ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗದಲ್ಲಿ ದಿನಸಿ ಸಾಮಗ್ರಿಗೆ ಒತ್ತಾಯ

ಗ್ರಾಮಕ್ಕೆ ಬರದಂತೆ ರಸ್ತೆ ಬಂದ್ ಮಾಡಿದ ಗ್ರಾಮಸ್ಥರು
Last Updated 27 ಮಾರ್ಚ್ 2020, 13:45 IST
ಅಕ್ಷರ ಗಾತ್ರ

ಮುಂಡಗೋಡ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮನೆ ಬಾಗಿಲಿಗೆ ತರಕಾರಿ, ಹಾಲು, ದಿನಸಿ ಸಾಮಗ್ರಿಗಳನ್ನು ಸರಬರಾಜು ಮಾಡಲು ತಾಲ್ಲೂಕಾ ಆಡಳಿತ ಕೈಗೊಂಡಿರುವ ಕ್ರಮಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಶುಕ್ರವಾರದಿಂದ ಅಧಿಕೃತವಾಗಿ ಶುದ್ಧ ಕುಡಿಯುವ ನೀರು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು, ಜನರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಪಟ್ಟಣದ ಕೆಲವೆಡೆ ತರಕಾರಿ ವ್ಯಾಪಾರಸ್ಥರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಪಡೆಯುತ್ತಿದ್ದಾರೆ ಎಂದು ಜನರು ವಾಗ್ವಾದ ನಡೆಸಿದ ಘಟನೆಗಳು ಸಹ ಜರುಗಿವೆ.

'ಗ್ರಾಹಕರು ದಿನಸಿ ಸಾಮಗ್ರಿಗಳಿಗೆ ಕರೆ ಮಾಡುತ್ತಿದ್ದಾರೆ. ಕೆಲವರು ಸಾಮಗ್ರಿಗಳ ದರವನ್ನು ಕೇಳಿ ದುಬಾರಿ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಿಂದಲೂ ಸಾಮಗ್ರಿಗಳಿಗೆ ಕರೆ ಬರುತ್ತಿವೆ' ಎಂದು ರಾಮಸನ್ಸ್ ಕಿರಾಣಿ ಅಂಗಡಿಯ ಮಾಲೀಕ ರಾಜೇಶ ರಾವ್ ಹೇಳಿದರು.

144 ಕಲಂ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜನರ ಓಡಾಟ ಸಂಪೂರ್ಣವಾಗಿ ನಿಂತಿಲ್ಲ. ಕೆಲವೆಡೆ ಗ್ರಾಮಸ್ಥರು ತಮ್ಮೂರ ಗಡಿ ಭಾಗದಲ್ಲಿ ರಸ್ತೆಗೆ ಅಡ್ಡಲಾಗಿ ಮುಳ್ಳುಕಂಟಿ, ಕಟ್ಟಿಗೆ ಇಟ್ಟು ಊರಿಂದ ಯಾರೂ ಹೊರಹೋಗಬಾರದು ಮತ್ತು ಬರಬಾರದು ಎಂದು ಸ್ವಯಂ ನಿರ್ಬಂಧ ಹಾಕಿದ್ದಾರೆ. ನ್ಯಾಸರ್ಗಿ ಪ್ಲಾಟ್, ಕಾತೂರ, ಕೋಡಂಬಿ ಸೇರಿದಂತೆ ಕೆಲವೆಡೆ ಗ್ರಾಮಸ್ಥರು ರಸ್ತೆ ಬಂದ್ ಮಾಡಿದ್ದಾರೆ.

'ಕಾತೂರ ಗ್ರಾಮಕ್ಕೆ ಜನರ ಓಡಾಟ ಮುಂದುವರೆದಿತ್ತು. ಇದರಿಂದ ಗ್ರಾಮಸ್ಥರೇ ಮುಂದಾಗಿ, ಇಲ್ಲಿಂದ ಬೊಮ್ಮನಳ್ಳಿ, ನಾಗನೂರು, ಹಾರವಳ್ಳಿ ಕಡೆ ಹೋಗುವ ರಸ್ತೆಗಳನ್ನು ಬಂದ್ ಮಾಡಿದ್ದಾರೆ' ಎಂದು ಸ್ಥಳೀಯ ನಿವಾಸಿ ಅಜ್ಜಪ್ಪ ಹೇಳಿದರು.

ಗ್ರಾಮೀಣ ಭಾಗದ ಬೇಡಿಕೆ: ಹಳ್ಳಿಯಲ್ಲಿರುವ ದಿನಸಿ ಅಂಗಡಿಗಳಲ್ಲಿ ಸಾಮಗ್ರಿಗಳು ಸಿಗುತ್ತಿಲ್ಲ. ಕೃಷಿ ಕುಟುಂಬದವರು ಹೆಚ್ಚಾಗಿ ವಾರದ ಸಂತೆ ಮಾಡುತ್ತಾರೆ. ಆದರೆ, ವಾರದ ಸಂತೆಯೂ ರದ್ದಾಗಿದ್ದರಿಂದ ಸಾಮಗ್ರಿಗಳ ಅವಶ್ಯಕತೆ ತೀರಾ ಇದೆ ಎಂದು ಚಿಗಳ್ಳಿ ಗ್ರಾಮಸ್ಥ ರಮೇಶ ಮಾನೋಬಾಯಿ ಹೇಳಿದರು.

'ಗ್ರಾಮೀಣ ಭಾಗದಲ್ಲಿ ದಿನಸಿ ಸಾಮಗ್ರಿ ಪೂರೈಕೆ ಮಾಡುವ ಕುರಿತು ಶುಕ್ರವಾರ ಎಲ್ಲ ಗ್ರಾಮ ಪಂಚಾಯ್ತಿ ಪಿಡಿಒಗಳ ಸಭೆ ನಡೆಸಲಾಗಿದೆ. ಅಂಗಡಿಗಳನ್ನು ತೆರೆಯದೇ ವಾಹನದ ಮೂಲಕ ಸಾಮಗ್ರಿ ಪೂರೈಸಲು ತಿಳಿಸಲಾಗಿದೆ. ನಿಗದಿಪಡಿಸಿದ ವಾಹನಗಳಿಗೆ ಪಾಸ್ ವಿತರಣೆ ಮಾಡಲಾಗುವುದು' ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT