ಗುರುವಾರ , ಆಗಸ್ಟ್ 11, 2022
26 °C
ನಾಲ್ಕು ವರ್ಷಗಳಲ್ಲಿ ಅಧಿಕ ಪ್ರಮಾಣ: ಎಸ್‌.ಪಿ ಶಿವಪ್ರಕಾಶ ದೇವರಾಜು ಮಾಹಿತಿ

ಕಳವಾದ ವಸ್ತುಗಳಲ್ಲಿ ಶೇ 71ರಷ್ಟು ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಜಿಲ್ಲೆಯಲ್ಲಿ ಈ ವರ್ಷ ಕಳವಾದ ಪ್ರಕರಣಗಳಲ್ಲಿ ಶೇ 71ರಷ್ಟು ಮಾಲನ್ನು ಜಪ್ತಿ ಮಾಡಲಾಗಿದೆ. ಈ ಪ್ರಮಾಣವು ನಾಲ್ಕು ವರ್ಷಗಳಲ್ಲಿ ಅಧಿಕವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ವರ್ಷ 54 ಮನೆ ಕಳವು ಪ್ರಕರಣಗಳಲ್ಲಿ 28ರಲ್ಲಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂಬತ್ತು ದರೋಡೆ ಪ್ರಕರಣಗಳ ಪೈಕಿ ಆರರಲ್ಲಿ ಮಾಲನ್ನು ಜಪ್ತಿ ಮಾಡಲಾಗಿದೆ. ಇದೇರೀತಿ, ಸರಗಳವು, ಮನೆಗಳಲ್ಲಿ ಕಳವು ಮಾಡಿದ ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ’ ಎಂದರು.

ಗೂಂಡಾ ಕಾಯ್ದೆ

‘ಜಿಲ್ಲೆಯಲ್ಲಿ ಈವರೆಗೆ ನಾಲ್ವರ ವಿರುದ್ಧ ಗೂಂಡಾ ಕಾಯ್ದೆಯನ್ನು ಪ್ರಯೋಗಿಸಲಾಗಿದೆ. ಶಿರಸಿಯ ಮಹಮ್ಮದ್ ಫಾರೂಖ್ ಪ್ರಕರಣವು ಸದ್ಯಕ್ಕೆ ಸಕ್ರಿಯವಾಗಿದೆ. ಆತನ ವಿರುದ್ಧ ನಾಲ್ಕು ಕೊಲೆ, ದರೋಡೆ, ಗಲಭೆಗೆ ಪ್ರಚೋದನೆ, ಕೊಳಚೆ ಪ್ರದೇಶದ ಅತಿಕ್ರಮಣ ಮುಂತಾದ ಪ್ರಕರಣಗಳಿವೆ. ಅಲ್ಲದೇ ಕಳೆದ ವರ್ಷ ಜನವರಿಯಲ್ಲಿ ಗಡಿಪಾರಿಗೆ ಶಿಫಾರಸು ಮಾಡಲಾಗಿತ್ತು. ಆದರೂ ಆತನ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ್ದ. ಹಾಗಾಗಿ ಗೂಂಡಾ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ವಿವರಿಸಿದರು.

‘ಪದೇಪದೇ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವ ಇಬ್ಬರ ಗಡಿಪಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಯಿಂದ ಒಪ್ಪಿಗೆ ಸಿಕ್ಕಿದ ಬಳಿಕ ಆ ಪ್ರಕ್ರಿಯೆ ಜಾರಿ ಮಾಡಲಾಗುವುದು’ ಎಂದೂ ತಿಳಿಸಿದರು.

80 ಪ್ರಕರಣ ದಾಖಲು

‘ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಸಮಾಜದಲ್ಲಿ ಅಶಾಂತಿಗೆ ಪ್ರೇರಣೆ ನೀಡುವಂಥ ಸಂದೇಶಗಳನ್ನು ಕಳುಹಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. 2017ರಿಂದ ಒಟ್ಟು 80 ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈಗ ಗ್ರಾಮ ಪಂಚಾಯಿತಿ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮತ್ತಷ್ಟು ಎಚ್ಚರಿಕೆ ವಹಿಸಲಾಗುವುದು’ ಎಂದು ಹೇಳಿದರು.

ಬೀಜವೆಸೆದು ಗಾಂಜಾ ಬೆಳೆ!

‘ಜಿಲ್ಲೆಯಲ್ಲಿ ಗಾಂಜಾವನ್ನು ಅಕ್ರಮವಾಗಿ ಬೆಳೆಯುವುದರ ವಿರುದ್ಧ ಪೊಲೀಸ್ ಕಾರ್ಯಾಚರಣೆ ಮುಂದುವರಿಯಲಿದೆ. ಈವರೆಗೆ 31 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ಶಿವಪ್ರಕಾಶ ದೇವರಾಜು ತಿಳಿಸಿದರು.

‘ಗಾಂಜಾದ ಬೀಜವನ್ನು ಕಾಡಿನ ಮಧ್ಯೆ ಖಾಲಿಯಿರುವ ಜಾಗದಲ್ಲಿ ಎಸೆದು ಸಸಿಗಳನ್ನು ಬೆಳೆಸಲಾಗುತ್ತಿದೆ. ಈ ದಂಧೆಯಲ್ಲಿ ತೊಡಗಿಕೊಂಡಿರುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆಯೊಂದಿಗೆ ಸೇರಿಕೊಂಡು ಜಂಟಿ ಸರ್ವೆ ಮಾಡಲಾಗುವುದು. ಇದರ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ ಇದ್ದರು.

ಈ ವರ್ಷ ಕಳವು ಪ್ರಕರಣದ ತನಿಖೆ: ಅಂಕಿ ಅಂಶ

165: ದಾಖಲಾದ ಪ್ರಕರಣಗಳು

77: ಪತ್ತೆಯಾದ ಪ್ರಕರಣಗಳು

₹ 2,05,75,570: ಕಳವಾದ ವಸ್ತುಗಳ ಮೌಲ್ಯ

₹ 1,47,69,599: ಜಪ್ತಿಯಾದ ವಸ್ತುಗಳ ಮೌಲ್ಯ

₹ 11,23,696: ವಾಪಸ್ ಮಾಡಿದ ವಸ್ತುಗಳ ಮೌಲ್ಯ

71%: ಪತ್ತೆಯಾದ ಒಟ್ಟು ಪ್ರಕರಣಗಳ ಪ್ರಮಾಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.