ವಿನಾಶದ ಅಂಚಿನ ರಾಂಪತ್ರೆ ಜಡ್ಡಿ ಕಾಡು: ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಒತ್ತಾಯ

ಭಾನುವಾರ, ಮೇ 26, 2019
26 °C

ವಿನಾಶದ ಅಂಚಿನ ರಾಂಪತ್ರೆ ಜಡ್ಡಿ ಕಾಡು: ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಒತ್ತಾಯ

Published:
Updated:
Prajavani

ಶಿರಸಿ: ವಿನಾಶದ ಅಂಚಿನಲ್ಲಿರುವ ರಾಂಪತ್ರೆ ಜಡ್ಡಿ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ, ವೃಕ್ಷಲಕ್ಷ ಆಂದೋಲನದ ನೇತೃತ್ವದಲ್ಲಿ ವಿವಿಧ ಪರಿಸರ ಸಂಘಟನೆಗಳು ಬುಧವಾರ ಇಲ್ಲಿ ಡಿಸಿಎಫ್ ಎಸ್.ಜಿ.ಹೆಗಡೆ ಅವರಿಗೆ ಮನವಿ ಸಲ್ಲಿಸಿದವು.

ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆಗಳಲ್ಲಿ ರಾಂಪತ್ರ ಜಡ್ಡಿ(myristica swamp)ಗಳಿವೆ. ಕೆನರಾ ವೃತ್ತದಲ್ಲಿ ಗುರುತಿಸಿರುವ ಗುರುತಿಸಿರುವ ಈ ಪ್ರದೇಶಗಳನ್ನು ವಜ್ಯಜೀವಿ ಕಾಯ್ದೆಯಡಿ ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕು. ಸೋಂದಾದ ಮುಂಡಿಗೆಜಡ್ಡಿಯನ್ನು ಸಹ ಈ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಬೇಕು. ರಾಂಪತ್ರೆ ಜಡ್ಡಿಗಳ ಸುತ್ತ ಬೇಲಿ ರಚಿಸಿ, ನಾಮಫಲಕ ಹಾಕಬೇಕು. ಸ್ಥಳೀಯ ವನವಾಸಿ, ರೈತ ಸಮುದಾಯದ ಸಹಭಾಗಿತ್ವದಲ್ಲಿ ಜಡ್ಡಿಗಳ ಉಳಿವಿಗೆ ನಿರಂತರ ಅಭಿಯಾನ ನಡೆಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ‘ಪಶ್ಚಿಮ ಘಟ್ಟದ ಕಾಡುಗಳು ಅನೇಕ ಜೀವಸಂಕುಲಕ್ಕೆ ಆಶ್ರಯ ನೀಡಿವೆ.  ಬಹುಕಾಲದಿಂದ ಇಲ್ಲಿ ವಾಸಿಸುತ್ತಿರುವ ಜನಸಮುದಾಯಗಳಿಗೆ ನೆಲೆ ನೀಡಿ, ಅವರ ಜೀವನ ಮತ್ತು ಸಂಸ್ಕೃತಿಗೆ ಆಧಾರವಾಗಿವೆ. ಇಲ್ಲಿನ ಪರಿಸರ ವ್ಯವಸ್ಥೆಯಲ್ಲಿ ಅಪರೂಪದ ರಾಂಪತ್ರೆ ಜಡ್ಡಿ ಕಾಡುಗಳು ಇವೆ. ರಾಂಪತ್ರೆ ಜಡ್ಡಿಗಳು ಮಳೆ ಕಾಡುಗಳಲ್ಲಿ ಕಂಡುಬರುವ ಜೌಗು ಮಣ್ಣಿನಿಂದ ಕೂಡಿರುವ ಪ್ರದೇಶಗಳು. ಹಲವು ನದಿ, ತೊರೆಗಳಿಗೆ ಇವು ಆಸರೆಯಾಗಿರುವ ರಾಂಪತ್ರೆ ಜಡ್ಡಿಯಲ್ಲಿ, ಇಲ್ಲಿಗಷ್ಟೇ ಸೀಮಿತವಾಗಿರುವ ಜೀವಸಂಕುಲಗಳನ್ನು ಕಾಣಬಹುದು’ ಎಂದರು.

ಇಲ್ಲಿನ ವೃಕ್ಷಗಳು ವಿಶಿಷ್ಟವಾದ ಬೇರುಗಳನ್ನು ಬೆಳೆಸಿಕೊಳ್ಳುವ ಮೂಲಕ ಈ ಪರಿಸರ ವ್ಯವಸ್ಥೆಗೆ ಹೊಂದಿಕೊಂಡಿವೆ. ರಾಂಪತ್ರೆ ಕುಟುಂಬಕ್ಕೆ ಸೇರಿದ ವೃಕ್ಷಗಳು ಹೂವು ಬಿಡುವ ಸಸ್ಯಗಳ ವಿಕಾಸದ ಪ್ರಾಥಮಿಕ ಹಂತದಲ್ಲಿ ಕಂಡುಬರುವುದರಿಂದ ಜೀವಂತ ವಸ್ತುಸಂಗ್ರಹಾಲಯಗಳೆಂದು ಜೀವವಿಜ್ಞಾನಿಗಳಿಂದ ಗುರುತಿಸಲ್ಪಟ್ಟಿವೆ. ರಾಂಪತ್ರೆ, ಒಂದಂಕಿ, ಕೆಂಪು ನೇರಳೆ, ಪಾಂಡವರ ಅಡಿಕೆ, ಕಾನ ಹೊಳೆಗೇರು, ನೀರಟ್ಟೆ ಮೊದಲಾದ 50ಕ್ಕೂ ಅಧಿಕ ಅಪರೂಪವಾದ ಸಸ್ಯ ಪ್ರಭೇದಗಳು ಇಲ್ಲಿ ಕಂಡು ಬರುತ್ತವೆ ಎಂದು ತಿಳಿಸಿದರು.

ಲೈಫ್ ಸಂಸ್ಥೆಯ ಮುಖ್ಯಸ್ಥ ನರಸಿಂಹ ವಾನಳ್ಳಿ, ಯೂತ್ ಫಾರ್ ಸೇವಾದ ಸಂಚಾಲಕ ಉಮಾಪತಿ ಭಟ್ಟ, ವನ್ಯಜೀವಿತಜ್ಞ ಶ್ರೀಧರ ಭಟ್ಟ, ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಶ್ರೀಕಾಂತ ಗುನಗ, ಪ್ರಮುಖರಾದ ವಿಶ್ವನಾಥ ಬುಗಡಿಮನೆ, ಗಣಪತಿ ಕೆ, ರತ್ನಾಕರ ಹೆಗಡೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !