ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಬಳಕೆಯಾಗದೇ ಪಾಳುಬಿದ್ದ ಕೊಂಡವಾಡೆ

ಮತ್ತೆ ಚರ್ಚೆಯಾದ ಹೊಸ ಕೊಂಡವಾಡೆ ನಿರ್ಮಾಣ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
Last Updated 17 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಶಿರಸಿ: ನಗರದಲ್ಲಿ ಬಿಡಾಡಿ ದನಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವುಗಳ ನಿಯಂತ್ರಣಕ್ಕೆಂದು ನಗರಸಭೆ ಮೂರು ವರ್ಷಗಳ ಹಿಂದೆ ನಿರ್ಮಿಸಿದ್ದ ಕೊಂಡವಾಡೆ ಬಳಕೆಯಾಗದೇ, ಪಾಳುಬಿದ್ದಿದೆ.

ಐದು ವರ್ಷಗಳ ಹಿಂದೆ ರಸ್ತೆಯಲ್ಲಿ ಬಿಡಾಡಿ ದನಗಳ ಕಾಟ ಹೆಚ್ಚಾದಾಗ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಗೊಂಡು, ಕೊಂಡವಾಡೆ ನಿರ್ಮಿಸುವ ನಿರ್ಣಯ ಸ್ವೀಕರಿಸಲಾಗಿತ್ತು. ಅಂತೆಯೇ 2014–15ನೇ ಸಾಲಿನ ನಗರಸಭೆ ನಿಧಿಯಡಿ ₹ 8 ಲಕ್ಷ ವೆಚ್ಚ ಮಾಡಿರುವ ನಗರಸಭೆ 2016ರಲ್ಲಿ ಕೊಂಡವಾಡೆ ನಿರ್ಮಿಸಿತ್ತು. ರಾಘವೇಂದ್ರ ಮಠದ ಸಮೀಪವಿರುವ ನಗರಸಭೆಯ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಸುರಕ್ಷಿತ ಜಾಗದಲ್ಲಿ ಈ ಕಟ್ಟಡ ತಲೆಎತ್ತಿತ್ತು. ಆದರೆ, ಕಟ್ಟಡ ನಿರ್ಮಾಣಗೊಂಡ ಮೇಲೆ ಒಮ್ಮೆ ಕೂಡ ಇದು ಬಳಕೆಯಾಗಿಲ್ಲ.

‘ನಗರದಲ್ಲಿ ಈಗಾಗಲೇ ಇರುವ ಕೊಂಡವಾಡೆಯಲ್ಲಿ ಒಂದು ದಿನವೂ, ಒಂದು ದನವನ್ನು ಕಟ್ಟಿಲ್ಲ. ಇಡೀ ಕಟ್ಟಡ ಸುತ್ತ ಗಿಡ–ಗಂಟಿ, ಪೊದೆಗಳು ಬೆಳೆದುಕೊಂಡಿವೆ. ನಿರ್ವಹಣೆಯಿಲ್ಲದೇ ಕಟ್ಟಡ ಹಾಳುಬಿದ್ದಿದೆ. ಈ ನಡುವೆ ನಗರಸಭೆಯ ಕೆಲವು ಸದಸ್ಯರು ಜಿಲ್ಲಾಧಿಕಾರಿ ಭೇಟಿ ಮಾಡಿ ಹೊಸ ಕೊಂಡವಾಡೆ ನಿರ್ಮಿಸುವಂತೆ ವಿನಂತಿಸಿದ್ದಾರೆ. ನಗರಸಭೆ ಹೊಸ ಕಟ್ಟಡ ನಿರ್ಮಾಣ ಮಾಡುವುದನ್ನು ಕೈಬಿಟ್ಟು ಇರುವ ಕಟ್ಟಡ ಸದ್ಬಳಕೆ ಮಾಡಿಕೊಳ್ಳಲಿ’ ಎಂದು ಸಾಮಾಜಿಕ ಮುಖಂಡ ಪರಮಾನಂದ ಹೆಗಡೆ ಒತ್ತಾಯಿಸಿದ್ದಾರೆ.

‘ಎಲ್ಲದಕ್ಕೂ ಹೊಸ ಕಟ್ಟಡ ನಿರ್ಮಿಸುತ್ತ ಹೋದರೆ ಜನರು ತೆರಿಗೆ ಕಟ್ಟುವ ಹಣ ನಷ್ಟವಾಗುತ್ತದೆ. ಮರಾಠಿಕೊಪ್ಪದಲ್ಲಿ ₹ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನ ಹಾಳುಸುರಿಯುತ್ತಿದೆ. ಈಗ ಇರುವ ಕೊಂಡವಾಡೆ ಭದ್ರ ಜಾಗದಲ್ಲಿದೆ. ಇದನ್ನೇ ಸರಿಪಡಿಸಿ ಬಳಕೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

‘ಬಿಡಾಡಿ ದನಗಳು ಹೆಚ್ಚಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ನಗರಸಭೆ ಅವುಗಳನ್ನು ಹಿಡಿದು ಕಟ್ಟಿಹಾಕಿದರೆ, ಮಾಲೀಕರು ಅದನ್ನು ವಾಪಸ್ ತೆಗೆದುಕೊಂಡು ಹೋಗಲು ಬರುವುದಿಲ್ಲ. ಇದು ನಗರಸಭೆಗೆ ತಲೆನೋವಾಗಿದೆ. ಅಲ್ಲದೇ ಕೊಂಡವಾಡೆ ನಿರ್ವಹಣೆಗೆ ನಗರಸಭೆಯಲ್ಲಿ ಪ್ರತ್ಯೇಕ ಅನುದಾನವಿಲ್ಲ. ಅದಕ್ಕೆ ಪ್ರತ್ಯೇಕ ಟೆಂಡರ್‌ ಕರೆದು ಮುಂದಿನ ಕ್ರಮವಹಿಸಬೇಕು’ ಎಂದು ಉಪವಿಭಾಗಾಧಿಕಾರಿ, ಪ್ರಭಾರಿ ಪೌರಾಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT