ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ ಗಿಡ ನೆಡ್ತಾರೆ, ಮಾರ್ಕೂ ಕೊಡ್ತಾರೆ!’

ಜೊಯಿಡಾ ತಾಲ್ಲೂಕಿನ ತಿನೈಘಾಟ್ ಪ್ರೌಢಶಾಲೆಯ ಶಿಕ್ಷಕರಿಂದ ಸ್ಫೂರ್ತಿದಾಯಕ ಯೋಜನೆ
Last Updated 24 ಜೂನ್ 2019, 9:26 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿ ವಿದ್ಯಾರ್ಥಿಗಳ ಮನೆಗೇ ಹೋಗುವ ಶಿಕ್ಷಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಗಿಡ ನೆಟ್ಟು, ಸೆಲ್ಫಿ ತೆಗೆಸಿಕೊಳ್ಳುತ್ತಾರೆ. ಗಿಡದ ಬೆಳವಣಿಗೆ ನೋಡಿಕೊಂಡು ವಿದ್ಯಾರ್ಥಿಗಳಿಗೆ ಅಂಕವನ್ನೂ ನೀಡುತ್ತಾರೆ! ಈ ಮೂಲಕ ಪರಿಸರ ಪ್ರೀತಿ ಮೂಡಿಸುತ್ತಿದ್ದಾರೆ.

ಜೊಯಿಡಾ ತಾಲ್ಲೂಕಿನ ತಿನೈಘಾಟ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಪರಿಸರದ ಪಾಠವನ್ನು ಹೀಗೆ ಹೇಳಿಕೊಡುತ್ತಿದ್ದಾರೆ.

ಪ್ರತಿವರ್ಷ ಪರಿಸರ ದಿನಾಚರಣೆಯಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ಕೊಡಲಾಗುತ್ತಿತ್ತು. ಅವುಗಳನ್ನು ಮನೆಗೆ ಒಯ್ಯುತ್ತಿದ್ದ ವಿದ್ಯಾರ್ಥಿಗಳು ನೆಟ್ಟು ಆರೈಕೆ ಮಾಡುತ್ತಿರಲಿಲ್ಲ. ಗಿಡಗಳನ್ನು ಈ ರೀತಿ ಕೊಲ್ಲದಂತೆ ಉಪಾಯ ಮಾಡಿದ ಶಿಕ್ಷಕರು, ಅರಣ್ಯ ಇಲಾಖೆಯನ್ನು ಸಂಪರ್ಕಿಸಿದರು. ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯ ಜೊತೆಗೂಡಿ ವಿದ್ಯಾರ್ಥಿಗಳ ಮನೆಗೆ ಹೋಗುವುದು, ಅವರು ತೋರಿಸಿದ ಜಾಗದಲ್ಲಿ ಗಿಡ ನೆಡುವುದಾಗಿ ನಿರ್ಧರಿಸಿದರು.

‘ಈವರೆಗೆ ಗಿಡ ತೆಗೆದುಕೊಂಡ ಹೋದ ವಿದ್ಯಾರ್ಥಿಯು ಅದನ್ನು ಏನು ಮಾಡಿದ ಎಂದು ಯಾರೂ ನೋಡುತ್ತಿರಲಿಲ್ಲ. ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಬದ್ಧತೆ ಬರಲು ಇಂತಹ ಯೋಚನೆ ಮಾಡಿದ್ದೇವೆ. ಯಾವ್ಯಾವುದೋ ಗಿಡಗಳನ್ನು ಕೊಡುವ ಬದಲು ಔಷಧೀಯ ಗುಣವುಳ್ಳ ನುಗ್ಗೆಕಾಯಿ ಸಸಿಗಳನ್ನು ಆಯ್ಕೆ ಮಾಡಿಕೊಂಡೆವು’ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕ ಪ್ರಶಾಂತ ಪಟಗಾರ್.

ಶನಿವಾರದ ಸದ್ಬಳಕೆ: ‘‍ಶಾಲೆ ಆರಂಭವಾದಾಗಿನಿಂದ ಪ್ರತಿ ಶನಿವಾರ ಈ ಕಾರ್ಯ ಮಾಡುತ್ತಿದ್ದೇವೆ. ಗಿಡ ನೆಟ್ಟಾದ ಬಳಿಕ ಎಲ್ಲರೂ ಅದರ ಸಮೀಪ ನಿಲ್ಲುತ್ತೇವೆ. ನಂತರ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಾರೆ. ನಮ್ಮ ಶಾಲೆಗೆ ಐದಾರು ಹಳ್ಳಿಗಳಿಂದ 110 ವಿದ್ಯಾರ್ಥಿಗಳು ಬರುತ್ತಾರೆ. ಎಲ್ಲರ ಮನೆಗಳಲ್ಲಿ ಗಿಡ ನೆಡಲಿದ್ದೇವೆ. ವಿಜ್ಞಾನ ಶಿಕ್ಷಕ ಸುರೇಶ್ ಯಡುವಣ್ಣವರ್ ಇದರ ನೇತೃತ್ವ ವಹಿಸಿಕೊಂಡಿದ್ದಾರೆ’ ಎಂದು ಹೆಮ್ಮಯಿಂದ ವಿವರಿಸಿದರು.

‘ನಮ್ಮಲ್ಲಿ ಪರಿಸರದ ಬಗ್ಗೆ ಪ್ರೀತಿ ಮೂಡಿಸಲು ಇದು ಸಹಕಾರಿಯಾಗಿದೆ. ಗಿಡಗಳನ್ನು ನೆಡುವುದು ಎಷ್ಟು ಮುಖ್ಯವೋ ನಂತರ ಅದನ್ನು ಪಾಲನೆ ಮಾಡುವುದೂ ಅಷ್ಟೇ ಅಗತ್ಯ ಎಂಬ ಅರಿವು ಇದರಿಂದ ಮೂಡುತ್ತದೆ’ ಎನ್ನುತ್ತಾರೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಶ್ಯಾಮಲಾ ಲಕ್ಷ್ಮಣ ಹಣಬರ ಹಾಗೂ ಶ್ಯಾಮ ಶಂಕರ ದೇಸಾಯಿ.

ಬಹುಮಾನ: ಶಿಕ್ಷಕರ ಉತ್ಸಾಹಕ್ಕೆ ಅರಣ್ಯ ಇಲಾಖೆಯ ತಿನೈಘಾಟ್ ವಲಯದ ಅಧಿಕಾರಿ ಮಹೇಶ್ ಹಿರೇಮಠ ಬೆಂಬಲ ನೀಡಿದರು. ‘ಈ ಗಿಡಗಳಿಗೆ ಸಂಬಂಧಿಸಿಯೇ ನಮ್ಮ ಕಚೇರಿಯಲ್ಲಿ ನೋಂದಣಿ ಪುಸ್ತಕ ಮಾಡಿಕೊಂಡಿದ್ದೇವೆ. ಮೂರು ತಿಂಗಳಿಗೊಮ್ಮೆ ಗಿಡದ ಬೆಳವಣಿಗೆಯನ್ನು ದಾಖಲಿಸುತ್ತೇವೆ. ಯೋಜನೆಯ ಫಲಶ್ರುತಿಯನ್ನು ಅಧ್ಯಯನ ಮಾಡಲು ಇದು ಸಹಕಾರಿಯಾಗುತ್ತದೆ. ಉತ್ತಮವಾಗಿ ಆರೈಕೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲು ನಿರ್ಧರಿಸಿದ್ದೇನೆ’ ಎಂದು ಹೇಳಿದರು.

ಪರಿಸರ ಪ್ರಜ್ಞೆ ಮೂಡಿಸುವ ಯತ್ನ
‘ನಾವು ನೆಟ್ಟ ಗಿಡದ ಬೆಳವಣಿಗೆಹೇಗಿದೆ ಎಂದು ನೋಡಿ ಒಂದು ವರ್ಷದ ಬಳಿಕ ವಿದ್ಯಾರ್ಥಿಗೆ ಆಂತರಿಕ ಅಂಕ (ಇಂಟರ್ನಲ್ ಮಾರ್ಕ್) ನೀಡುತ್ತೇವೆ. ವಿದ್ಯಾರ್ಥಿಗಳ ಮನೆಗಳಲ್ಲಿ ಗಿಡ ಬೆಳೆಯಬೇಕು. ಅದರಿಂದ ಅವರ ಕುಟುಂಬಕ್ಕೆ ಪೌಷ್ಟಿಕಾಂಶವೂ ಸಿಗಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ.ತಮ್ಮಗುರುಗಳುನೆಟ್ಟ ಗಿಡ ಎಂಬ ಅಭಿಮಾನವೂ ವಿದ್ಯಾರ್ಥಿಗಳಲ್ಲಿಮೂಡುವ ಕಾರಣಅದನ್ನು ಕಡಿಯಲು ಬಿಡಲಾರರು’ ಎಂದುಪ್ರಶಾಂತ ಪಟಗಾರ್ ಮುಗುಳ್ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT