ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ ಪುರಸಭೆಯ ಉರ್ದು ನಾಮಫಲಕ ತೆರವು

ಅಗತ್ಯವಿದ್ದರೆ ಠರಾವು ಸ್ವೀಕರಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ಜಿಲ್ಲಾಧಿಕಾರಿ ಸಲಹೆ
Last Updated 30 ಜೂನ್ 2022, 14:58 IST
ಅಕ್ಷರ ಗಾತ್ರ

ಭಟ್ಕಳ: ಪುರಸಭೆ ಕಚೇರಿ ಎದುರು ಅಳವಡಿಸಿದ ಉರ್ದು ನಾಮಫಲಕವನ್ನು ಪೊಲೀಸ್ ಸಹಕಾರದೊಂದಿಗೆ ಗುರುವಾರ ಮಧ್ಯಾಹ್ನ ಅಗ್ನಿಶಾಮಕ ಸಿಬ್ಬಂದಿ ತೆರವುಗೊಳಿಸಿದರು.

ಉರ್ದು ನಾಮಫಲಕ ತೆರವಿಗೆ ಮಂಗಳವಾರ ಮುಂದಾದಾಗ ಮುಸ್ಲಿಂ ಸಮುದಾಯದವರು ಪುರಸಭೆ ಕಚೇರಿ ಎದುರು ಗುಂಪು ಸೇರಿ ಅಡ್ಡಪಡಿಸಿದ್ದರು. ಪುರಸಭೆ ಅಧ್ಯಕ್ಷರು ಮೂರು ದಿನದೊಳಗೆ ತುರ್ತು ಸಭೆ ಸೇರಿ ಉರ್ದು ನಾಮಫಲಕ ತೆಗೆಯುವ ಬಗ್ಗೆ ನಿರ್ಣಯ ಕೈಗೊಳ್ಳುವುದಾಗಿ ಹೇಳಿದ್ದರು. ಅದರಂತೆ ಗುರುವಾರ ಸಂಜೆ 4 ಗಂಟೆಗೆ ಸದಸ್ಯರ ತುರ್ತುಸಭೆ ಕರೆಯಲಾಗಿತ್ತು. ಸಭೆ ಸೇರುವ ಮುನ್ನವೇ ಮಧ್ಯಾಹ್ನ 2.30ಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಪೊಲೀಸ್ ಸಹಕಾರದೊಂದಿಗೆ ಪುರಸಭೆ ಎದುರು ಅಳವಡಿಸಿದ ಉರ್ದು ನಾಮಫಲಕ ತೆರವುಗೊಳಿಸಿದರು.

ಜಿಲ್ಲಾಧಿಕಾರಿ ಭೇಟಿ:ಗುರುವಾರ ಬೆಳಿಗ್ಗೆ ಭಟ್ಕಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಮೊದಲು ಅಧಿಕಾರಿಗಳ ಸಭೆ ನಡೆಸಿದರು. ನಂತರ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಸೀಂಜೀ ಹಾಗೂ ಆಯ್ದ ಸದಸ್ಯರ ಜೊತೆ ಸಭೆ ನಡೆಸಿದರು.

‘ಸರ್ಕಾರದ ನಿಯಮದ ಪ್ರಕಾರ ಸರ್ಕಾರಿ ಕಚೇರಿಗಳಿಗೆ ಕನ್ನಡ ಹಾಗೂಇಂಗ್ಲಿಷ್ ನಾಮಫಲಕ ಅಳವಡಿಸಲು ಮಾತ್ರ ಅವಕಾಶ ಇದೆ. ಹಾಗಾಗಿ ಉರ್ದು ನಾಮಫಲಕ ತೆಗೆಯುವಂತೆ’ ಜಿಲ್ಲಾಧಿಕಾರಿ ಆದೇಶ ನೀಡಿದರು.

ಇದಕ್ಕೆ ಪುರಸಭೆ ಅಧ್ಯಕ್ಷ ಪ್ರತಿರೋಧ ವ್ಯಕ್ತಪಡಿಸಿದರು. ಆಗ ಜಿಲ್ಲಾಧಿಕಾರಿ, ‘ನಿಮಗೆ ಉರ್ದು ಭಾಷೆಯಲ್ಲಿ ನಾಮಫಲಕ ಹಾಕಬೇಕಾದ ಅಗತ್ಯ ಇದ್ದಲ್ಲಿ ಸಭೆಯಲ್ಲಿ ಠರಾವು ಸ್ವೀಕರಿಸಿ. ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ’ ಎಂದು ಸೂಚಿಸಿದರು. ಇದರಿಂದ ಸಮಾಧಾನಗೊಳ್ಳದ ಪುರಸಭೆ ಅಧ್ಯಕ್ಷ ಸಭೆಯಿಂದ ನಿರ್ಗಮಿಸಿದರು.

ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುತ್ತಿರುವಾಗಲೇ ಪುರಸಭೆ ಎದುರು ಅಳವಡಿಸಿದ್ದ ನಾಮಫಲಕವನ್ನು ಅಗ್ನಿಶಾಮಕ ಸಿಬ್ಬಂದಿ ತೆರವು ಮಾಡಿದರು.

ತುರ್ತು ಸಭೆ:ಉರ್ದು ನಾಮಫಲಕ ತೆರವಿನ ನಂತರ ಸಭೆ ನಡೆಸಿದ ಪುರಸಭೆ ಸದಸ್ಯರು, ಸದಸ್ಯರ ನಿರ್ಣಯಕ್ಕೆವಿರುದ್ಧವಾಗಿ ಉರ್ದು ನಾಮಫಲಕ ತೆರವು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ನಿರ್ಣಯಕ್ಕೆ ಖಂಡನೆ ವ್ಯಕ್ತಪಡಿಸಿದ ಮುಸ್ಲಿಂ ಸದಸ್ಯರು, ಇದರವಿರುದ್ಧ ಕಾನೂನು ಹೋರಾಟ ಮಾಡುವುದಕ್ಕೆ ಸಭೆಯಲ್ಲಿ ತೀರ್ಮಾನಿಸಿದರು.

ಸರ್ಕಾರಿ ನಿಯಮದಂತೆ ಉರ್ದು ನಾಮಫಲಕ ತೆರವು ಮಾಡಿರುವ ಜಿಲ್ಲಾಧಿಕಾರಿ ಆದೇಶವನ್ನು ಹಿಂದೂ ಹಾಗೂ ಕ್ರಿಶ್ಚಿಯನ್ ಸದಸ್ಯರು ಸ್ವಾಗತಿಸಿದರು. ಮುಸ್ಲಿಂ ಸದಸ್ಯರ ನಿರ್ಣಯವನ್ನು ವಿರೋಧಿಸಿ ಲಿಖಿತ ಮನವಿ ನೀಡಿದರು.

ಬಿಗಿ ಬಂದೊಬಸ್ತ್‌:ಉರ್ದು ನಾಮಫಲಕ ತೆರವು ಮಾಡುತ್ತಿದ್ದಂತೆಯೇ ಪೊಲೀಸರು ಪುರಸಭೆ ಕಚೇರಿಯನ್ನು ಸುತ್ತವರಿದರು. ಸಾರ್ವಜನಿಕರು ಅಲ್ಲಲ್ಲಿ ಗುಂಪು ಸೇರದಂತೆ ಎಚ್ಚರಿಕೆ ವಹಿಸಲಾಗಿದೆ. ಪಟ್ಟಣದ ಆಯಾ ಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಶಾಂತಿ ಕದಡುವ ಸಂದೇಶಗಳನ್ನುಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವವರ ವಿರುದ್ಧ ನಿಗಾ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT