ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಬಜೆಟ್ ಗಾತ್ರ ₹1,095 ಕೋಟಿ

ಅನುದಾನಗಳ ಹಂಚಿಕೆ ವಿವರಿಸಿದ ಆಡಳಿತಾಧಿಕಾರಿ ಕೆ.ಪಿ.ಮೋಹನರಾಜ್
Last Updated 7 ಏಪ್ರಿಲ್ 2022, 16:04 IST
ಅಕ್ಷರ ಗಾತ್ರ

ಕಾರವಾರ: 2022– 23ನೇ ಸಾಲಿಗೆಜಿಲ್ಲಾ ಪಂಚಾಯಿತಿಯ ಬಜೆಟ್ ಅನ್ನು ಆಡಳಿತಾಧಿಕಾರಿ ಕೆ.ಪಿ.ಮೋಹನರಾಜ್ ಗುರುವಾರ ಮಂಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಯ ಪ್ರಕಾರ ಸಲ್ಲಿಸಲಾದ ಕರಡು ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ ಅಂತಿಮ ಒಪ್ಪಿಗೆ ನೀಡಿದೆ. ಅದಕ್ಕೆ ಅಗತ್ಯವಿರುವ ಅನುದಾನವನ್ನು ಹಂಚಿಕೆ ಮಾಡಿದೆ.

ಈ ಬಾರಿ ರಾಜ್ಯ ಸರ್ಕಾರವು ಜಿಲ್ಲಾ ಪಂಚಾಯಿತಿಯ ವಿವಿಧ ಇಲಾಖೆಗಳಿಗೆ ಕಳೆದ ಆರ್ಥಿಕ ವರ್ಷ ಹಂಚಿಕೆ ಮಾಡಿದ್ದಕ್ಕಿಂತ ₹ 14.28 ಕೋಟಿ ಹೆಚ್ಚು ಅನುದಾನವನ್ನು ಒದಗಿಸಿದೆ. ಅದೇ ರೀತಿ, ತಾಲ್ಲೂಕು ಪಂಚಾಯಿತಿ ಮತ್ತು ಅವುಗಳ ಅಧೀನದಲ್ಲಿರುವ ವಿವಿಧ ಇಲಾಖೆಗಳಿಗೆ ₹ 22.38 ಕೋಟಿ ಹೆಚ್ಚು ಅನುದಾನವು ಈ ಬಾರಿ ಹಂಚಿಕೆಯಾಗಿದೆ. ಈ ಸಾಲಿನಲ್ಲಿ ಯೋಜನೆ ಲೆಕ್ಕ ಶೀರ್ಷಿಕೆ ಮತ್ತು ಯೋಜನೆಯೇತರ ಲೆಕ್ಕ ಶೀರ್ಷಿಕೆ ಎಂಬ ಪ್ರತ್ಯೇಕ ವಿಂಗಡಣೆಯಿಲ್ಲ.

ವೇತನಕ್ಕೆ ಅಧಿಕ:

ಒಟ್ಟು ಅನುದಾನದಲ್ಲಿ ಸುಮಾರು ₹ 799 ಕೋಟಿ ಮೊತ್ತವು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ‍ಪಂಚಾಯಿತಿಗಳ ಸಿಬ್ಬಂದಿಯ ವೇತನಕ್ಕಾಗಿ ಬಳಕೆಯಾಗಲಿದೆ.

ಸಾಮಾನ್ಯ ಶಿಕ್ಷಣಕ್ಕಾಗಿ ₹ 738.97 ಕೋಟಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ₹ 73.15 ಕೋಟಿ, ವೈದ್ಯಕೀಯ ಮತ್ತು ಜನಾರೋಗ್ಯಕ್ಕೆ ₹ 53.77 ಕೋಟಿ, ಇತರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಿಗೆ ₹ 37.90 ಕೋಟಿ ನಿಗದಿ ಮಾಡಲಾಗಿದೆ. ಎಲ್ಲ ಹಂಚಿಕೆಗಳಲ್ಲೂ ಸಿಬ್ಬಂದಿ, ಹೊರಗುತ್ತಿಗೆ ಹಾಗೂ ದಿನಗೂಲಿ ನೌಕರರ ವೇತನವೂ ಒಳಗೊಂಡಿದೆ.

ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗೆ ₹ 25.45 ಕೋಟಿ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕಾರ್ಯಗಳಿಗೆ ₹ 64.41 ಕೋಟಿ, ಪಶು ಸಂಗೋಪನೆಗೆ ₹ 17.62 ಕೋಟಿ, ಸಸ್ಯ ಸಂಗೋಪನೆಗೆ ₹ 14.19 ಕೋಟಿ, ಲೋಕೋಪಯೋಗಿ ಇಲಾಖೆಗೆ ₹ 9.50 ಕೋಟಿ, ಮೀನುಗಾರಿಕೆಗೆ ₹ 2.18 ಕೋಟಿ, ಅರಣ್ಯ ಮತ್ತು ವನ್ಯ ಜೀವನ ಕಾರ್ಯಕ್ರಮಗಳಿಗೆ ₹ 3.36 ಕೋಟಿ, ಸಣ್ಣ ನೀರಾವರಿಗೆ ₹ 1.19 ಕೋಟಿ, ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣ, ದುರಸ್ತಿಗೆ ₹ 4.33 ಕೋಟಿ, ಗ್ರಾಮೀಣ ಮತ್ತು ಸಣ್ಣ ಉದ್ಯಮಗಳಿಗೆ ₹ 1.77 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ.

‘ಜಿಲ್ಲೆಗೆ ಆದ್ಯತೆ ನೀಡಿ’:

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಪಶು ಸಂಗೋಪನೆ ಮತ್ತು ಪಶುವೈದ್ಯ ಇಲಾಖೆಯ ಉಪ ನಿರ್ದೇಶಕ ಡಾ.ರಾಕೇಶ ಬಂಗ್ಲೆ, ‘ಜಿಲ್ಲೆಯಲ್ಲಿ ಜಾನುವಾರು ಸಂಖ್ಯೆ ಮತ್ತು ಪಶುವೈದ್ಯರ ಅನುಪಾತದಲ್ಲಿ ಬಹಳ ವ್ಯತ್ಯಾಸವಿದೆ. ರಾಜ್ಯದಲ್ಲಿ 10 ಸಾವಿರ ಜಾನುವಾರಿಗೆ ಒಬ್ಬರು ವೈದ್ಯರಿದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 50 ಸಾವಿರಕ್ಕೆ ಒಬ್ಬರಿದ್ದಾರೆ’ ಎಂದು ಗಮನ ಸೆಳೆದರು.

‘ಹೊಸ ನೇಮಕಾತಿಗಳ ಸಂದರ್ಭದಲ್ಲಿ ಮೊದಲು ಈ ಜಿಲ್ಲೆಯ ಖಾಲಿ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಿ, ನಂತರ ಉಳಿದ ಜಿಲ್ಲೆಗಳಿಗೆ ನೇಮಿಸುವಂತಾದರೆ ಅನುಕೂಲವಾಗುತ್ತದೆ. ಇದೇ ಮಾದರಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಮಾಡಲಾಗಿದೆ’ ಎಂದರು.

ಪ್ರತಿಕ್ರಿಯಿಸಿದ ಕೆ.ಪಿ.ಮೋಹನರಾಜ್, ‘ಈ ಬಗ್ಗೆ ಠರಾವು ಮಾಡಿ ಸರ್ಕಾರಕ್ಕೆ ಕಳುಹಿಸಿಕೊಡೋಣ’ ಎಂದು ತಿಳಿಸಿದರು.

ಉಳಿದಂತೆ, ಜಲಜೀವನ ಮಿಷನ್ ಯೋಜನೆಯ ಪ್ರಗತಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಬಹುದಾದ ಹಳ್ಳಿಗಳಿಗೆ ನೀರಿನ ವ್ಯವಸ್ಥೆ, ವಿವಿಧ ಇಲಾಖೆಗಳ ಮಾಹಿತಿಗಳನ್ನು ಪಡೆದುಕೊಂಡರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಜಿ.ಪಂ ಬಜೆಟ್ ಹಂಚಿಕೆ

* ₹ 1,095 ಕೋಟಿ: ಒಟ್ಟು ಅನುದಾನ

* ₹ 338 ಕೋಟಿ: ಜಿ.ಪಂ.ಲೆಕ್ಕ ಶೀರ್ಷಿಕೆಯಡಿ ಹಂಚಿಕೆ

* ₹ 756 ಕೋಟಿ: ತಾ.ಪಂ ಲೆಕ್ಕ ಶೀರ್ಷಿಕೆಯಡಿ ಹಂಚಿಕೆ

* ₹ 799 ಕೋಟಿ: ಸಿಬ್ಬಂದಿ ವೇತನಕ್ಕೆ ನಿಗದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT