ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಭೂಮಿ ಹಕ್ಕು ಹೋರಾಟಗಾರರಿಂದ ಉರುಳು ಸೇವೆ

ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಕೆ ನಿರ್ಣಯಿಸಲು ಆಗ್ರಹ
Last Updated 13 ಸೆಪ್ಟೆಂಬರ್ 2022, 15:36 IST
ಅಕ್ಷರ ಗಾತ್ರ

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಸರ್ಕಾರದ ಗಮನಸೆಳೆಯಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರು ಮಂಗಳವಾರ ಇಲ್ಲಿನ ಮಾರಿಕಾಂಬಾ ದೇವಾಲಯದ ಎದುರು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಉರುಳು ಸೇವೆ ಮಾಡಿದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಉರುಳು ಸೇವೆ ಮಾಡಿ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಒದಗಿಸಿ ನ್ಯಾಯ ನೀಡುವಂತೆ ಒತ್ತಾಯಿಸಿದರು.

ಬಳಿಕ ನಡೆದ ಸಮಾವೇಶದಲ್ಲಿ ವಿಧಾನಸಭೆ ಅಧಿವೇಶನದಲ್ಲಿ, ‘ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟ್‍ನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ತೀರ್ಮಾನ ತೆಗೆದುಕೊಳ್ಳಬೇಕು. ನಿರ್ಣಯ ಕೈಗೊಳ್ಳದಿದ್ದರೆ ಅಧಿವೇಶನದ ನಂತರ ಜನಪ್ರತಿನಿಧಿಗಳ ಮನೆಯ ಎದುರು ಧರಣಿ ಮಾಡಬೇಕು’ ಎಂಬ ನಿರ್ಣಯ ಕೈಗೊಳ್ಳಲಾಯಿತು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಅರಣ್ಯವಾಸಿ ವಿರೋಧಿ ನೀತಿ ಖಂಡಿಸುವ ಜತೆಗೆ ಅರಣ್ಯವಾಸಿಗಳ ರಕ್ಷಣೆಗೆ ಹೋರಾಟಗಾರರ ವೇದಿಕೆಯು ಬದ್ಧವಾಗಿರಬೇಕು. ಸುಪ್ರೀಂ ಕೋರ್ಟ್‍ನಲ್ಲಿ ಅರಣ್ಯವಾಸಿಗಳ ಪರ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಮುಂದುವರೆಸಬೇಕು. ಅವರ ಮಾರ್ಗದರ್ಶನದಲ್ಲಿ ಕಾನೂನು ಹೋರಾಟ ನಡೆಸುವ ಜತೆಗೆ ಜನಜಾಗೃತಿಗೆ ಹಳ್ಳಿ ಕಡೆ ನಡೆ ಕಾರ್ಯಕ್ರಮ ಸಂಘಟಿಸಬೇಕು’ ಎಂಬ ನಿರ್ಣಯವನ್ನು ಸಮಾವೇಶ ಕೈಗೊಂಡಿತು.

ರವೀಂದ್ರ ನಾಯ್ಕ ಮಾತನಾಡಿ, ‘ಅರಣ್ಯವಾಸಿಗಳಿಗೆ ನ್ಯಾಯ ಒದಗಿಸುವ ಇಚ್ಛಾಶಕ್ತಿಯನ್ನು ಜನಪ್ರತಿನಿಧಿಗಳು ತೋರುತ್ತಿಲ್ಲ. ಕಾನೂನಿನ ಅಜ್ಞಾನ ಒಂದೆಡೆಯಾದರೆ, ಹೋರಾಟ ಉಪೇಕ್ಷಿಸುವ ಕೆಲಸವೂ ನಡೆಯುತ್ತಿದೆ’ ಎಂದು ಆರೋಪಿಸಿದರು.

ಸಭೆಯಲ್ಲಿ ಜಿ.ಎಂ.ಶೆಟ್ಟಿ ಅಚವೆ, ಸುರೇಶ್ ಮೇಸ್ತಾ, ಚಂದ್ರಕಾಂತ ಕೋಚರೆಕರ, ರಮಾನಂದ ನಾಯ್ಕ, ಎಂ.ಆರ್.ನಾಯ್ಕ, ಶಿವಾನಂದ ಪೂಜಾರಿ, ಭೀಮಶಿ ವಾಲ್ಮೀಕಿ, ಯಂಕು ಮರಾಠಿ, ಯಾಕೂಬ್, ಸುಶೀಲಾ ನಾಯ್ಕ, ಬಾಲಚಂದ್ರ ಶೆಟ್ಟಿ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT