ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕದಂತಾಗಿರುವ ನೆಹರುನಗರ ರುದ್ರಭೂಮಿ

ಮೂರು ವರ್ಷಗಳಿಂದ ಬಳಕೆಯಾಗದ ಕಟ್ಟಡ
Last Updated 26 ಮೇ 2019, 19:30 IST
ಅಕ್ಷರ ಗಾತ್ರ

ಶಿರಸಿ: ನಗರಸಭೆ ನೆಹರುನಗರದಲ್ಲಿ ನಿರ್ಮಿಸಿರುವ ಹಿಂದೂ ರುದ್ರಭೂಮಿ ಇನ್ನೂ ಬಳಕೆಗೆ ಮುಕ್ತವಾಗಿಲ್ಲ. ನಿರುಪಯುಕ್ತವಾದ ಕಟ್ಟಡದ ಸುತ್ತ ಗಿಡ–ಗಂಟಿಗಳು ಬೆಳೆದು ನಿಂತಿವೆ. ಬೀಡಾಡಿ ಪ್ರಾಣಿಗಳಿಗೆ ಇದು ಆಶ್ರಯತಾಣವಾಗಿದೆ.

ನೆಹರುನಗರ ಸುತ್ತಲಿನ ಪ್ರದೇಶಗಳ ಜನರಿಗೆ ಅನುಕೂಲವಾಗಲೆಂದು ಮೂರು ವರ್ಷಗಳ ಹಿಂದೆ ನಗರಸಭೆ ₹ 10 ಲಕ್ಷ ವೆಚ್ಚದಲ್ಲಿ ಸಕಲ ವ್ಯವಸ್ಥೆಯಿರುವ ರುದ್ರಭೂಮಿಯನ್ನು ನಿರ್ಮಿಸಿತ್ತು. ಮೃತದೇಹದ ದಹನಕ್ಕೆ ಸಿಲಿಕಾನ್ ಯಂತ್ರ, ಕಟ್ಟಿಗೆ ಇಡಲು ಕೊಠಡಿ, ಕಾವಲುಗಾರರಿಗೆ ವಸತಿಗೃಹ, ಜನರಿಗೆ ಕುಳಿತುಕೊಳ್ಳಲು ಆಸನ, ನೀರು ಸೇರಿದಂತೆ ಎಲ್ಲ ವ್ಯವಸ್ಥೆಗಳೂ ಇಲ್ಲಿವೆ. ಆದರೆ, ನಿರ್ಮಾಣವಾದಾಗಿನಿಂದ ಈವರೆಗೂ ಇಲ್ಲಿ ಒಂದೇ ಒಂದು ಶವದ ಸಂಸ್ಕಾರವೂ ನಡೆದಿಲ್ಲ.

‘ಇಬ್ಬರು ಗುತ್ತಿಗೆದಾರರು ಸೇರಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಮೃತದೇಹದ ದಹನ ಕ್ರಿಯೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಆದರೆ, ಜನರು ಇಲ್ಲಿಗೆ ಶವದ ಅಂತ್ಯಕ್ರಿಯೆಗೆ ಬರುತ್ತಿಲ್ಲ. ಬಳಕೆಯಾಗದ ಕಾರಣ ಅಲ್ಲಿ ಹುಲ್ಲು, ಗಿಡ–ಗಂಟಿಗಳು ಬೆಳೆದಿವೆ’ ಎಂಬುದು ನಗರಸಭೆ ಅಧಿಕಾರಿಗಳು ನೀಡುವ ವಿವರಣೆ.

’ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ರುದ್ರಭೂಮಿ ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಹಿಂದೆ ಈ ರುದ್ರಭೂಮಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆದಿತ್ತು. ಈಗ ರುದ್ರಭೂಮಿ ಇದ್ದೂ ಬಳಕೆಯಾಗುತ್ತಿಲ್ಲ. ಬಯಲಿನಲ್ಲಿ ಶವ ಸಂಸ್ಕಾರ ನಡೆಯುತ್ತದೆ’ ಎಂದು ಆರೋಪಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ.

‘ವಿದ್ಯಾನಗರ ರುದ್ರಭೂಮಿಗೆ ಹೆಚ್ಚಿನ ಜನರು ಹೋಗುವುದರಿಂದ ನೆಹರುನಗರ ರುದ್ರಭೂಮಿಗೆ ಶವ ಸಂಸ್ಕಾರಕ್ಕೆ ಬರಲು ಮನಸ್ಸು ಮಾಡುತ್ತಿಲ್ಲ. ಈ ಕಟ್ಟಡ ಸರಿಯಾಗಿ ಬಳಕೆಯಾಗುವಂತೆ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಆ ವಾರ್ಡಿನ ನಗರಸಭೆ ಸದಸ್ಯ ಕುಮಾರ ಬೋರಕರ ಪ್ರತಿಕ್ರಿಯಿಸಿದರು.

*
ನೆಹರುನಗರ ರುದ್ರಭೂಮಿ ಸಮಿತಿಯವರ ಜತೆ ಮಾತನಾಡಿ, ರುದ್ರಭೂಮಿಯನ್ನು ಸಾರ್ವಜನಿಕರು ಬಳಕೆ ಮಾಡುವಂತೆ ಆಗಲು ಪ್ರಯತ್ನಿಸುತ್ತೇನೆ.
-ಕುಮಾರ್ ಬೋರಕರ, ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT