ಭಾನುವಾರ, ಸೆಪ್ಟೆಂಬರ್ 25, 2022
30 °C
ತೋಟಗಾರಿಕಾ ಕಾಲೇಜಿನ ಹಣ್ಣು ವಿಜ್ಞಾನ ವಿಭಾಗದ ಪ್ರಯೋಗ

ಶಿರಸಿ: ವೆನಿಲ್ಲಾ ಅಂಗಾಶ ಕಸಿ ಯಶಸ್ವಿ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ದಶಕದ ಹಿಂದೆ ರೈತರ ಅಚ್ಚುಮೆಚ್ಚಿನ ಬೆಳೆಯಾಗಿ, ನಂತರದ ದಿನಗಳಲ್ಲಿ ಕಣ್ಮರೆಯಾಗಿದ್ದ ವೆನಿಲ್ಲಾ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಹೀಗಾಗಿ ರೋಗ ರಹಿತ ವೆನಿಲ್ಲಾ ಬಳ್ಳಿ ಬೆಳೆಯಲು ತೋಟಗಾರಿಕಾ ಕಾಲೇಜಿನ ಹಣ್ಣು ವಿಜ್ಞಾನ ವಿಭಾಗ ನಡೆಸಿದ ಪ್ರಯೋಗ ಯಶಸ್ವಿ ಆಗಿದೆ.

ವೆನಿಲ್ಲಾ ಬೆಳೆಗೆ ಬ್ಯಾಕ್ಟೀರಿಯಾ ಕಾಟ ಹೆಚ್ಚುತ್ತಿದೆ. ಇದರಿಂದ ಸೊರಗು ರೋಗ, ಕೊಳೆರೋಗಗಳು ಕಾಣಿಸಿಕೊಳ್ಳುವುದು ಅಧಿಕ. ರೈತರು ವೆನಿಲ್ಲಾ ಕೃಷಿಯಿಂದ ವಿಮುಖಗೊಳ್ಳಲು ಇದೂ ಒಂದು ಪ್ರಮುಖ ಕಾರಣ ಆಗಿತ್ತು.

ರೋಗಬಾಧೆ ತಡೆಗಟ್ಟಲು ಈ ಹಿಂದೆಯೂ ಹಲವು ಪ್ರಯೋಗ ನಡೆದಿದ್ದವು. ಕೆಲವು ಪ್ರಗತಿಪರ ರೈತರು ಮಣ್ಣು ರಹಿತವಾಗಿ ಬಳ್ಳಿ ಬೆಳೆಯಲು ಮುಂದಾಗಿದ್ದರು. ರೈತರ ಸಮಸ್ಯೆ ದೂರ ಮಾಡುವ ನಿಟ್ಟಿನಲ್ಲಿ ತೋಟಗಾರಿಕಾ ಕಾಲೇಜಿನ ಹಣ್ಣು ವಿಭಾಗದ ಪ್ರಾಧ್ಯಾಪಕ ಡಾ.ಪ್ರಕಾಶ ಡಿ.ಪಿ. ನೇತೃತ್ವದ ತಂಡ ಅಂಗಾಂಶ ಕಸಿ ಮೂಲಕ ವೆನಿಲ್ಲಾ ಬಳ್ಳಿ ಬೆಳೆಯಲು ಮುಂದಾಗಿತ್ತು.

ಆರು ತಿಂಗಳ ನಿರಂತರ ಪ್ರಯತ್ನದ ಫಲವಾಗಿ ಪ್ರಯೋಗ ಯಶಸ್ಸು ಕಂಡಿದೆ. ಕಾಲೇಜಿನ ಪ್ರಯೋಗಾಲಯದಲ್ಲಿ ರೋಗರಹಿತ ವೆನಿಲ್ಲಾ ಸಸಿಗಳು ನಳನಳಿಸುತ್ತಿವೆ. ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಬಾಧಿಸದಂತೆ ಅತಿ ಕಡಿಮೆ ತಾಪಮಾನದಲ್ಲಿ ಗಿಡಗಳನ್ನು ಬೆಳೆಸಲಾಗಿದೆ.

‘ವೆನಿಲ್ಲಾ ಬಳ್ಳಿಯೊಂದರ ಕಾಂಡ ಭಾಗ ಕತ್ತರಿಸಿ ಅವುಗಳನ್ನು ಅಂಗಾಶ ಕಸಿ ಪ್ರಯೋಗಾಲದಲ್ಲಿ ರೋಗರಹಿತವಾಗಿ ಸಂರಕ್ಷಿಸಲಾಯಿತು. ಸುಮಾರು ಐದು ಕಾಂಡಗಳನ್ನು ರಾಸಾಯನಿಕ ಸಂರಕ್ಷಣೆಗೆ ಒಳಪಡಿಸಿದ್ದೆವು. ಪ್ರತಿ ಕಾಂಡಗಳಿಗೆ ಹತ್ತಾರು ಗಿಡಗಳು ಮೊಳಕೆಯೊಡೆದವು’ ಎಂದು ಪ್ರಾಧ್ಯಾಪಕ ಡಾ.ಪ್ರಕಾಶ್ ಡಿ.ಪಿ. ಪ್ರಯೋಗದ ಹಂತ ವಿವರಿಸಿದರು.

‘ಕಳೆದ ಆರು ತಿಂಗಳಿನಿಂದ ವೆನಿಲ್ಲಾ ಬೆಳೆಸುವ ಪ್ರಯೋಗ ನಡೆಯುತ್ತಲೇ ಇದೆ. ಈಗ ಪ್ರಯೋಗಾಲಯದಿಂದ ಗಿಡಗಳನ್ನು ಪಾಲಿಹೌಸ್‍ಗೆ ಸ್ಥಳಾಂತರಿಸಬೇಕಿದೆ. ಇಲ್ಲಿ ಎರಡು ತಿಂಗಳ ಕಾಲ ಬೆಳೆಸಿದ ಬಳಿಕ ಗಿಡಗಳು ನಾಟಿಗೆ ಸಿದ್ಧಗೊಳ್ಳುತ್ತವೆ’ ಎಂದು ತಿಳಿಸಿದರು.

‘ವೆನಿಲ್ಲಾ ಬೆಳೆಯಲು ಈಚಿನ ದಿನದಲ್ಲಿ ಹಲವರು ಮತ್ತೆ ಆಸಕ್ತಿ ತೋರುತ್ತಿದ್ದಾರೆ. ರೈತರು ಕೃಷಿಯಿಂದ ವಿಮುಖವಾಗಲು ಕಾರಣವಾಗಿದ್ದ ರೋಗದ ಸಮಸ್ಯೆಯನ್ನು ತಡೆಗಟ್ಟುವುದು ಈ ಪ್ರಯೋಗದ ಉದ್ದೇಶ ಆಗಿದೆ. ಬಳ್ಳಿಗಳ ಅಗತ್ಯವಿದ್ದರೆ ಹಣ್ಣು ವಿಜ್ಞಾನ ವಿಭಾಗ ಸಂಪರ್ಕಿಸಿ ತಿಳಿಸಿದರೆ, ಬಳ್ಳಿ ಬೆಳೆಸಿಕೊಡಲಾಗುವುದು’ ಎಂದರು.

*
ರೋಗ ರಹಿತ ವೆನಿಲ್ಲಾ ಬಳ್ಳಿ ಉತ್ಪಾದಿಸಲು ನಡೆಸಿದ ಪ್ರಯೋಗ ಯಶಸ್ವಿಯಾಗಿದ್ದು, ರೈತರ ಬೇಡಿಕೆಗೆ ತಕ್ಕಂತೆ ಬಳ್ಳಿ ಉತ್ಪಾದಿಸಿ ಕೊಡಲಾಗುವುದು.
-ಪ್ರಕಾಶ್ ಡಿ.ಪಿ., ತೋಟಗಾರಿಕಾ ಕಾಲೇಜಿನ ಪ್ರಾಧ್ಯಾಪಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು