ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟದಲ್ಲಿದ್ದವರನ್ನು ಗ್ರಾ.ಪಂ ಮಟ್ಟದಲ್ಲಿ ಗುರುತಿಸಿ

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಆಗ್ರಹ
Last Updated 19 ಏಪ್ರಿಲ್ 2020, 11:57 IST
ಅಕ್ಷರ ಗಾತ್ರ

ಶಿರಸಿ: ಸರ್ಕಾರ ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ ರೇಷನ್ ವಿತರಿಸುತ್ತಿದ್ದರೂ, ಕಾರ್ಡ್ ಇಲ್ಲದ ಅನೇಕರು ತೊಂದರೆಯಲ್ಲಿ ಸಿಲುಕಿದ್ದಾರೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅಂತಹವರನ್ನು ಗುರುತಿಸಿ, ನೆರವು ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಒತ್ತಾಯಿಸಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಿಡಿಒ, ಟಾಸ್ಕ್‌ಫೋರ್ಸ್‌ ನೇತೃತ್ವದಲ್ಲಿ ಪಂಚಾಯ್ತಿ ಸದಸ್ಯರಿಂದ ಮಾಹಿತಿ ಪಡೆದು, ಸಮಸ್ಯೆಯಲ್ಲಿ ಸಿಲುಕಿಕೊಂಡವರಿಗೆ ಸರ್ಕಾರ ಸಹಾಯ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಅನಾನಸ್, ಕಲ್ಲಂಗಡಿ, ಜೋಳ ಬೆಳೆದ ರೈತರು ಕೈಸುಟ್ಟುಕೊಂಡಿದ್ದಾರೆ. ಕೃಷಿ, ತೋಟಗಾರಿಕಾ ಬೆಳೆಗಳು ಗದ್ದೆಯಲ್ಲಿ ಕೊಳೆಯುತ್ತಿವೆ. ಲಾಕ್‌ಡೌನ್ ನಂತರ ಸರ್ಕಾರ ಸಂಬಂಧಪಟ್ಟ ಇಲಾಖೆಯಿಂದ ಸಮೀಕ್ಷೆ ನಡೆಸಿ, ಬೆಳೆ ನಷ್ಟದ ಪರಿಹಾರ ನೀಡಬೇಕು. ದೇಶದ ಬೆನ್ನೆಲುಬಾಗಿರುವ ರೈತರಿಗೆ ಮುಂಗಾರಿನ ಬೆಳೆಗಳನ್ನು ಬೆಳೆಯಲು ಅಗತ್ಯ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕವು ಅಗತ್ಯವಿರುವವರಿಗೆ ಹಣ್ಣು–ಹಂಪಲು, ದಿನಸಿ ಸಾಮಗ್ರಿಗಳನ್ನು ವಿತರಿಸುತ್ತಿದೆ. ಸಂಕಷ್ಟಕ್ಕೆ ಒಳಗಾದವರನ್ನು ಸಾಧ್ಯವಾದಷ್ಟು ತಲುಪಲು ಪ್ರಯತ್ನಿಸಲಾಗುತ್ತಿದೆ. ಅಧಿಕಾರದಲ್ಲಿರುವ ಜನಪ್ರತಿನಿಧಿಗಳಿಗೆ ಜನಸೇವೆ ಮಾಡಲು ಅವಕಾಶವಾಗಿದ್ದು, ಇಂತಹ ಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕು. ಜನರು ಮನೆಯಲ್ಲೇ ಇದ್ದು, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸಬೇಕು. ಉತ್ತರ ಕನ್ನಡ ಕೊರೊನಾಮುಕ್ತ ಜಿಲ್ಲೆಯಾಗಬೇಕು ಎಂದು ಆಶಿಸಿದರು.

ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಣೆ ಮಾಡಲು ಕಾಂಗ್ರೆಸ್ ಎಲ್ಲ ರೀತಿಯ ಸಹಕಾರ ನೀಡಲಿದೆ. ಜಿಲ್ಲಾಡಳಿತ ನೀಡುವ ಕಟ್ಟುನಿಟ್ಟಿನ ಸೂಚನೆಯನ್ನು ಜನರು ಪಾಲಿಸಬೇಕು. ಮಂಗನ ಕಾಯಿಲೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಎಸ್.ಕೆ.ಭಾಗವತ, ಜಗದೀಶ ಗೌಡ, ದೀಪಕ ದೊಡ್ಡೂರು, ಬಸವರಾಜ ದೊಡ್ಮನಿ, ಶ್ರೀನಿವಾಸ ನಾಯ್ಕ, ಪ್ರಸನ್ನ ಶೆಟ್ಟಿ, ಶೈಲೇಶ ಜೋಗಳೇಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT