ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕು ಚಲಾವಣೆಗೆ ಸಜ್ಜಾಗಿದೆ ಉತ್ತರ ಕನ್ನಡ; ಜಿಲ್ಲೆಯಲ್ಲಿ 15.52 ಲಕ್ಷ ಮತದಾರರು

17ನೇ ಲೋಕಸಭೆಗೆ ಮತದಾನ 23ರಂದು
Last Updated 22 ಏಪ್ರಿಲ್ 2019, 12:21 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಏ.23ರಂದು ನಡೆಯಲಿದೆ. ಕ್ಷೇತ್ರದಲ್ಲಿ ಒಟ್ಟು 15.52 ಲಕ್ಷ ಮತದಾರರಿದ್ದಾರೆ. 1,922 ಮತಗಟ್ಟೆಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಹಕ್ಕು ಚಲಾಯಿಸಬಹುದಾಗಿದೆ.

ನ್ಯಾಯಸಮ್ಮತ ಹಾಗೂ ಪಾರದರ್ಶಕ ಮತದಾನಕ್ಕೆ ತಿಂಗಳಿಂದಸಿದ್ಧತೆ ಮಾಡಿಕೊಂಡಿರುವಚುನಾವಣಾ ಸಿಬ್ಬಂದಿ, ಸೋಮವಾರ ಉತ್ಸಾಹದಿಂದ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ವಿದ್ಯುನ್ಮಾನ ಮತಯಂತ್ರಗಳು ಹಾಗೂ ಮತ ಖಾತರಿ ಯಂತ್ರ (ವಿವಿಪ್ಯಾಟ್) ಯಂತ್ರಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು.

ಮಸ್ಟರಿಂಗ್‌ ಅಚ್ಚುಕಟ್ಟು:ಎಂಟೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ ಒಂದೊಂದು ಮಸ್ಟರಿಂಗ್‌ ಹಾಗೂ ಡಿಮಸ್ಟರಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತಯಂತ್ರಗಳ ವಿತರಣೆ ಪ್ರಕ್ರಿಯೆ ಸೋಮವಾರ ಬೆಳಿಗ್ಗೆ 6ರಿಂದ ಸಂಜೆ 4 ಗಂಟೆಯವರೆಗೂ ನಡೆಯಿತು.

ಕಾರವಾರ ಸೇಂಟ್ ಮೈಕೆಲ್ ಕಾನ್ವೆಂಟ್ ಹೈಸ್ಕೂಲ್‌ನಲ್ಲಿ ಚುನಾವಣಾ ಸಿಬ್ಬಂದಿಗೆ ಹಮ್ಮಿಕೊಳ್ಳಲಾದ ಮೂರನೇ ಹಂತದ ತರಬೇತಿಯನ್ನುಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶಕುಮಾರ್ ಪರಿಶೀಲಿಸಿದರು. ಈ ಸಂದರ್ಭದಲ್ಲಿಸುದ್ದಿಗಾರರ ಜತೆಮಾತನಾಡಿ, ‘ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಸಂಪೂರ್ಣ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಚುನಾವಣಾ ಸಿಬ್ಬಂದಿಗೆ ಅಗತ್ಯ ಸಕಲ ಸೌಲಭ್ಯಗಳನ್ನೂ ನೀಡಲಾಗಿದೆ’ ಎಂದರು.

ಮಸ್ಟರಿಂಗ್‌ ಕೇಂದ್ರಕ್ಕೆ ಬಂದ ಸಿಬ್ಬಂದಿಗೆ ಬೆಳಗಿನ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರವಾರ– ಅಂಕೋಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 262 ಮತಗಟ್ಟೆಗಳಿಗೆ ಅಗತ್ಯವಿರುವ ಪರಿಕರ ವಿತರಣೆ ಅಚ್ಚುಕಟ್ಟಾಗಿ ನಡೆಯಿತು. ಮತಗಟ್ಟೆಗೆ ಅನುಗುಣವಾಗಿ ನಿಗದಿಪಡಿಸಿದ್ದ ಕೊಠಡಿಯಲ್ಲಿ ಕುಳಿತ ಸಿಬ್ಬಂದಿಗೆ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್‌ ಹಾಗೂ ಮತಗಟ್ಟೆಗೆ ಅಗತ್ಯವಿರುವ ಪರಿಕರಗಳನ್ನು ವಿತರಿಸಿದರು.

ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಇಬ್ಬರು ಸಹಾಯಕರನ್ನು ಪ್ರತಿ ಮತಗಟ್ಟೆಗೂ ನಿಯೋಜಿಸಲಾಗಿದೆ. ಭದ್ರತೆಗೆ ಪೊಲೀಸ್‌ ಸಿಬ್ಬಂದಿ ಕೂಡ ಇರಲಿದ್ದಾರೆ. ಮತಯಂತ್ರ ಹಾಗೂ ಪರಿಕರಗಳನ್ನು ಸ್ವೀಕರಿಸಿದ ಸಿಬ್ಬಂದಿಯ ಮೊಗದಲ್ಲಿ ಮಂದಹಾಸ ಮೂಡಿತ್ತು. ಮತಯಂತ್ರ ಜೋಡಣೆ, ನಿರ್ವಹಣೆ ಹಾಗೂ ಸಾಗಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತರಬೇತಿ ನೀಡಿದರು. ಮಧ್ಯಾಹ್ನದ ಊಟ ಮುಗಿಸಿಕೊಂಡು ಸಂಜೆಯ ವೇಳೆಗೆ ಮತಗಟ್ಟೆಗೆ ಹೊರಟರು.

ಬೆಳಿಗ್ಗೆ 6ರಿಂದ ಅಣಕು ಮತದಾನ

ಮತಗಟ್ಟೆಯಲ್ಲಿ ಮಂಗಳವಾರ ನಸುಕಿನಿಂದಲೇ ಮತದಾನದ ಪ್ರಕ್ರಿಯೆ ಆರಂಭವಾಗಲಿದೆ. ಬೆಳಿಗ್ಗೆ 6ರಿಂದ ಅಣಕು ಮತದಾನ ನಡೆಯಲಿದೆ. ಎಲ್ಲ ಅಭ್ಯರ್ಥಿಗಳ ಏಜೆಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಯಲಿದೆ. ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳು ಕನಿಷ್ಠ ಒಂದೊಂದು ಮತಹಾಕಿ ಪರಿಶೀಲನೆ ಮಾಡಬಹುದಾಗಿದೆ. ಅಣಕು ಮತದಾನಕ್ಕೆ ಗರಿಷ್ಠ 50 ಮತಗಳನ್ನು ಹಾಕಲು ಅವಕಾಶವಿದೆ. ಎಲ್ಲವೂ ಸರಿಯಾಗಿದ್ದರೆ 7ಗಂಟೆಯಿಂದ ಮತದಾನಮಾಡಲಾಗುತ್ತದೆ.

ಪೊಲೀಸರಿಗೆ ಕಿಟ್ ವಿತರಣೆ: ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಪೊಲೀಸರಿಗೆ ಪ್ರತ್ಯೇಕವಾಗಿ ಕಿಟ್‌ವೊಂದನ್ನು ವಿತರಿಸಲಾಗಿದೆ. ಅದರಲ್ಲಿ ಡ್ರೈಫ್ರೂಟ್ಸ್,ಸಾಬೂನು,ಸೊಳ್ಳೆಯಿಂದ ರಕ್ಷಣೆಗೆ ‘ಒಡೋಮಸ್ ಕ್ರೀಮ್’ ಸೇರಿದಂತೆ ವಿವಿಧ ವಸ್ತುಗಳಿವೆ. ಇದೇ ಮೊದಲ ಬಾರಿಗೆ ಇಂತಹ ಕ್ರಮ ಕೈಗೊಳ್ಳಲಾಗಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಖಾನಾಪುರ ವಿಧಾನಸಭಾ ಕ್ಷೇತ್ರ ಸೇರಿ, ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಹೊಂದಿದೆ.ಒಟ್ಟು 13 ಉಮೇದುವಾರರು ಕಣದಲ್ಲಿದ್ದು, ಮತದಾನದ ಮುನ್ನಾ ದಿನವಾದ ಸೋಮವಾರ ಅಭ್ಯರ್ಥಿಗಳು, ಬೆಂಬಲಿಗರು ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT