ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಜೊಯಿಡಾದ ರಾಘವೇಂದ್ರ ಜ್ಯೂಸ್ ಶಾಪ್‌ನಲ್ಲಿ ದಾಹ ತಣಿಸುವ ವಿಧವಿಧ ಶರಬತ್ತು

ಜ್ಞಾನೇಶ್ವರ ದೇಸಾಯಿ Updated:

ಅಕ್ಷರ ಗಾತ್ರ : | |

Prajavani

ಜೊಯಿಡಾ: ಬಿರುಬೇಸಿಗೆಯಲ್ಲಿ ತಂಪಾದ ಪಾನೀಯ ಬೇಕೆಂದು ಬಯಸುವುದು ಸಹಜ. ರಾಸಾಯನಿಕ ರಹಿತ, ಶುಚಿರುಚಿಯಾದ ಶರಬತ್ತು ಸಿಕ್ಕಿದರೆ ಇನ್ನೂ ಖುಷಿ. ಇಲ್ಲಿನ ರಾಘವೇಂದ್ರ ಜ್ಯೂಸ್ ಶಾಪ್ ಇದೇ ಕಾರಣಕ್ಕೆ ಪ್ರಸಿದ್ಧವಾಗಿದೆ. ಇಲ್ಲಿ ಸಿಗುವ ವಿವಿಧ ಶರಬತ್ತುಗಳು ಔಷಧೀಯ ಗುಣಗಳನ್ನೂ ಒಳಗೊಂಡಿದೆ.

ಮುರುಗನ (ಕೋಕಂ) ಹಣ್ಣಿನ ಶರಬತ್ತು ಪಿತ್ತ ನಿವಾರಣೆ ಮಾಡುತ್ತದೆ. ಪಾಚಕ್ ಆ್ಯಸಿಡಿಟಿಗೆ ರಾಮಬಾಣ. ನಿಂಬೆ ರಸ ಬೆರೆಸಿದ ಕಬ್ಬಿನ ಹಾಲು, ಲಿಂಬುಸೋಡಾ, ಲಸ್ಸಿ ಕೂಡ ಗ್ರಾಹಕರನ್ನು ಸೆಳೆಯುತ್ತವೆ. ಇದರೊಂದಿಗೆ ವಾಟೆಹುಳಿ, ಅಪ್ಪೆಹುಳಿ, ನೆಲ್ಲಿಕಾಯಿ, ಶುಂಠಿ ಚಾಟ್ ಮುಂತಾದ ರುಚಿಯಾದ ಆಹಾರವೂ ಇವೆ. 

ಅಂಗಡಿಯ ಮಾಲೀಕ ನರೇಂದ್ರ ತಮ್ಮ ಆಹಾರ ವ್ಯವಹಾರ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸುತ್ತಾರೆ. ‘ಭರ್ಜರಿ ಭೋಜನದ ಬಳಿಕ ಹೊಟ್ಟೆ ಕೆಡಿಸಿಕೊಂಡಲ್ಲಿ ಪಾಚಕ್ ಕೆಲವೇ ನಿಮಿಷಗಳಲ್ಲಿ ತೊಂದರೆ ಶಮನಗೊಳಸುತ್ತದೆ. ಈ ರೀತಿಯ ಸ್ಥಳೀಯ ಪದಾರ್ಥಗಳ ಪಾನೀಯ, ಆಹಾರ ಸೇವನೆಯಿಂದ ಆರೋಗ್ಯಕ್ಕೂ ಹಾನಿಯಿಲ್ಲ’ ಎನ್ನುತ್ತಾರೆ.

ಮೊದಲಿನ ಸೂಪಾ ತಾಲ್ಲೂಕು ಮುಳುಗಡೆಯಾಗಿ ಅತಂತ್ರರಾದವರಲ್ಲಿ ನರೇಂದ್ರ ಅವರ ತಂದೆ ಮಾರುತಿ ಕೂಡ ಒಬ್ಬರಾಗಿದ್ದರು.  ಬೆಳಗಾವಿಯ ತಮ್ಮ ಮಿತ್ರ ಚಂದ್ರಶೇಖರ ತೋರವತ ಎಂಬುವರಿಂದ ಪ್ರೇರಣೆ ಪಡೆದು, 50 ವರ್ಷಗಳ ಹಿಂದೆಯೇ ಜೊಯಿಡಾದಲ್ಲಿ ತಂಪುಪಾನೀಯದ ಅಂಗಡಿ ಆರಂಭಿಸಿದ್ದರು. ಅವರ ನಿಧನದ ನಂತರ ಪುತ್ರ ನರೇಂದ್ರ ಮುಂದುವರಿಸುತ್ತಿದ್ದಾರೆ. ಯಾವುದೇ ಕೃತಕ ಪದಾರ್ಥ ಬೆರೆಸದೇ ನೈಸರ್ಗಿಕವಾಗಿ ಲಭಿಸುವ ಪಾನೀಯ ಪದಾರ್ಥಗಳನ್ನೇ ಬಳಕೆ ಮಾಡುತ್ತಾರೆ.

ಬೆಳಗಾವಿ ಮಾರ್ಗವಾಗಿ ಕಾರವಾರಕ್ಕೆ ಹೋಗಿ ಬರುವವರಿಗೆ, ಉಳವಿ ದೇವಸ್ಥಾನ, ಗೋವಾಕ್ಕೆ ಪ್ರಯಾಣ ಮಾಡುವವರಿಗೆ ಮಾರ್ಗಮಧ್ಯದಲ್ಲಿ ಜೊಯಿಡಾ ಸಿಗುತ್ತದೆ. ಇಲ್ಲಿ ನರೇಂದ್ರ ಅವರ ಅಂಗಡಿ ತುಸು ವಿಶ್ರಾಂತಿಯ ಜಾಗವೂ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು