ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಕೈ ಬಿಡದ ತರಕಾರಿ

ಮುಂಡಗೋಡ: ಗದ್ದೆಗೇ ಬಂದು ತಾಜಾ ಕಾಯಿಪಲ್ಲೆ ಖರೀದಿಸುವ ಗ್ರಾಹಕರು
Last Updated 3 ಜೂನ್ 2019, 19:31 IST
ಅಕ್ಷರ ಗಾತ್ರ

ಮುಂಡಗೋಡ: ಕೊಳವೆ ಬಾವಿಯ ಅಂತರ್ಜಲ ಕುಸಿದಿದೆ. ಆದರೂ ಮಿತವಾಗಿ ನೀರನ್ನು ಬಳಸಿ ಬೆಳೆದ ತರಕಾರಿ ರೈತನ ಕೈ ಹಿಡಿದಿದೆ.
ಪಟ್ಟಣದ ಹೊರವಲಯದ ಕುಂದರ್ಗಿ ಕ್ರಾಸ್‌ನಲ್ಲಿ ಇರುವ ಜಮೀನಿನಲ್ಲಿ ರೈತ ಮಾರುತಿ ತಳವಾರ ತರಕಾರಿ ಬೆಳೆದಿದ್ದಾರೆ. ಟೊಮೆಟೊ, ಬೆಂಡೆಕಾಯಿ, ಬದನೆಕಾಯಿ, ಚವಳಿಕಾಯಿ, ಮೆಂತೆ ಸೊಪ್ಪು, ಪಾಲಕ್‌ ಸೊಪ್ಪು ನಳನಳಿಸುತ್ತಿವೆ.

ಉಳಿದ ಜಮೀನಿನಲ್ಲಿ ಸಾಂಪ್ರದಾಯಿಕ ಭತ್ತವನ್ನು ಬೆಳೆಯುತ್ತಿದ್ದಾರೆ. ಇದರಲ್ಲಿ ಲಾಭ ಅಷ್ಟಕಷ್ಟೆ. ಅರ್ಧ ಎಕರೆಯಲ್ಲಿ ತರಕಾರಿ ಬೆಳೆದರೆ ಲಾಭ ಆದೀತು. ಲಾಭ ಆಗದಿದ್ದರೂ ಮನೆಗಾದರೂ ತಾಜಾ ತರಕಾರಿ, ಸೊಪ್ಪು ಸಿಗತೈತಿ ಎಂದುಕೊಂಡು ತಮ್ಮ ಆಲೋಚನೆಯನ್ನು ಜಾರಿಗೆ ತಂದರು.ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ನಿತ್ಯ ಏರಿಕೆ ಆಗುತ್ತಿರುವುದರಿಂದ, ಇವರು ಬೆಳೆದ ತರಕಾರಿ, ಸೊಪ್ಪಿಗೂ ಭಾರಿ ಬೇಡಿಕೆ ಬಂದಿದೆ.

ತೋಟಕ್ಕೇಬರುವ ಗ್ರಾಹಕರು: ಪಟ್ಟಣದ ಹೊರವಲಯದಲ್ಲಿಯೇ ಜಮೀನು ಇದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಗೆ ವಾಯು ವಿಹಾರಕ್ಕೆ ಬರುವ ಜನರೇ ಇವರ ಗ್ರಾಹಕರಾಗಿದ್ದಾರೆ. ತಾಜಾ ತರಕಾರಿ ಹಾಗೂ ಸೊಪ್ಪು ಸಿಗುತ್ತದೆ ಎಂದು ಹಲವರು ಇವರ ಜಮೀನಿಗೇ ಬಂದು ತರಕಾರಿ ಖರೀದಿಸುತ್ತಾರೆ. ಮಾರುಕಟ್ಟೆ ದರಕ್ಕಿಂತ ₹5ಕಡಿಮೆಯಲ್ಲಿಯೂ ತರಕಾರಿ ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿದಿನವೂ ತಾಜಾ ತರಕಾರಿ ಖರೀದಿಸಲು ಸಹಾಯವಾಗುತ್ತದೆ.

ಕೈ ಹಿಡಿದ ಟೊಮೆಟೊ, ಬದನೆ:ಕೆಲವು ತಿಂಗಳ ಹಿಂದೆ ಟೊಮೆಟೋ ದರ ಮಾರುಕಟ್ಟೆಯಲ್ಲಿ ಏರಿಕೆ ಕಂಡಿತ್ತು. ಪ್ರತಿ ಕೆ.ಜಿ.ಗೆ ₹ 50ರಿಂದ ₹ 70 ದರದಲ್ಲಿ ಮಾರಾಟವಾಗಿತ್ತು. ಆಗ ಇವರು ಬೆಳೆದ ಸಹ ₹ 30ರಿಂದ ₹ 40ರಂತೆ ಗ್ರಾಹಕರಿಗೆ ಮಾರಾಟ ಮಾಡಿದ್ದಾರೆ. ಬದನೆಕಾಯಿಯೂ ದರ ಏರಿಕೆಯಿಂದ ಇವರಿಗೆ ಲಾಭ ತಂದುಕೊಟ್ಟಿದೆ.

‘ಒಂದೂವರೆ ವರ್ಷದಿಂದ ತರಕಾರಿ ಬೆಳೆಯುತ್ತಿದ್ದೇನೆ. ಮಾರುಕಟ್ಟೆಗೆ ಮಾರಾಟ ಮಾಡಲು ಹೋಗುವುದಿಲ್ಲ. ಇಲ್ಲಿಗೆ ಗ್ರಾಹಕರು ಬಂದು ಖರೀದಿಸುತ್ತಾರೆ. ಸದ್ಯ ಕೊಳವೆಬಾವಿ ನೀರು ಕಡಿಮೆಯಾದರೂ ಕಡಿಮೆ ನೀರನ್ನು ಬಳಸಿ ತರಕಾರಿ ಬೆಳೆಯುವುದನ್ನು ಮುಂದುವರಿಸಿದ್ದೇನೆ. ಈ ಸಲ ತರಕಾರಿ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸುವ ಯೋಚನೆಯಿದೆ. ಕೆಲವು ತಿಂಗಳ ಹಿಂದೆ ತರಕಾರಿ ದರ ಏರಿಕೆಯಾಗಿದ್ದರಿಂದ ಹೆಚ್ಚಿನ ಲಾಭವಾಗಿದೆ’ ಎನ್ನುತ್ತಾರೆ ಮಾರುತಿ ತಳವಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT