ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಲ್‌ ಕಾರ್ಡ್‌ದಾರರಿಗೆ ಸೌಲಭ್ಯ ವಿಸ್ತರಿಸಲು ಚಿಂತನೆ

ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕಿ ಕೆ.ಲೀಲಾವತಿ ಹೇಳಿಕೆ
Last Updated 15 ಅಕ್ಟೋಬರ್ 2019, 18:45 IST
ಅಕ್ಷರ ಗಾತ್ರ

ಶಿರಸಿ: ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಮೀಸಲಿಡುವ ಅನುದಾನದ ಸದ್ಬಳಕೆಯಾಗಬೇಕು. ಆಯಾ ವರ್ಷವೇ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು ಎಂದು ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕಿ ಕೆ.ಲೀಲಾವತಿ ಹೇಳಿದರು.

ಮಂಗಳವಾರ ಇಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಅನೇಕ ಅಂಗವಿಕಲರು ಎಪಿಎಲ್ ಕಾರ್ಡ್ ಹೊಂದಿದ್ದಾರೆ. ಅವರಿಗೆ ನೆರವಾಗಲು ಸರ್ಕಾರ ಮಟ್ಟದಲ್ಲಿ ಚರ್ಚಿಸಲಾಗುವುದು. ಅಂಗವಿಕಲ ಮಕ್ಕಳ ಶಾಲೆ ನಡೆಸುವ ಸಂಸ್ಥೆಗಳಿಂದ ಅನುದಾನಕ್ಕೆ ಬೇಡಿಕೆ ಬಂದರೆ, ಆದ್ಯತೆ ಮೇಲೆ ಬಿಡುಗಡೆ ಮಾಡಲಾಗುವುದು’ ಎಂದರು.

ಗ್ರಾಮೀಣ ಅಂಗವಿಕಲ ಪುನರ್ವಸತಿ ಕಾರ್ಯಕರ್ತರು ಹಲವಾರು ಬೇಡಿಕೆಗಳನ್ನು ನಿರ್ದೇಶಕರ ಮುಂದಿಟ್ಟರು. ಗ್ರಾಮೀಣ ಅಂಗವಿಕಲ ಪುನರ್ವಸತಿ ಕಾರ್ಯಕರ್ತರಿಗೆ ಗೌರವಧನ ಹೆಚ್ಚಿಸಬೇಕು. ಪ್ರಸ್ತುತ ₹ 3000 ಮಾತ್ರ ನೀಡಲಾಗುತ್ತಿದೆ. ಇಷ್ಟು ಕಡಿಮೆ ಮೊತ್ತದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟ. ವಿಶಿಷ್ಟ ಗುರುತಿನಚೀಟಿ ವಿತರಣೆಗೆ ವೇಗ ನೀಡಬೇಕು. ಸೌಲಭ್ಯ ವಿತರಣೆಗೆ ಆದಾಯ ಮಿತಿ ಸಡಿಲ ಮಾಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ ಬದನಗೋಡ ವ್ಯಾಪ್ತಿಯಲ್ಲಿ ಅಂಗವಿಕಲರ ಸ್ವಸಹಾಯ ಸಂಘಗಳ ಸಭೆ ನಡೆಸಲು ಸಮುದಾಯ ಭವನಕ್ಕೆ ಜಾಗ ಮಂಜೂರಾಗಿದೆ. ಆದರೆ ಕಟ್ಟಡದ ಅನುದಾನ ಬಿಡುಗಡೆ ಆಗಿಲ್ಲ. ತಕ್ಷಣ ಅನುದಾನ ಬಿಡುಗಡೆ ಮಾಡಿದರೆ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಕಾರ್ಯಕರ್ತರ ಗೌರವಧನ ಹೆಚ್ಚಿಸುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಲೀಲಾವತಿ ಸ್ಪಷ್ಟಪಡಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜೇಂದ್ರ ಬೇಕಲ್, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಸಿಡಿಪಿಓ ಡಿ.ಎಂ.ಭಟ್ಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT