ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಡಿಯೆ ಸರ್ಕಾರಿ ಶಾಲೆಯಲ್ಲಿ ತರಕಾರಿ ತೋಟ

ಜೊಯಿಡಾ: ಏಕೋಪಾಧ್ಯಾಯ ಶಾಲೆಯಲ್ಲಿ ಮಕ್ಕಳ ಪಠ್ಯ, ಪಠ್ಯೇತರ ಪ್ರಗತಿ
Last Updated 7 ಏಪ್ರಿಲ್ 2022, 22:00 IST
ಅಕ್ಷರ ಗಾತ್ರ

ಜೊಯಿಡಾ: ಪ್ರಕೃತಿ ಮಡಿಲಲ್ಲಿ ಇರುವ ಸುಂದರ ಊರು ಮುಡಿಯೆ. ಊರಿನ ಮಧ್ಯ ಹಿರಿಯ ಪ್ರಾಥಮಿಕ ಶಾಲೆ, ಶಾಲೆಯ ಮುಂದೆ ಚಿಕ್ಕ ಉದ್ಯಾನ. ಅದರಲ್ಲಿ ಅರಳಿರುವ ಬಗೆಬಗೆಯ ಹೂವುಗಳು. ಶಾಲೆಯ ಮುಂದೆ ಮತ್ತು ಹಿಂದೆ ಕೈತೋಟದಲ್ಲಿ ನಳನಳಿಸುವ ವಿವಿಧ ಬಗೆಯ ತರಕಾರಿಗಳು.

ಈ ತರಕಾರಿಗಳನ್ನು ಶಾಲೆಯ ವಿದ್ಯಾರ್ಥಿಗಳೇ ಬೆಳೆಯುತ್ತಾರೆ. ಇದು ಏಕೋಪಾಧ್ಯಾಯ ಶಾಲೆ. ಇಲ್ಲಿನ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಾರೆ. ಶಾಲಾ ಕೈತೋಟದಲ್ಲಿ ಟೊಮೆಟೊ, ಹಸಿಮೆಣಸು, ಹುರುಳಿಕಾಯಿ, ಬದನೆಕಾಯಿ, ಮೂಲಂಗಿ, ಹರಿವೆ ಮತ್ತು ಬಸಳೆ ಸೊಪ್ಪು, ನವಿಲಕೋಸು, ಬೆಂಡೆಕಾಯಿ ಹೀಗೆ ತರಹೇವಾರಿ ತರಕಾರಿಗಳನ್ನು ಬೆಳೆದಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆಯೂ ಆಗಿರುವ ಇಲ್ಲಿ ಒಟ್ಟು 18 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕೋವಿಡ್ ಅಲೆಯ ನಂತರ ಶಾಲೆ ಪುನಃ ಪ್ರಾರಂಭವಾದಾಗ ಒಬ್ಬರು ಅಥಿತಿ ಶಿಕ್ಷಕರ ನೇಮಕವಾಗಿದೆ.

‘ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ತಾಯಂದಿರ ಸಮಿತಿಯ ಸದಸ್ಯರು ಸೇರಿ ಶಾಲೆಯಲ್ಲಿ ಉತ್ತಮವಾಗಿ ತರಕಾರಿಗಳನ್ನು ಬೆಳೆದಿದ್ದು, ಊರಿಗೆ ಮಾದರಿಯಾಗಿದ್ದಾರೆ’ ಎಂದು ‌ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯಂತ ವೇಳಿಪ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

‘ತರಕಾರಿಗಳನ್ನು ಬೆಳೆದ ವಿದ್ಯಾರ್ಥಿಗಳಿಗೆ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಇಲಾಖೆಯ ಬಿ.ಆರ್.ಪಿ., ಸಿ.ಆರ್.ಪಿ.ಗಳು ಅಭಿನಂದಿಸಿದ್ದಾರೆ. ಈ ಎಲ್ಲ ತರಕಾರಿಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತದೆ. ಪ್ರತಿದಿನ ಎಲ್ಲ ವಿದ್ಯಾರ್ಥಿಗಳಿಗೂ ಬಿಸಿಯೂಟದ ಅನ್ನ ಸಾಂಬಾರಿನ ಜೊತೆಗೆ ಪಲ್ಯ ಮಾಡಿ ನೀಡಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಶಾಲೆಗೆ ರಜೆ ಸಿಗಲಿದ್ದು, ಅಪಾರ ಪ್ರಮಾಣದಲ್ಲಿ ಬೆಳೆದ ತರಕಾರಿಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಗುತ್ತದೆ’ ಎಂದು ಮುಖ್ಯ ಶಿಕ್ಷಕ ಚಂದ್ರಕಾಂತ ಗೌಡ ವಿವರಿಸಿದರು.

ಪ್ರೇರಣೆಯಾದ ದರ ಏರಿಕೆ:

‘ಮಕ್ಕಳಿಗೆ ಶಾಲೆ ಪ್ರಾರಂಭವಾದಾಗ ತರಕಾರಿಗಳ ಬೆಲೆ ಗಗನಕ್ಕೇರಿ ಮಧ್ಯಾಹ್ನದ ಬಿಸಿಯೂಟದಲ್ಲಿ ತರಕಾರಿಗಳ ಕೊರತೆಯಾಗಿತ್ತು. ಅದುವೇ ತರಕಾರಿಗಳನ್ನು ಬೆಳೆಯಲು ಪ್ರೇರಣೆ ನೀಡಿತು. ತಾಯಂದಿರು ತರಕಾರಿಗಳನ್ನು ಬೆಳೆಯಲು ಉತ್ತಮ ಮಣ್ಣು ಮತ್ತು ಸಾವಯವ ಗೊಬ್ಬರ ಪೊರೈಸಿದರು. ಪ್ರತಿದಿನ ಎರಡು ಬಾರಿ ವಿದ್ಯಾರ್ಥಿಗಳು ತರಕಾರಿ ಗಿಡಗಳಿಗೆ ನೀರು ಎರೆದು ಪೋಷಣೆ ಮಾಡಿದ್ದು ತರಕಾರಿಗಳ ಬೆಳೆಯಲು ಸಹಕಾರಿಯಾಯಿತು’ ಎಂದು ಮುಖ್ಯ ಶಿಕ್ಷಕ ಚಂದ್ರಕಾಂತ ಗೌಡ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT