಯ ಪೂರ್ಣ ಹೊಣೆಗಾರಿಕೆಯನ್ನು ಮಕ್ಕಳೇ ನಿರ್ವಹಿಸುತ್ತಾರೆ.

ಕರ್ನಾಟಕ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಹಳದಿ ಶಾಲೆ, ಕಿತ್ತಳೆ ಶಾಲೆ ಪ್ರಶಸ್ತಿಗಳು ದೊರೆತಿವೆ. ಇಲ್ಲಿನ ಶಿಕ್ಷಕ ನಾಗರಾಜ ಹುಡೇದ್ ಅವರ ಸಂಪಾದಕತ್ವದಲ್ಲಿ ‘ಗೌಳಿಗರ ಶಬ್ದಕೋಶ’ ರಚನೆಯಾಗಿದೆ. ಮುಖ್ಯ ಶಿಕ್ಷಕ ನಾರಾಯಣ ಕಾಂಬಳೆ ಅವರು ನಲಿ–ಕಲಿ ಕೊಠಡಿಯಲ್ಲಿ ಚಿತ್ರಗಳನ್ನು ಬರೆದು, ಆಕರ್ಷಕಗೊಳಿಸಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ ಬಕ್ಕು ದೊಂಡು ಥೋರತ್, ಶಿಕ್ಷಣ ಪ್ರೇಮಿ ದಾಕ್ಲು ಪಟಕಾರೆ, ಊರ ನಾಗರಿಕರು ಶಾಲೆಗೆ ಬೆನ್ನೆಲುಬಾಗಿದ್ದಾರೆ. ಸಮುದಾಯದಿಂದ ₹ 3000 ಸಂಗ್ರಹಿಸಿ, ಶಾಲೆಯ ಗ್ರಂಥಾಲಯಕ್ಕೆ ಪುಸ್ತಕ ಒದಗಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !