ವಿದೇಶದಿಂದ ಬಂದು ಮತ ಹಾಕಿದರು...

ಶನಿವಾರ, ಮೇ 25, 2019
33 °C

ವಿದೇಶದಿಂದ ಬಂದು ಮತ ಹಾಕಿದರು...

Published:
Updated:
Prajavani

ಶಿರಸಿ: ಯುರೋಪ್‌ನ ಜೆಕ್ ಗಣರಾಜ್ಯದಲ್ಲಿ ವಿಜ್ಞಾನಿಗಳಾಗಿರುವ ಸೌಮ್ಯಾ ಮತ್ತು ವಿನಿತ್ ಗೋಖಲೆ ದಂಪತಿ ಸ್ವದೇಶಕ್ಕೆ ಬಂದು, ಮಂಗಳವಾರ ಮತದಾನ ಮಾಡಿದರು.

ಶಿರಸಿಯ ಪ್ರಗತಿನಗರದ ಸೌಮ್ಯಾ ಅವರು ರೈತಭವನದ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಹರಿಹರದ ಮತದಾರರಾಗಿರುವ ವಿನಿತ್ ಅವರು ಪತ್ನಿ ಇಲ್ಲಿ ಮತದಾನ ಮಾಡಿದ ಮೇಲೆ ಹರಿಹರಕ್ಕೆ ತೆರಳಿ, ಅಲ್ಲಿ ಮತ ಚಲಾಯಿಸಿದರು. ‘ಮತ ಚಲಾಯಿಸುವುದು ನಮ್ಮ ಹಕ್ಕು. ಇದರಿಂದ ನಾವು ಭಾರತೀಯರೆಂಬ ಹೆಮ್ಮೆ ಮೂಡುತ್ತದೆ. ಲಕ್ಷಾಂತರ ರೂಪಾಯಿ ವೆಚ್ಚವಾದರೂ ತೊಂದರೆಯಿಲ್ಲ, ಮತ ಹಾಕಲೇಬೇಕೆಂಬ ಉದ್ದೇಶದಿಂದ ಬಂದಿದ್ದೇವೆ’ ಎಂದು ಸೌಮ್ಯಾ ಪ್ರತಿಕ್ರಿಯಿಸಿದರು.

ಬಹ್ರೇನ್‌ನಲ್ಲಿರುವ ಕಿರಣ ಉಪಾಧ್ಯಾಯ ಅವರು ಮಗ ಸಿದ್ಧಾರ್ಥ ಜತೆಗೂಡಿ ಬಂದು, ಇಲ್ಲಿನ ಗೌಡಳ್ಳಿ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಮತದಾನಕ್ಕೆಂದೇ ಊರಿಗೆ ಬಂದಿದ್ದರು. ‘ಉದ್ಯೋಗಕ್ಕಾಗಿ ವಿದೇಶದಲ್ಲಿರುವ ಅನೇಕರು ಹಕ್ಕನ್ನು ಚಲಾಯಿಸಲೆಂದೇ ಭಾರತಕ್ಕೆ ಬಂದಿದ್ದಾರೆ. ಇದು ದೇಶದ ಬಗ್ಗೆ ಅವರಿಗಿರುವ ಅಭಿಮಾನವನ್ನು ತೋರಿಸುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದರು.

ಮಳೆ ಸೃಷ್ಟಿಸಿದ ಅವಾಂತರ

ಮಧ್ಯಾಹ್ನ 2.30ರ ಸುಮಾರಿಗೆ ಸುರಿದ ಭಾರಿ ಗಾಳಿ, ಮಳೆ ಮತದಾನಕ್ಕೆ ಅಡ್ಡಿಯುಂಟುಮಾಡಿತು. ಗುಡುಗು–ಸಿಡಿಲಿನ ಆರ್ಭಟಕ್ಕೆ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು. ಮಳೆಯ ಅಬ್ಬರಕ್ಕೆ ಮಾರಿಕಾಂಬಾ ಕಾಲೇಜಿನ ಮಸ್ಟರಿಂಗ್ ಸೆಂಟರ್ ಆವರಣದ ಸಖಿ ಮತಗಟ್ಟೆ ಎದುರಿನ ಶಾಮಿಯಾನ, ಅಲ್ಲಿದ್ದ ಮಕ್ಕಳ ಆಟಿಕೆಗಳು , ಮತಗಟ್ಟೆ ಸಿಬ್ಬಂದಿ ಕುಳಿತುಕೊಳ್ಳಲು ಹಾಕಿದ್ದ ಕುರ್ಚಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಾರವಾರ ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಯ ಇನ್ನುಳಿದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳಲ್ಲಿ ಮಧ್ಯಾಹ್ನ ಮಳೆ ಸುರಿದ ಪರಿಣಾಮ ಒಂದು ತಾಸು ಮತದಾನ ಮಂದಗತಿಯಲ್ಲಿ ಸಾಗಿತು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !