ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತ್ಕಾಲಿಕ ಸೇತುವೆ ಮುಳುಗಡೆ: ನಿರಂತರ ದೋಣಿ ಸಂಚಾರಕ್ಕೆ ಬೇಡಿಕೆ

ಗಂಗಾವಳಿ ನದಿಯ ಪಣಸಗುಳಿ– ಕೈಗಡಿ ನಡುವೆ ಸಮಸ್ಯೆ
Last Updated 19 ಆಗಸ್ಟ್ 2022, 10:06 IST
ಅಕ್ಷರ ಗಾತ್ರ

ಕಾರವಾರ: ಘಟ್ಟದ ಮೇಲೆ ಮಳೆ ಜೋರಾದರೆ ಈ ಊರಿನ ಜನ ಪರಿತಪಿಸುತ್ತಾರೆ. ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿತವಾಗುವ ಭೀತಿ ಎದುರಿಸುತ್ತಾರೆ. ಹಾಗಾಗಿ, ತಾತ್ಕಾಲಿಕವಾಗಿ ನೀಡಲಾಗಿರುವ ದೋಣಿಯ ಸಂಚಾರ ಮಳೆಗಾಲ ಮುಗಿಯುವ ತನಕವೂ ಮುಂದುವರಿಯುವುದನ್ನು ಎದುರು ನೋಡುತ್ತಿದ್ದಾರೆ.

ಇದು ಅಂಕೋಲಾ ತಾಲ್ಲೂಕಿನ ಪಣಸಗುಳಿ– ಕೈಗಡಿ ಭಾಗದ ನಿವಾಸಿಗಳ ಆತಂಕವಾಗಿದೆ. ನದಿ ನೀರಿನ ಹರಿವು ಇಳಿದ ಬಳಿಕವಾದರೂ ಗಂಗಾವಳಿ ನದಿಯನ್ನು ದಾಟಲು ಅನುಕೂಲವಾಗುವಂತೆ ಪೈಪ್‌ಗಳನ್ನು ಅಳವಡಿಸಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿದೆ. ಸುಸಜ್ಜಿತ ಸೇತುವೆ ನಿರ್ಮಾಣವಾಗುವ ತನಕ ಜನರ ಸಂಚಾರಕ್ಕೆ ಇದು ಅನುಕೂಲವಾಗಲಿದೆ.

ಘಟ್ಟದ ಮೇಲಿನ ಭಾಗದಲ್ಲಿ ಮಳೆ ಹೆಚ್ಚಾಗಿ, ನದಿಯಲ್ಲಿ ನೀರು ಏರುತ್ತಿದ್ದಂತೆ ತಾತ್ಕಾಲಿಕ ಸೇತುವೆ ಮುಳುಗಡೆಯಾಗುತ್ತದೆ. ಹಾಗಾಗಿ ಜುಲೈ ಕೊನೆಯ ವಾರದಲ್ಲಿ ಗುಳ್ಳಾಪುರ– ಡೊಂಗ್ರಿ ನಡುವೆ ದೋಣಿ ಸಂಚಾರಕ್ಕೆ ಅಂಕೋಲಾ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿತ್ತು. ಇದನ್ನು ಮತ್ತಷ್ಟು ದಿನ ಮುಂದುವರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಪಾಯಕಾರಿಯಾಗಿ ಸಂಚಾರ: ಘಟ್ಟದ ಮೇಲ್ಭಾಗದಲ್ಲಿ, ಗಂಗಾವಳಿ ನದಿಯ ಜಲಾನಯನ ಪ್ರದೇಶಗಳಲ್ಲಿ ಕೆಲವು ದಿನ ಉತ್ತಮ ಮಳೆಯಾಗಿತ್ತು. ಇದರಿಂದ ಗುರುವಾರ, ನದಿಯಲ್ಲಿ ಹರಿವು ಹೆಚ್ಚಾಗಿತ್ತು. ತಾತ್ಕಾಲಿಕ ಸೇತುವೆಯ ಮೇಲೆ ಎರಡು–
ಮೂರು ಅಡಿಗಳಷ್ಟು ನೀರು ಹರಿದಿದೆ. ಕೆಲವು ಗ್ರಾಮಸ್ಥರು ಧೈರ್ಯ ಮಾಡಿ ನಡೆದುಕೊಂಡು ಸೇತುವೆ ದಾಟಿದ್ದಾರೆ. ಹಲವು ದ್ವಿಚಕ್ರ ವಾಹನ ಸವಾರರು ಅಪಾಯ ಮೈಮೇಲೆ ಎಳೆದುಕೊಂಡು ಮತ್ತೊಂದು ದಡ ತಲುಪಿದ್ದಾರೆ.

‘ಕಮ್ಮಾಣಿ, ಹಳವಳ್ಳಿ, ಕನಕನಳ್ಳಿ, ಕಲ್ಲೇಶ್ವರ, ಕೊನಾಳ, ಹೆಗ್ಗಾರ, ವೈದ್ಯಹೆಗ್ಗಾರ, ಶೇವ್ಕಾರ, ಕೈಗಡಿ ಮತ್ತು ಕೊಂಕಿ ಭಾಗಕ್ಕೆ ಇಲ್ಲಿಂದ ಸಂಪರ್ಕವಿದೆ. ಘಟ್ಟದ ಮೇಲೆ ಮಳೆಯಾದಾಗಲೆಲ್ಲ ಇಲ್ಲಿನ ಜನ ಆತಂಕ ಪಡುವಂತಾಗುತ್ತದೆ. ಹಾಗಾಗಿ, ಮಳೆಗಾಲ ಮುಕ್ತಾಯವಾಗಿ ನದಿಯಲ್ಲಿ ನೀರಿನ ಮಟ್ಟವು ತಾತ್ಕಾಲಿಕ ಸೇತುವೆಗಿಂತ ಕೆಳಭಾಗಕ್ಕೆ ಬರುವ ತನಕವೂ ದೋಣಿಯ ಸಂಚಾರವನ್ನು ಮುಂದುವರಿಸಬೇಕು’ ಎಂದು ಸ್ಥಳೀಯರಾದ ವಿ.ಎಸ್.ಭಟ್ ಅಭಿಪ್ರಾಯ ಪಡುತ್ತಾರೆ.

‘ಈ ಎಲ್ಲ ಹಳ್ಳಿಗಳಿಗೂ ಗುಳ್ಳಾಪುರ ಮುಖ್ಯ ವ್ಯವಹಾರ ಕೇಂದ್ರವಾಗಿದೆ. ಬ್ಯಾಂಕ್, ಆರೋಗ್ಯ ಕೇಂದ್ರಗಳು, ಬೇರೆ ಊರುಗಳಿಗೆ ತೆರಳಲು ಬಸ್‌ ಹಿಡಿಯಲೂ ನದಿ ದಾಟುವುದು ಅನಿವಾರ್ಯವಾಗಿದೆ. ಹಾಗಾಗಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತವು ದೋಣಿಯ ಸಂಚಾರವನ್ನು ಮುಂದುವರಿಸುವುದು ಸೂಕ್ತ’ ಎಂದು ಅವರು ಹೇಳುತ್ತಾರೆ. ಕಮ್ಮಾಣಿ, ಕನಕನಳ್ಳಿ, ಹೆಗ್ಗಾರ ಮುಂತಾದ ಭಾಗದ ಜನ, ಈಗ ನದಿ ದಾಟಿ ರಾಮನಗುಳಿಗೆ ಬಂದು ಗುಳ್ಳಾಪುರಕ್ಕೆ ಬರಬೇಕಿದೆ. ಸರಿ ಸುಮಾರು ಆರು ಕಿಲೋಮೀಟರ್‌ಗಳಷ್ಟು ಸುತ್ತಿ ಬಳಸಿ ಸಂಚರಿಸಬೇಕಾಗಿದೆ ಎಂದು ಗ್ರಾಮಸ್ಥರ ಅಳಲು.

‘ದೋಣಿ ಸಂಚಾರ ಮುಂದುವರಿಕೆ’

‘ಪಣಸಗುಳಿಯಲ್ಲಿ ತಾತ್ಕಾಲಿಕ ಸೇತುವೆಯ ಮೇಲೆ ನೀರು ಹರಿಯುವುದು ನಿಂತ ಬಳಿಕ ದೋಣಿ ಸಂಚಾರವನ್ನು ನಿಲ್ಲಿಸಲು ತೀರ್ಮಾನಿಸಲಾಗಿತ್ತು. ಆದರೆ, ಸೇತುವೆಯ ಮೇಲೆ ನೀರು ಹರಿಯುತ್ತಿರುವ ಕಾರಣ ದೋಣಿ ಸಂಚಾರವನ್ನು ಮತ್ತಷ್ಟು ದಿನ ಮುಂದುವರಿಸಲು ತೀರ್ಮಾನಿಸಲಾಗಿದೆ’ ಎಂದು ತಹಶೀಲ್ದಾರ್ ಉದಯ ಕುಂಬಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT