ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಹಾಲ್ನೊರೆಯ ಸುಂದರಿಯರ ಸೊಬಗು

ದಟ್ಟ ಕಾನನ, ಮೊರೆವ ಜಲಪಾತಗಳೇ ಜಿಲ್ಲೆಯ ವಿಶೇಷತೆಗಳು
Last Updated 26 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಶಿರಸಿ: ಮುಗಿಲೆತ್ತರ ಮರಗಳು, ಹಾಲ್ನೊರೆಯಂತಹ ಸುಂದರ ಜಲಪಾತಗಳು ಉತ್ತರ ಕನ್ನಡಕ್ಕೆ ಬರುವ ಪ್ರವಾಸಿಗರನ್ನು ಸಮ್ಮೋಹನಗೊಳಿಸುತ್ತವೆ. ಯಾವ ರಸ್ತೆ ಹಿಡಿದು ಸಾಗಿದರೂ ಪ್ರಕೃತಿ ಸೃಷ್ಟಿಸಿರುವ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು.

ಮಲೆನಾಡಿನ ಘಟ್ಟ ಪ್ರದೇಶ ಹಾಗೂ ಕರಾವಳಿ ಭಾಗದಲ್ಲಿ ಹಲವಾರು ಜಲಪಾತಗಳಿವೆ. ಮೈದುಂಬಿ ಧುಮ್ಮಿಕ್ಕುವ ಜಲಪಾತಗಳನ್ನು ನೋಡುವುದೇ ಸೊಬಗು. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಲ್ಲಿರುವ ವಿಶ್ವವಿಖ್ಯಾತ ಜೋಗ ಜಲಪಾತದ ಸಮೀಪ ಇರುವ ಹುಸೂರು ಫಾಲ್ಸ್ (ನಿಪ್ಲಿ) ಸಹಸ್ರಾರು ಜನರನ್ನು ಜನರನ್ನು ಸೆಳೆಯುತ್ತಿದೆ.

ಶಿರಸಿ–ಕುಮಟಾ ರಸ್ತೆಯಲ್ಲಿ ನಡುವೆ ಚಾರಣದ ಖುಷಿಯ ಜತೆಗೆ ಜಲಪಾತದ ಸವಿ ಅನುಭವಿಸಬಹುದಾದ ಜಲಪಾತ ಬೆಣ್ಣೆಹೊಳೆ. ಅಚ್ಚ ಬಿಳಿಸುಂದರಿಯಂತೆ ಕಂಗೊಳಿಸುವ ಮುರೇಗಾರ್ ಫಾಲ್ಸ್, ಶಿವಗಂಗಾ ಫಾಲ್ಸ್ ಅನ್ನು ಶಿರಸಿಗೆ ಬಂದವರು ವೀಕ್ಷಿಸಬಹುದು. ಶಿರಸಿ–ಸಿದ್ದಾಪುರ ನಡುವೆ ಉಂಚಳ್ಳಿಯಲ್ಲಿ ಅಘನಾಶಿನಿ 116 ಮೀಟರ್ ಎತ್ತರದಿಂದ ಜಿಗಿದು ಜಲಪಾತವನ್ನು ಸೃಷ್ಟಿಸಿದ್ದಾಳೆ. ಬಂಡೆಯ ಮೇಲೆ ತೆವಳುವ ಅಘನಾಶಿನಿ, ಅವಳೆದುರೇ ಆಗಾಗ ಮೂಡಿ ಮಾಯವಾಗುವ ಕಾಮನಬಿಲ್ಲು ಅದ್ಭುತ ಲೋಕವನ್ನೇ ಸೃಷ್ಟಿಸಿದೆ.

ಸಿದ್ದಾಪುರದಿಂದ 20 ಕಿ.ಮೀ ದೂರದಲ್ಲಿದೆ ಬುರುಡೆ ಫಾಲ್ಸ್. ಇಲ್ಲಿಗೆ ಹೋಗಲು ಮೈಯಲ್ಲಿ ಕಸುವಿರಬೇಕು. ಬಂಡೆಗಳ ಆಸುಪಾಸು ಕೈಯೂರಿರುವ ಗಿಡಗಳನ್ನು ಬಳಸಿ ಕಡಿದಾದ ಇಳಿಜಾರಿನಲ್ಲಿ ಹಜ್ಜೆಯೂರಿ, ಆರು ಕಿ.ಮೀ ಸಾಗಿದರೆ, ನಡೆದ ದಣಿವು ಮರೆಸುವ ಬುರಡೆ ಜಲಪಾತ ತೆರೆದುಕೊಳ್ಳುತ್ತದೆ.

ಯಲ್ಲಾಪುರದಿಂದ 30 ಕಿ.ಮೀ ದೂರದ ಸಾತೊಡ್ಡಿ ಫಾಲ್ಸ್ ಬತ್ತದ ಜಲಧಾರೆ. ನೀರಿನೊಂದಿಗೆ ಆಟವಾಡುವ ಮಜ ನೀಡುವ ಫಾಲ್ಸ್ ಇದಾದರೆ, ದೂರದಿಂದಲೇ ಕಣ್ಸೆಳೆಯುವ ಜಲಧಾರೆ ಮಾಗೋಡು. ಲಾಲಗುಳಿ, ಶಿರ್ಲೆ ಜಲಪಾತಗಳು ಇಲ್ಲಿಗೆ ಸಮೀಪದಲ್ಲಿಯೇ ಇವೆ. ಕಾರವಾರ–ಯಲ್ಲಾಪುರ ತಾಲ್ಲೂಕುಗಳ ಗಡಿಯಲ್ಲಿರುವ ‘ಕಾನೂರು ವಜ್ರ’ 64 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಕಾರವಾರದಿಂದ 32 ಕಿ.ಮೀ ದೂರದ ಅಣಶಿ ಫಾಲ್ಸ್, ಶಿರಸಿ–ಅಂಕೋಲಾ ತಾಲ್ಲೂಕುಗಳ ಗಡಿಯಲ್ಲಿರುವ ವಿಭೂತಿ ಫಾಲ್ಸ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ.

ಇವು ಜಿಲ್ಲೆಯ ಪ್ರಮುಖ ಜಲಪಾತಗಳಾದರೆ, ಇನ್ನು ಚಿಕ್ಕಪುಟ್ಟ ಜಲಪಾತಗಳಿಗೆ ಲೆಕ್ಕವಿಲ್ಲ. ಮಳೆಗಾಲದಲ್ಲಿ ಗುಡ್ಡದ ತುದಿಯಿಂದ ಸರಸರನೆ ಜಾರುತ್ತ ಭೋರ್ಗರೆಯುವ ಸಣ್ಣ ತೊರೆಗಳು ದಾರಿಗುಂಟ ಕಾಣಸಿಗುತ್ತವೆ. ಜಿಲ್ಲೆಯ ಜಲಪಾತಗಳನ್ನು ವೀಕ್ಷಿಸಲು ಅಕ್ಟೋಬರ್‌ನಿಂದ ಫೆಬ್ರುವರಿ ತಿಂಗಳು ಪ್ರಶಸ್ತ ಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT