ಶನಿವಾರ, ಮಾರ್ಚ್ 6, 2021
29 °C
ಅಂಕೋಲಾ ಪುರಸಭೆ ಸ್ಥಾಯಿ ಸಮಿತಿ ಆಯ್ಕೆ ವಿಚಾರ: ಮುಖಂಡರ ಮಾತಿನ ಚಕಮಕಿ

ಗೊಂದಲ ನಿವಾರಣೆ ಸಭೆಯಲ್ಲಿ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ಪುರಸಭೆಯ ಸ್ಥಾಯಿ ಸಮಿತಿ ಆಯ್ಕೆಗೆ ವಿಚಾರದಲ್ಲಿ ಗೊಂದಲ ನಿವಾರಿಸಲು ತಹಶೀಲ್ದಾರ್ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯೂ ಗೊಂದಲದ ಗೂಡಾಯಿತು. ವಾಗ್ವಾದಗಳು ತಾರಕಕ್ಕೇರಿ, ಸ್ಪಷ್ಟ ನಿರ್ಣಯ ಸಾಧ್ಯವಾಗಲಿಲ್ಲ.

ಆಡಳಿತ ಪಕ್ಷ ಬಿ.ಜೆ.ಪಿ ಪರವಾಗಿ ಮಾತನಾಡಿದ ಪುರಸಭೆಯ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ‘ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ನಮಗೆ ಮಾತನಾಡಲು ಆಸ್ಪದ ನೀಡಲಿಲ್ಲ. ದಾಂಧಲೆ ಮಾಡಿದ್ದರಿಂದ ಗೊಂದಲದಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಸಭೆಯನ್ನು ಮುಂದೂಡಬೇಕಾಯಿತು’ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಮಾತನಾಡಿ, ‘ಯಾರಿಂದ ಕಾನೂನು ಲೋಪವಾಗಿದೆ ಎನ್ನುವುದನ್ನು ಉಪ ವಿಭಾಗಾಧಿಕಾರಿ ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಸದಸ್ಯರು ಗಾಜಿನ ಲೋಟ ಒಡೆದು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಬಿ.ಜೆ.ಪಿ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅದನ್ನು ಸಾಬೀತು ಪಡಿಸಲಿ’ ಎಂದು ಪಟ್ಟು ಹಿಡಿದರು. ಅಲ್ಲದೇ ಸಭೆ ನಡೆದ ದಿನ ಅಧ್ಯಕ್ಷರು ನೀಡಿದ ಪತ್ರವನ್ನು ಓದುವಂತೆ ಆಗ್ರಹಿಸಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಮುಕ್ತವಾಗಿ ಮಾತನಾಡೋಣ. ಎಲ್ಲವೂ ಕಾನೂನು ಪ್ರಕಾರವಾಗಿ ನಡೆದಿದೆ. ಕಾಂಗ್ರೆಸ್ ಸದಸ್ಯರು, ಅಧ್ಯಕ್ಷೆ ಮಾತನಾಡುವಾಗ ತೊಂದರೆ ನೀಡಿದ್ದು ತಪ್ಪಾಗಿದೆ’ ಎಂದರು.

ತಾರಕಕ್ಕೇರಿದ ವಾಗ್ವಾದ: ಸತೀಶ ಸೈಲ್ ಅವರು ಪುರಸಭೆ ಅಧ್ಯಕ್ಷೆ ನೀಡಿದ ಪತ್ರವನ್ನು ಓದುವಂತೆ ಆಗ್ರಹಿಸಿದಾಗ ಅಧಿಕಾರಿಗಳು ಒಪ್ಪಲಿಲ್ಲ. ಇದರಿಂದ ಆಕ್ರೋಶಗೊಂಡ ಅವರು ಸಭೆಯಿಂದ ಹೊರ ನಡೆದರು. ಆಗ ಪುರಸಭೆಯ ಮುಖ್ಯಾಧಿಕಾರಿ ಪತ್ರ ಓದಲು ಒಪ್ಪಿಕೊಂಡರು. ನಂತರ ಮತದಾನದ ಪ್ರಕ್ರಿಯೆ ಕುರಿತು ಚರ್ಚೆಯಾಗುತ್ತಿದ್ದಂತೆ ಶಾಸಕಿ ಮತ್ತು ಸತೀಶ ಸೈಲ್ ನಡುವೆ ವಾಗ್ವಾದವಾಯಿತು.

ಈ ನಡುವೆ ಡಿ.ವೈ.ಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಸತೀಶ್ ನಡುವೆಯೂ ಮಾತಿನ ಚಕಮಕಿ ಉಂಟಾಯಿತು. ಡಿ.ವೈ.ಎಸ್ಪಿ ಆಡಳಿತ ಪಕ್ಷದ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಸೈಲ್ ಆರೋಪಿಸಿದರು.

‘ಮುಂದಿನ ಸಭೆಯಲ್ಲಿ ರಚನೆ’: ‘ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆಯ ನಿಯಮಾವಳಿಗಳ ಕುರಿತು ಸದಸ್ಯರಿಗೆ ಖುದ್ದಾಗಿ ಕಾರ್ಯಾಗಾರ ಹಮ್ಮಿಕೊಂಡು ಮಾಹಿತಿ ನೀಡುತ್ತೇನೆ. ಮುಂದಿನ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಯನ್ನು ಕಾನೂನುಬದ್ಧವಾಗಿ ಮಾಡಲಾಗುವುದು’ ಎಂದು ತಿಳಿಸಿದ ಉಪ ವಿಭಾಗಾಧಿಕಾರಿ ಎಂ.ಅಜಿತ್ ಸಭೆ ಮೊಟಕುಗೊಳಿಸಿದರು.

ಸಿ.ಪಿ.ಐ ಕೃಷ್ಣಾನಂದ ನಾಯ್ಕ, ಪಿ.ಎಸ್.ಐ ಸಂಪತ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಹಶೀಲ್ದಾರ್ ಉದಯ ಕುಂಬಾರ, ಪ್ರಮುಖರಾದ ಅರುಣ ನಾಡಕರ್ಣಿ, ಶಂಭು ಶೆಟ್ಟಿ, ಸುಜಾತಾ ಗಾಂವಕರ, ರಮಾನಂದ ನಾಯಕ, ಬಿ.ಡಿ.ನಾಯ್ಕ, ಉದಯ ನಾಯ್ಕ, ಜಗದೀಶ ನಾಯಕ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು