ಭಾನುವಾರ, ಆಗಸ್ಟ್ 1, 2021
27 °C
ಗೊಬ್ಬರ ಖರೀದಿಸಲು ಇಲ್ಲಿನ ಸೊಸೈಟಿಗಳಿಗೆ ಬರುವ ಹೊರ ಜಿಲ್ಲೆ ಕೃಷಿಕರು

ಶಿರಸಿ | ಯೂರಿಯಾಕ್ಕಾಗಿ ರೈತರ ಅಲೆದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಬನವಾಸಿ ಭಾಗದಲ್ಲಿ ಯೂರಿಯಾ ಗೊಬ್ಬರದ ಕೊರತೆಯಿಂದಾಗಿ ರೈತರು ಪ್ರತಿನಿತ್ಯ ಸೊಸೈಟಿಗಳಿಗೆ ಅಲೆದಾಡುವಂತಾಗಿದೆ. ಹೊರ ಜಿಲ್ಲೆಗಳ ರೈತರು ಇಲ್ಲಿನ ಸೊಸೈಟಿಗಳಿಗೆ ಬಂದು ಯೂರಿಯಾ ಖರೀದಿಸುವುದು ಹೆಚ್ಚಾಗಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸ್ಥಳೀಯ ಕೃಷಿಕರು ಆರೋಪಿಸಿದ್ದಾರೆ.

ಕಳೆದ ಒಂದು ವಾರದಿಂದ ತಾಲ್ಲೂಕಿನ ಪೂರ್ವಭಾಗದಲ್ಲಿ ಯೂರಿಯಾ ಗೊಬ್ಬರದ ಕೊರತೆ ಎದುರಾಗಿದೆ. ದಾಸನಕೊಪ್ಪ, ಕೊರ್ಲಕಟ್ಟಾ, ಅಂಡಗಿ ಮೊದಲಾದ ಸೊಸೈಟಿಗಳಲ್ಲಿ ಕೇಳಿದರೆ, ಯೂರಿಯಾ ಸಂಗ್ರಹವಿಲ್ಲ ಎನ್ನುತ್ತಾರೆ ಎಂದು ರೈತರು ಆರೋಪಿಸಿದ್ದಾರೆ.

‘ಮೆಕ್ಕೆಜೋಳಕ್ಕೆ ತೆನೆ ಬರುವ ಹಂತದಲ್ಲಿ ರೈತರು ಯೂರಿಯಾ ಗೊಬ್ಬರ ಹಾಕುತ್ತಾರೆ. ಇದು ಜೋಳಕ್ಕೆ ಗೊಬ್ಬರ ನೀಡುವ ಅವಧಿಯಾಗಿದ್ದು, ಯೂರಿಯಾಕ್ಕೆ ಬೇಡಿಕೆ ಹೆಚ್ಚಾಗಿದೆ. ಭತ್ತ ಹಾಗೂ ಮೆಕ್ಕೆಜೋಳ ಬೆಳೆಗಾರರು ಯೂರಿಯಾಕ್ಕಾಗಿ ಗೊಬ್ಬರದ ಅಂಗಡಿಗಳಲ್ಲಿ ವಿಚಾರಿಸಿ, ಬರಿಗೈಯಲ್ಲಿ ಹಿಂದಿರುಗುವಂತಾಗಿದೆ. ಕೆಲವು ಸೊಸೈಟಿಯಲ್ಲಿ ಅಲ್ಪ ಪ್ರಮಾಣದ ಸಂಗ್ರಹ ಮಾತ್ರವಿದೆ. ಹೀಗಾಗಿ, ರೈತರು ಕೇಳಿದಷ್ಟು ಗೊಬ್ಬರ ಸಿಗುತ್ತಿಲ್ಲ’ ಎನ್ನುತ್ತಾರೆ ಕೃಷಿಕ ಸಂತೋಷ ಕಲಕರಡಿ.

‘ಕೆಲವು ಕಡೆಗಳಲ್ಲಿ ಯೂರಿಯಾ ಸಂಗ್ರಹವಿದೆ. ಆದರೆ, ಇದೇ ಸಂದರ್ಭವನ್ನು ಬಳಸಿಕೊಂಡು, ಯೂರಿಯಾ ಜೊತೆ ಅಗತ್ಯವಿಲ್ಲದ ಬೇರೆ ಗೊಬ್ಬರಗಳನ್ನು ಸಹ ಖರೀದಿಸುವಂತೆ ಕೆಲವು ಸೊಸೈಟಿಗಳು ರೈತರ ಮೇಲೆ ಒತ್ತಡ ಹಾಕುತ್ತವೆ. ಯೂರಿಯಾ ಅಗತ್ಯವಿರುವ ರೈತರು, ಅನಿವಾರ್ಯವಾಗಿ ಹಣ ಕೊಟ್ಟು, ಡಿಎಪಿ, ಪೊಟಾಷ್ ಅಥವಾ ಇನ್ನಾವುದೋ ಖಾಲಿಯಾಗದೇ ಉಳಿದಿರುವ ಗೊಬ್ಬರ ಖರೀದಿಸಬೇಕಾಗಿದೆ. ಸಣ್ಣ ರೈತರಿಗೆ ಇದು ಭಾರವಾಗಿದೆ’ ಎಂದು ಅವರು ಬೇಸರಿಸಿಕೊಂಡರು.

‘ಮೆಕ್ಕೆಜೋಳ ಹೆಚ್ಚು ಬೆಳೆಯುವ ಸೊರಬ, ಹಾನಗಲ್ ಭಾಗದ ರೈತರು ಇಲ್ಲಿನ ಸೊಸೈಟಿಗಳಿಗೆ ಬಂದು ಯೂರಿಯಾ ಖರೀದಿಸುತ್ತಾರೆ. ಇದರಿಂದ ನಮ್ಮ ರೈತರಿಗೆ ಈಗ ಈ ಗೊಬ್ಬರ ಸಿಗುತ್ತಿಲ್ಲ. ಇಲ್ಲಿನ ರೈತರಿಗೆ ಆದ್ಯತೆ ನೀಡಿ ಸೊಸೈಟಿಗಳು ಗೊಬ್ಬರ ವಿತರಿಸಬೇಕು’ ಎಂದು ರೈತ ಮಂಜು ಚನ್ನಯ್ಯ ಆಗ್ರಹಿಸಿದರು.

‘ಬನವಾಸಿ ಭಾಗದಲ್ಲಿ ಯೂರಿಯಾ ಕೊರತೆಯಿಲ್ಲ, ಸಂಗ್ರಹ ಕಡಿಮೆ ಇರಬಹುದು. ಎರಡು ವಾರಗಳಲ್ಲಿ 100 ಟನ್‌ನಷ್ಟು ಯೂರಿಯಾ ಪೂರೈಕೆ ಮಾಡಲಾಗಿದೆ. ರೈತರು ಯೂರಿಯಾವನ್ನೇ ಯಾಕೆ ಹೆಚ್ಚು ಬಳಸುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ. ಸುಫಲಾ, ಡಿಎಪಿ ಗೊಬ್ಬರಗಳಲ್ಲಿ ಸಹ ಸಾರಜನಕದ ಪ್ರಮಾಣ ಇರುತ್ತದೆ. ಇದನ್ನು ಕೂಡ ಪರ್ಯಾಯವಾಗಿ ಬಳಸಬಹುದು. ಕಳೆದ ವರ್ಷ ಈ ವೇಳೆಗೆ ತಾಲ್ಲೂಕಿನಲ್ಲಿ ಸುಮಾರು 750 ಟನ್ ಯೂರಿಯಾ ಪೂರೈಕೆಯಾಗಿತ್ತು. ಈ ವರ್ಷ ಈವರೆಗೆ 1000 ಟನ್ ಸರಬರಾಜಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು