ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನದಲ್ಲಿ ಪರಿಷ್ಕೃತ ದಾಖಲೆ ಇಲ್ಲದಿದ್ದರೆ ಕ್ರಮ

ಪ್ರಸ್ತುತ ವಾಸದ ವಿಳಾಸ, ವಾಹನದ ಮಾಲೀಕತ್ವ ಬದಲಾವಣೆ ಕಡ್ಡಾಯ: ಎಸ್.ಪಿ
Last Updated 15 ಜೂನ್ 2022, 13:49 IST
ಅಕ್ಷರ ಗಾತ್ರ

ಕಾರವಾರ: ‘ವಾಹನದ ದಾಖಲೆಯಲ್ಲಿ ಮಾಲೀಕರ ಪರಿಷ್ಕೃತ (ಅಪ್‌ಡೇಟ್) ವಿಳಾಸವಿರಬೇಕು. ಬಳಸಿದ ವಾಹನವನ್ನು ಖರೀದಿಸಿದ್ದರೆ, ಮಾಲೀಕತ್ವದ ಬದಲಾವಣೆಯನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಇದಕ್ಕಾಗಿ ಪ್ರಾದೇಶಿಕ ಸಾರಿಗೆ ಇಲಾಖೆಯ (ಆರ್.ಟಿ.ಒ) ಕಚೇರಿಯಲ್ಲಿ ಜೂನ್ 30ರವರೆಗೆ ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾಹನಗಳ ಅಪಘಾತವಾದಾಗ, ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಅಥವಾ ಮತ್ಯಾವುದೇ ಅಪರಾಧಗಳ ಸಂದರ್ಭದಲ್ಲಿ ವಾಹನದ ಮಾಲೀಕರ ವಿಳಾಸವನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಅವರ ವಾಸ್ತವ್ಯ ಮತ್ತು ದಾಖಲೆಗಳಲ್ಲಿರುವ ವಿಳಾಸ ತಾಳೆಯಾಗುವುದಿಲ್ಲ. ಸಂಚಾರ ನಿಯಮಗಳ ಉಲ್ಲಂಘನೆಯಾದಾಗ ತಪ್ಪಿತಸ್ಥರಿಗೆ ದಂಡ ವಿಧಿಸಿ ನೋಟಿಸ್ ಕಳುಹಿಸಲೂ ಸಾಧ್ಯವಾಗುತ್ತಿಲ್ಲ’ ಎಂದು ವಿವರಿಸಿದರು.

‘ವಾಹನಗಳನ್ನು ಬೇರೆಯವರಿಗೆ ಮಾರಾಟ ಮಾಡಿದವರು ಖರೀದಿಸಿದವರ ಹೆಸರಿಗೆ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಇಲ್ಲದಿದ್ದರೆ ನಿಯಮಗಳ ಉಲ್ಲಂಘನೆಯ ಸಂದರ್ಭದಲ್ಲಿ ಮೂಲ ಮಾಲೀಕರ ಹೆಸರಿಗೇ ನೋಟಿಸ್‌ಗಳು ಹೋಗುತ್ತವೆ. ಅಲ್ಲದೇ ತಪ್ಪು ಮಾಡಿದವರು ಸಿಗದಿದ್ದಾಗ ಅನಿವಾರ್ಯವಾಗಿ ಮೂಲ ಮಾಲೀಕರು ಹೊಣೆಗಾರರಾಗುತ್ತಾರೆ’ ಎಂದು ತಿಳಿಸಿದರು.

‘ಈ ಸಮಸ್ಯೆಯನ್ನು ತಪ್ಪಿಸಲು ಕಾರವಾರ, ಹೊನ್ನಾವರ, ಶಿರಸಿ ಮತ್ತು ದಾಂಡೇಲಿ ಆರ್.ಟಿ.ಒ ಕಚೇರಿಗಳಲ್ಲಿ ಏಕ ಗವಾಕ್ಷಿ ತೆರೆಯಲಾಗಿದೆ. ವಿಳಾಸ ಬದಲಾವಣೆಗಾಗಿ ಫಾರ್ಮ್ ನಂಬರ್ 33, ವಾಹನ ನೋಂದಣಿ ಪ್ರಮಾಣ ಪತ್ರ, ವಿಮೆ ಪ್ರಮಾಣ ಪತ್ರ, ಹೊಗೆ ತಪಾಸಣಾ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪ್ರಸ್ತುತ ವಿಳಾಸ ದೃಢೀಕರಣ ಪತ್ರ ಅಥವಾ ವಾಸ ಸ್ಥಳ ಪ್ರಮಾಣ ಪತ್ರವನ್ನು ಸಲ್ಲಿಸಬೇಕು’ ಎಂದು ಹೇಳಿದರು.

ಆರ್.ಟಿ.ಒ ಅಧಿಕಾರಿ ರಾಮಕೃಷ್ಣ ರೈ ಮಾತನಾಡಿ, ‘ದ್ವಿಚಕ್ರ ವಾಹನಗಳ ನೋಂದಣಿ ವಿಳಾಸವನ್ನು ಅರ್ಜಿ ಸಲ್ಲಿಸಿ ಮೂರು ದಿನಗಳ ಒಳಗಾಗಿ ಮಾಡಿಕೊಡಲು ಪ್ರಯತ್ನಿಸಲಾಗುವುದು. ನಾಲ್ಕು ಚಕ್ರಗಳ ವಾಹನಗಳಿಗೆ ಸ್ವಲ್ಪ ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ಆಯಾ ತಾಲ್ಲೂಕಿನವರು ತಮ್ಮ ವ್ಯಾಪ್ತಿಯ ಆರ್.ಟಿ.ಒ ಕಚೇರಿಯನ್ನು ಸಂಪರ್ಕಿಸಬೇಕು’ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದ್ರಿನಾಥ ಇದ್ದರು.

‘ಶೀಘ್ರವೇ ವಾಹನ ಸಂಚಾರ’:

‘ನಗರದ ರಾಷ್ಟ್ರೀಯ ಹೆದ್ದಾರಿಯ ಫ್ಲೈ ಓವರ್‌ನ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಸದ್ಯವೇ ಅನುವು ಮಾಡಿಕೊಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಪ್ರಾಯೋಗಿಕವಾಗಿ ವಾಹನಗಳ ಸಂಚಾರ ಮಾಡಲಾಗುತ್ತದೆ’ ಎಂದು ಡಾ.ಸುಮನ್ ಪೆನ್ನೇಕರ್ ತಿಳಿಸಿದರು.

‘ಕಾರವಾರ ನಗರದಲ್ಲಿ ಪಾವತಿಸಿ ವಾಹನಗಳ ನಿಲುಗಡೆಗೆ ಸಂಬಂಧಿಸಿದ ನಿಯಮವನ್ನು ಸಂಬಂಧಿಸಿದ ಸಮಿತಿಯ ಮೂಲಕವೇ ಜಾರಿ ಮಾಡಲಾಗುತ್ತದೆ. ಸದ್ಯಕ್ಕೆ ಅದರ ಬಗ್ಗೆ ನಿರ್ಧಾರವಾಗಿಲ್ಲ. ಸಾರ್ವಜನಿಕರಿಗೆ ಮಾಹಿತಿ ನೀಡಿಯೇ ನಿಯಮ ಜಾರಿಗೆ ಬರಲಿದೆ’ ಸ್ಪಷ್ಟಪಡಿಸಿದರು.

–––––

* ಜೂನ್ ಅಂತ್ಯದ ನಂತರ ಪೊಲೀಸ್ ಸಿಬ್ಬಂದಿ ವಾಹನಗಳ ದಾಖಲೆ ಪರಿಶೀಲನೆ ಮಾಡಲಿದ್ದಾರೆ. ಆಗ ವಿಳಾಸ ಪರಿಷ್ಕರಣೆ ಆಗಿರದಿದ್ದರೆ ಕ್ರಮ ಕೈಗೊಳ್ಳಲಾಗುವುದು.

– ಡಾ.ಸುಮನ್ ಪೆನ್ನೇಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT