ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಕೈಯಲ್ಲಿದ್ದ ರಾಖಿ ಬಿಚ್ಚಿಸಿದ ಆರೋಪ: ಪ್ರತಿಭಟನೆ

ಮುಂಡಗೋಡದ ಕರಗಿನಕೊಪ್ಪದ ಲೊಯೋಲ ಪ್ರಾಥಮಿಕ ಶಾಲೆಯಲ್ಲಿ ಘಟನೆ
Last Updated 18 ಆಗಸ್ಟ್ 2022, 15:51 IST
ಅಕ್ಷರ ಗಾತ್ರ

ಮುಂಡಗೋಡ (ಉತ್ತರ ಕನ್ನಡ): ತಾಲ್ಲೂಕಿನ ಕರಗಿನಕೊಪ್ಪದ ಲೊಯೋಲ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೈಗೆ ಕಟ್ಟಿರುವ ರಾಖಿಯನ್ನು ಶಿಕ್ಷಕರು ಬಿಚ್ಚಲು ಹೇಳಿದ್ದಾರೆ ಎಂದು ಆರೋಪಿಸಿ, ಹಿಂದೂಪರ ವಿವಿಧ ಸಂಘಟನೆಗಳ ಕಾರ್ಯಕರ್ತರು ಶಾಲೆಯ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಶಿಕ್ಷಕರು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು.

ಹಿಂದೂ ಜಾಗರಣ ವೇದಿಕೆ, ಬಜರಂಗದಳ, ಶ್ರೀರಾಮಸೇನೆ, ರಾಮಸೇನೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ಪದಾಧಿಕಾರಿಗಳು ಇದ್ದರು.

‘ಹಿಂದೂಗಳಿಗೆ ರಕ್ಷಾ ಬಂಧನ ಪವಿತ್ರವಾಗಿದ್ದು, ಅದನ್ನು ಅವಮಾನಿಸುವ ರೀತಿಯಲ್ಲಿ ಶಿಕ್ಷಕಿಯೊಬ್ಬರು ಮಾತನಾಡಿದ್ದಾರೆ. ವಿದ್ಯಾರ್ಥಿಗಳ ಕೈಯಲ್ಲಿದ್ದ ರಾಖಿಯನ್ನು ಬಿಚ್ಚುವಂತೆ ಬೆಳಗಿನ ಪ್ರಾರ್ಥನೆಯಲ್ಲಿ ಸೂಚಿಸಿದ್ದಾರೆ. ಮಕ್ಕಳು ರಾಖಿಯನ್ನು ಕತ್ತರಿಸಿಕೊಂಡಿದ್ದಾರೆ. ಎಲ್ಲ ಧರ್ಮಗಳ ಆಚರಣೆಗಳನ್ನು ಗೌರವಿಸಬೇಕು’ ಎಂದು ಆಕ್ರೋಶದಿಂದ ಹೇಳಿದರು. ‘ರಾಖಿ ತೆಗೆಯುವಂತೆ ಹೇಳಿದ ಶಿಕ್ಷಕಿ ಸ್ಥಳಕ್ಕೆ ಬರಬೇಕು’ ಎಂದು ಪ್ರತಿಭಟನಕಾರರು ಪಟ್ಟು ಹಿಡಿದು, ಘೋಷಣೆಗಳನ್ನು ಕೂಗಿದರು.

ಹಿಂದೂ ಜಾಗರಣ ವೇದಿಕೆಯ ತಾಲ್ಲೂಕು ಘಟಕದ ಉಪಾಧ್ಯಕ್ಷ ವಿಶ್ವನಾಥ ನಾಯರ್‌ ,‘ ರಕ್ಷಾಬಂಧನದ ಬಗ್ಗೆ ಗೊತ್ತಿಲ್ಲದವರಂತೆ ನಡೆದುಕೊಂಡಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಶಿಕ್ಷಕ ಫಾದರ್ ಜಾನ್ಸನ್‌ ಪಿಂಟೊ,‘ಶಾಲೆಯಲ್ಲಿ ಎಲ್ಲ ಧರ್ಮಗಳ ಆಚರಣೆಗಳನ್ನು ಗೌರವಿಸುತ್ತೇವೆ. ಮಕ್ಕಳೇ ರಾಖಿ ಬಿಚ್ಚಿಕೊಂಡು ಆಟವಾಡುತ್ತಿದ್ದರು. ಆಡಳಿತ ಮಂಡಳಿಯಾಗಲೀ ಅಥವಾ ಶಿಕ್ಷಕರಾಗಲೀ ರಾಖಿ ಬಿಚ್ಚಲು ಹೇಳಿಲ್ಲ. ಆದರೂ ವಿವಾದ ಹೇಗಾಯಿತು ಗೊತ್ತಿಲ್ಲ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ, ‘ಬೇರೆ ಕಡೆಯಿಂದ ಈ ಶಾಲೆಗೆ ಬಂದಿರುವ ಸಿಬ್ಬಂದಿಯೊಬ್ಬರಿಂದ ಸಮಸ್ಯೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲಿದೆ’ ಎಂದರು.

‘ಶಿಕ್ಷಕಿಯಿಂದ ತಪ್ಪು ಆಗಿದ್ದರೆ ಕ್ಷಮೆ ಕೇಳುತ್ತೇವೆ. ಮುಂದೆ ಹೀಗಾಗದಂತೆ ನಿರ್ದೇಶನ ನೀಡಲಾಗುವುದು’ ಎಂದು ಸಂಸ್ಥೆಯ ಪರವಾಗಿ ಸಿಬ್ಬಂದಿಯೊಬ್ಬರು ಹೇಳಿದಾಗ ಪ್ರತಿಭಟನೆ ಹಿಂಪಡೆಯಲಾಯಿತು.

ಸಿ.ಪಿ.ಐ ಸಿದ್ದಪ್ಪ ಸಿಮಾನಿ, ಪಿ.ಎಸ್‌.ಐ ಬಸವರಾಜ ಮಬನೂರ ಸ್ಥಳದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT