ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ವಿಧಾನ ಪರಿಷತ್ ಕ್ಷೇತ್ರ: ಗೆದ್ದವರಿಗೆ ಇತಿಹಾಸ ರಚನೆಯ ಅವಕಾಶ!

ಉತ್ತರ ಕನ್ನಡ ವಿಧಾನಪರಿಷತ್ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್ ನೇರ ಹಣಾಹಣಿ, ಸ್ಪರ್ಧೆಯಲ್ಲಿಲ್ಲದ ಜೆಡಿಎಸ್‌
Last Updated 3 ಡಿಸೆಂಬರ್ 2021, 20:30 IST
ಅಕ್ಷರ ಗಾತ್ರ

ಕಾರವಾರ: ಈ ಬಾರಿಯ ವಿಧಾನಪರಿಷತ್ ಚುನಾವಣೆಗೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಐವರು ಕಣದಲ್ಲಿದ್ದಾರೆ. ಆದರೆ, ನೇರ ಹಣಾಹಣಿ ಏರ್ಪಟ್ಟಿರುವುದು ಬಿಜೆಪಿಯ ಗಣಪತಿ ಉಳ್ವೇಕರ್ ಮತ್ತು ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಅವರ ನಡುವೆ. ಸ್ಪರ್ಧೆಯಲ್ಲಿಲ್ಲದ ಜೆಡಿಎಸ್ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲದಿಂದ ಇನ್ನೂ ಹೊರಬಂದಿಲ್ಲ.

ಈ ಕ್ಷೇತ್ರದಲ್ಲಿ ಮೂರು ಬಾರಿ ಕಾಂಗ್ರೆಸ್ ಹಾಗೂ ಎರಡು ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಿಜೆಪಿಗೆ ಒಮ್ಮೆಯೂ ಗೆಲುವು ದಕ್ಕಿಲ್ಲ. ಹಿಂದಿನ ಎರಡು ಅವಧಿಗೆ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಶ್ರೀಕಾಂತ ಘೊಟ್ನೇಕರ್, ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ಅವರೀಗ ಹಳಿಯಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.

ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಕೆಲವು ಸಲ ಶಾಸಕ ಆರ್.ವಿ.ದೇಶಪಾಂಡೆ ಜೊತೆಗೆ ವೈಮನಸ್ಸು ಉಂಟಾಗಿದ್ದೂ ಇದೆ. ಆದರೂ ಈ ಬಾರಿಯ ವಿಧಾನಪರಿಷತ್ ಚುನಾವಣೆಯನ್ನು ದೇಶಪಾಂಡೆ ಅವರದ್ದೇ ಮುಂದಾಳತ್ವದಲ್ಲಿ ಕಾಂಗ್ರೆಸ್ ಎದುರಿಸುತ್ತಿದೆ. ಹಾಗಾಗಿ ಅವರ ಶಕ್ತಿ ಪ್ರದರ್ಶನಕ್ಕೆ ಈ ಚುನಾವಣೆ ವೇದಿಕೆ ಎಂಬಂತಿದೆ. ಯಾರನ್ನು ಕಣಕ್ಕಿಳಿಸುವುದು ಎಂಬ ಜಿಜ್ಞಾಸೆಯಲ್ಲಿ ಅಂತಿಮವಾಗಿ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಅವರನ್ನೇ ಪಕ್ಷವು ಅಭ್ಯರ್ಥಿಯನ್ನಾಗಿ ಘೋಷಿಸಿತು.

ಶಿರಸಿ–ಸಿದ್ದಾಪುರ ವಿಧಾನಸಭೆ ಕ್ಷೇತ್ರದ ಚುನಾವಣೆ, ಯಲ್ಲಾಪುರ–ಮುಂಡಗೋಡ ಕ್ಷೇತ್ರದ ಉಪ ಚುನಾವಣೆಗಳಲ್ಲಿ ಸ್ಪರ್ಧಿಸಿ ಅವರು ಸೋತಿದ್ದರು. ಆದರೆ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕೆಲಸ ಮಾಡಿದ್ದ ಭೀಮಣ್ಣ ಅವರ ಜನಪ್ರಿಯತೆ ವಿಧಾನಪರಿಷತ್‌ ಚುನಾವಣೆಯಲ್ಲಿ ಕೆಲಸ ಮಾಡಬಹುದು ಎಂಬ ನಂಬಿಕೆ ಪಕ್ಷದ ಮುಖಂಡರದ್ದು.

ಬಂಡಾಯದ ನಡುವೆ: ಇತ್ತ ಪಕ್ಷದ ಅಭ್ಯರ್ಥಿಯ ಆಯ್ಕೆಗೆ ಬಿಜೆಪಿ ನಡೆಸಿದ ಸಭೆಯಲ್ಲಿ 24 ಆಕಾಂಕ್ಷಿಗಳು ಮುಂದೆ ಬಂದಿದ್ದರು. ಕೊನೆಗೆ ಮೀನುಗಾರರ ಮುಖಂಡ ಗಣಪತಿ ಉಳ್ವೇಕರ್ ಅವರಿಗೆ ಟಿಕೆಟ್ಘೋಷಣೆಯಾಯಿತು. ಹಿಂದಿನ ಚುನಾವಣೆ
ಗಳಲ್ಲಿಯೂ ಸ್ಪರ್ಧಿಸಿ ಸೋತಿದ್ದವರಿಗೆ ಮತ್ತೆ ಟಿಕೆಟ್ ನೀಡಿದ್ದು ಕೆಲವು ಉಮೇದುವಾರರ ಕಣ್ಣು ಕೆಂಪಾಗಿಸಿತು. ಟಿಕೆಟ್ ನಿರೀಕ್ಷೆಯಲ್ಲಿದ್ದ ಉದ್ಯಮಿ ಭಾಸ್ಕರ ನಾರ್ವೇಕರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾದರು. ಕೊನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಇತರರು ಮನವೊಲಿಸಿ ಒಗ್ಗಟ್ಟಿನ ಮಂತ್ರ ಜಪಿಸಿದರು.

ಬಿಜೆಪಿಯ ಮತ್ತೊಬ್ಬ ಮುಖಂಡ ದತ್ತಾತ್ರೇಯ ನಾಯ್ಕ ಕೂಡ ಪಕ್ಷೇತರರಾಗಿ ಸ್ಪರ್ಧೆಯಲ್ಲಿದ್ದಾರೆ. ಆದರೆ, ಅವರನ್ನು ಪಕ್ಷದ ಮುಖಂಡರು ನಿರ್ಲಕ್ಷಿಸಿದ್ದಾರೆ.

ಸಚಿವ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಮತ ಯಾಚನೆ ನಡೆಯುತ್ತಿದೆ. ಶಾಸಕ ಬಿ.ಎಸ್.ಯಡಿಯೂರಪ್ಪ ಅವರನ್ನು ಯಲ್ಲಾಪುರಕ್ಕೆ ಕರೆಯಿಸಿ ಸಮಾವೇಶ ಹಮ್ಮಿಕೊಂಡು ಶಕ್ತಿ ಪ್ರದರ್ಶನವನ್ನೂ ಮಾಡಲಾಗಿದೆ. ಉಳಿದಂತೆ, ‘ರೈತ ಭಾರತ’ ಪಕ್ಷದ ಅಭ್ಯರ್ಥಿಯಾಗಿ ಸೋಮಶೇಖರ ವಿ.ಎಸ್. ಹಾಗೂ ಪಕ್ಷೇತರರಾಗಿ ಈಶ್ವರ ಗೌಡ ಕೂಡ ಕಣದಲ್ಲಿದ್ದಾರೆ.

* ಜಿ.ಪಂ ಸದಸ್ಯನಾಗಿ ಪಂಚಾಯತ್ ರಾಜ್ ಬಗ್ಗೆ ಅರಿತಿದ್ದೇನೆ. ಈ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದ ಬಿಜೆಪಿ, ಉದ್ದೇಶಪೂರ್ವಕ ಜಿ.ಪಂ, ತಾ.‍ಪಂ ಚುನಾವಣೆ ವಿಳಂಬ ಮಾಡುತ್ತಿದೆ.

-ಭೀಮಣ್ಣ ನಾಯ್ಕ, ಕಾಂಗ್ರೆಸ್ ಅಭ್ಯರ್ಥಿ

* ಜಿಲ್ಲೆಯ ಶೇ 70ರಷ್ಟು ಮತದಾರರು ಬಿ.ಜೆ.ಪಿ ಬೆಂಬಲಿಸುತ್ತಾರೆ. ಈ ಹಿಂದೆ ಆಯ್ಕೆಯಾದವರ ಕಾರ್ಯವೈಖರಿಯಿಂದ ಬೇಸತ್ತು ಪಕ್ಷಕ್ಕೆ ಮತ ನೀಡಲಿದ್ದಾರೆ.

-ಗಣಪತಿ ಉಳ್ವೇಕರ್, ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT