ಮಂಗಳವಾರ, ಫೆಬ್ರವರಿ 25, 2020
19 °C
ನಾಲ್ಕೂವರೆ ವರ್ಷ ಕಳೆದರೂ ಅನುಷ್ಠಾನಗೊಳ್ಳದ ಸರ್ಕಾರದ ನಿರ್ಣಯ

ಶಿರಸಿ: ವಿಎಫ್‌ಸಿಗಿಲ್ಲ ಬೆಲೆಬಾಳುವ ಮರದ ಪಾಲು

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಸ್ವಾಭಾವಿಕ ಅರಣ್ಯದಲ್ಲಿ ಬೆಳೆದ ಬೆಲೆಬಾಳುವ ಮರಗಳಿಂದ ಬರುವ ಉತ್ಪನ್ನದಲ್ಲಿ ಗ್ರಾಮ ಅರಣ್ಯ ಸಮಿತಿಗಳಿಗೆ ಲಾಭಾಂಶ ನೀಡಲು ನಾಲ್ಕೂವರೆ ವರ್ಷಗಳ ಹಿಂದೆ ಸರ್ಕಾರ ಕೈಗೊಂಡಿರುವ ತೀರ್ಮಾನ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಗ್ರಾಮ ಅರಣ್ಯ ಸಮಿತಿ(ವಿಎಫ್‌ಸಿ)ಗಳು, ಬೆಂಕಿಯಿಂದ ಅರಣ್ಯವನ್ನು ರಕ್ಷಿಸಲು ಇಲಾಖೆಗೆ ಸಹಕಾರ ನೀಡುತ್ತವೆ. ವಿಎಫ್‌ಸಿಗಳ ನೆರವಿನಿಂದಾಗಿ ಕಳೆದ ವರ್ಷ ಬೇಸಿಗೆಯಲ್ಲಿ ಅನೇಕ ವಲಯಗಳಲ್ಲಿ ಕಾಡಿಗೆ ಬೆಂಕಿ ಬೀಳುವ ಪ್ರಕರಣ ಕಡಿಮೆಯಾಗಿದೆ. ಇಲಾಖೆಗೆ ನೆರವು ನೀಡುತ್ತಿರುವ ಸಮಿತಿಗಳು ಬೆಲೆಬಾಳುವ ಮರಗಳಾದ ಬೀಟೆ, ತೇಗ, ಹೊನ್ನೆ, ಮತ್ತಿ ಮತ್ತು ನಂದಿ ಮರಗಳಿಂದ ಬರುವ ಉತ್ಪನ್ನಗಳಿಂದ ವಂಚಿತವಾಗಿವೆ. ವಿಎಫ್‌ಸಿ ರಚನೆಗೆ ಮೊದಲು ಸ್ವಾಭಾವಿಕವಾಗಿ ಬೆಳೆದ ಉಳಿದ ಜಾತಿಯ ಮರಗಳಿಂದ ಬರುವ ಉತ್ಪನ್ನದಲ್ಲಿ ಶೇ 50:50ರ ಅನುಪಾತದಲ್ಲಿ ಸರ್ಕಾರ ಮತ್ತು ವಿಎಫ್‌ಸಿಗಳಿಗೆ ಲಾಭಾಂಶ ಹಂಚಿಕೆಯಾಗುತ್ತಿದೆ.

ಕಾಡಿನ ಎಲ್ಲ ಮರಗಳ ಮಾರಾಟದಿಂದ ಬರುವ ಆದಾಯದಲ್ಲಿ ವಿಎಫ್‌ಸಿಗಳಿಗೆ ಪಾಲು ನೀಡಬೇಕು ಎಂಬುದು ಬಹುವರ್ಷಗಳ ಬೇಡಿಕೆಯಾಗಿದೆ. ಈ ಸಂಬಂಧ ಚರ್ಚಿಸಲು 2015, ಜೂನ್ 22ರಂದು ಅಂದಿನ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆದಿತ್ತು. ಆಗಿನ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಸ್ಥಳೀಯ ಶಾಸಕರು, ಅರಣ್ಯ ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ‘ಹೊರತುಪಡಿಸಿದ ಮರಗಳ’ ವಿಷಯವನ್ನು ತೆಗೆದು ಹಾಕಿ, ಎಲ್ಲ ಮರಗಳ ಮಾರಾಟದಿಂದ ಬರುವ ಆದಾಯದ ಪಾಲನ್ನು ವಿಎಫ್‌ಸಿಗೆ ವಿತರಿಸಲು, ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಸಮ್ಮತಿಸಿದ್ದರು. ಅಲ್ಲದೇ, 2002ರ ಆದೇಶದಲ್ಲಿದ್ದ ಈ ‘ಹೊರತುಪಡಿಸಿದ ಮರಗಳ’ ವಿಷಯಕ್ಕೆ ತಿದ್ದುಪಡಿ ತರಬೇಕೆಂದು ಸಹ ತೀರ್ಮಾನಿಸಲಾಗಿತ್ತು ಎನ್ನುತ್ತಾರೆ ಗ್ರಾಮ ಅರಣ್ಯ ಸಮಿತಿ ಪ್ರಮುಖರೊಬ್ಬರು.

ಸಭೆಯಲ್ಲಿ ತೀರ್ಮಾನವಾಗಿ ನಾಲ್ಕೂವರೆ ವರ್ಷ ಕಳೆದರೂ, ಈ ನಿಯಮ ಅನುಷ್ಠಾನಗೊಂಡಿಲ್ಲ. ವಿಎಫ್‌ಸಿಗಳಿಗೆ ಲಾಭಾಂಶ ದೊರೆತರೆ, ಊರಿನ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಪ್ರಸ್ತುತ ಅಕೇಶಿಯಾ ನೆಡುತೋಪಿನ ಲಾಭಾಂಶದಲ್ಲಿ ಮಾತ್ರ ಪಾಲು ಸಿಗುತ್ತಿದೆ. ಸಾಕಷ್ಟು ವಿಎಫ್‌ಸಿಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದರಿಂದ ಮತ್ತು ಅರಣ್ಯ ರಕ್ಷಣೆಯಲ್ಲಿ ಕಾಳಜಿವಹಿಸುವುದರಿಂದ ಸರ್ಕಾರ ಆದಷ್ಟು ಶೀಘ್ರ ಎಲ್ಲ ಮರಗಳ ಆದಾಯದಿಂದ ಬರುವ ಲಾಭಾಂಶ ಹಂಚಿಕೆ ಮಾಡುವಂತೆ ಆದೇಶ ಮಾಡಬೇಕು ಎಂದು ಖೂರ್ಸೆ ವಿಎಫ್‌ಸಿ ಅಧ್ಯಕ್ಷ ಸತೀಶ ಭಟ್ಟ ಒತ್ತಾಯಿಸಿದರು.

ಈ ಕುರಿತು ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶಕುಮಾರ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಈ ಸಂಬಂಧ ಹಿಂದೆಯೇ ಕೆನರಾ ವೃತ್ತದಿಂದ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗ ಮತ್ತೊಮ್ಮೆ ಡಿಸೆಂಬರ್‌ನಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ. ಸದ್ಯದಲ್ಲಿ ಆದೇಶ ಬರುವ ನಿರೀಕ್ಷೆಯಿದೆ’ ಎಂದರು.

*
ಗ್ರಾಮ ಅರಣ್ಯ ಸಮಿತಿಗಳಿಗೆ ಹೆಚ್ಚಿನ ಪಾಲು ನೀಡುವುದರಿಂದ ಅವರ ಹೊಣೆಗಾರಿಕೆಯೂ ಹೆಚ್ಚುತ್ತದೆ. ಇದು ಅರಣ್ಯ ರಕ್ಷಣೆಗೆ ಸಹಕಾರಿಯಾಗಿದೆ‌.
– ಡಿ.ಯತೀಶಕುಮಾರ್, ಸಿಸಿಎಫ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು