ಬುಧವಾರ, ನವೆಂಬರ್ 20, 2019
27 °C

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Prajavani

ಶಿರಸಿ: ನಗರ ಹಾಗೂ ಗ್ರಾಮೀಣ ಭಾಗದ ರಸ್ತೆಗಳು ಹೊಂಡ–ಗುಂಡಿಗಳಿಂದ ತುಂಬಿವೆ. ಅಪಘಾತ ಸಂಭವಿಸುವ ಮುನ್ನ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ, ಸಾರ್ವಜನಿಕರು ಬುಧವಾರ ಇಲ್ಲಿ ಕೆಲ ಕಾಲ ಬಸ್‌ ಸಂಚಾರ ತಡೆದು ಪ್ರತಿಭಟಿಸಿದರು.

‘ಮುಖ್ಯ ರಸ್ತೆಗಳಾದ ಶಿರಸಿ-ಕುಮಟಾ, ಶಿರಸಿ–ಸಿದ್ದಾಪುರ, ಶಿರಸಿ-ಯಲ್ಲಾಪುರ, ಶಿರಸಿ- ಹುಬ್ಬಳ್ಳಿ ಮಾತ್ರವಲ್ಲ, ಒಳ ರಸ್ತೆಗಳು, ಗ್ರಾಮೀಣ ರಸ್ತೆಗಳು ಹೊಂಡದಿಂದ ತುಂಬಿವೆ. ಇದರಿಂದ ಅಪಘಾತವೂ ಹೆಚ್ಚುತ್ತಿದೆ. ರಸ್ತೆಗಳು ದುಃಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟ ಶಾಸಕ, ಸಂಸದರು ಇದಕ್ಕೆ ಕ್ರಮವಹಿಸಲು ಸೂಚಿಸದಿರುವುದು ವಿಪರ್ಯಾಸ. ಜೀವಕ್ಕೆ ಅಪಾಯ ಸಂಭವಿಸುವ ಮುನ್ನ ರಸ್ತೆ ದುರಸ್ತಿ ಮಾಡಬೇಕು. ನಾಗರಿಕರ ಸಮಸ್ಯೆ ಪರಿಹರಿಸದಿದ್ದರೆ ಅನಾಹುತ ಸಂಭವಿಸಿದರೆ, ಜನಪ್ರತಿನಿಧಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಸಿದರು. 

ಹಳೇ ಬಸ್ ನಿಲ್ದಾಣದ ಎದುರು ಬಸ್‌ಗಳನ್ನು ತಡೆದು, ನ್ಯಾಯ ಒದಗಿಸುವಂತೆ ಘೋಷಣೆ ಕೂಗಿದರು. ಮಹಾದೇವ ಚಲವಾದಿ ನೇತೃತ್ವದ ಪ್ರತಿಭಟನೆಯಲ್ಲಿ ಪ್ರಮುಖರಾದ ಘನಶ್ಯಾಮ ಪ್ರಭು, ಸಂಧ್ಯಾ ಕುರ್ಡೇಕರ, ಕಿರಣ ಬೆಲ್ಲದ, ವಸಂತೋಷ ಸಿರ್ಸಿಕರ, ತಾರಾ ನಾಯ್ಕ, ನರಸಿಂಹ ನಾಯ್ಕ, ಈಶ್ವರ ಆಚಾರಿ, ಜಗದೀಶ ಪಾಲೇಕರ್, ಮುನಾಫ್, ರಾಘವೇಂದ್ರ ಅಲಗೇರಿಕರ, ಮನೋಹರ ಕಂಬ್ಳಿ, ಕಲಾಲ್ ಇದ್ದರು.

ಪ್ರತಿಕ್ರಿಯಿಸಿ (+)