ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಬ್ರುವಾಡ: ಅರಿವಳಿಕೆ ಚುಚ್ಚುಮದ್ದಿನ ಸಿರಿಂಜ್ ಕಿತ್ತೆಸೆದ ಕೋತಿ

Last Updated 27 ಏಪ್ರಿಲ್ 2022, 14:38 IST
ಅಕ್ಷರ ಗಾತ್ರ

ಅಂಕೋಲಾ: ಇಲ್ಲಿನ ಬೊಬ್ರುವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ದಿನಗಳಿಂದ ಮಹಿಳೆಯರು ಮತ್ತು ಮಕ್ಕಳಿಗೆ ಉಪಟಳ ನೀಡುತ್ತಿರುವ ಮಂಗನ ಸೆರೆ ಹಿಡಿಯಲು ಬುಧವಾರವೂ ಕಾರ್ಯಾಚರಣೆ ಮುಂದುವರಿಯಿತು. ವನ್ಯಜೀವಿ ತಜ್ಞರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಾಕಷ್ಟು ಪ್ರಯತ್ನಿಸಿದರೂ ಮಂಗ ತಪ್ಪಿಸಿಕೊಳ್ಳುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮುಂದುವರಿದಿದೆ.

ಅಂಕೋಲಾ ವಲಯ ಅರಣ್ಯ ಅಧಿಕಾರಿ ಗಣಪತಿ ನಾಯಕ ನೇತೃತ್ವದಲ್ಲಿ ಮಂಗಳವಾರ ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಯಿತು. ಬುಧವಾರ ಮುಂಜಾನೆ 5.30ರಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಯಿತು. ಬುಧವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಅರಿವಳಿಕೆ ಸಿರಿಂಜ್ ಮೂಲಕ ಔಷಧಿ ಅಳವಡಿಸಿ ಹಲವು ಬಾರಿ ಗುಂಡು ಹಾರಿಸಿದರು.

ಒಂದು ಬಾರಿ ಸಿರಿಂಜ್ ಮಂಗನ ದೇಹಕ್ಕೆ ತಗುಲಿತ್ತು. ಕ್ಷಣಮಾತ್ರದಲ್ಲಿ ಅದನ್ನು ಕಾಲಿನಿಂದ ಮಂಗ ಕಿತ್ತೆಸೆಯಿತು. ಮತ್ತು ಬರುವ ಔಷಧಿಯೂ ಪರಿಣಾಮ ಬೀರಲಿಲ್ಲ. ಮಂಗಳವಾರ ಮನೆಗಳ ಹತ್ತಿರದಲ್ಲಿ ಅಡ್ಡಾಡಿಕೊಂಡಿದ್ದ ಮಂಗ, ಬುಧವಾರ ಎತ್ತರದ ಮರಗಳನ್ನು ಏರಿ ತಪ್ಪಿಸಿಕೊಂಡಿತು.

ಒಂದು ಕಿಲೋಮೀಟರ್ ಸುತ್ತಳತೆಯಲ್ಲಿಯೇ ಮೂರು ದಿನಗಳಿಂದ ಸಂಚರಿಸುತ್ತಿದೆ. ಗ್ರಾಮದ ಯುವಕರು ಕೈಯಲ್ಲಿ ಕೋಲು (ದೊಣ್ಣೆ) ಹಿಡಿದು ಅಡ್ಡಾಡುತ್ತಿದ್ದಾರೆ. ಮಂಗ ಸೆರೆ ಸಿಗದಿದ್ದರೂ ನಮ್ಮೂರಿನಿಂದ ತೊಲಗಲಿ ಎಂದು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಹಿಳೆಯರು ಭಯಬೀತರಾಗಿ ಮನೆಯ ಹೊರಗಡೆ ಕಾಲಿಡುತ್ತಿಲ್ಲ.

‘ಒಂದು ಬಾರಿ ಗುಂಡು ತಗುಲಿದ್ದರಿಂದ ಎತ್ತರದ ಮರವೇರುತ್ತಿದೆ. ನಿರ್ದಿಷ್ಟ ವ್ಯಾಪ್ತಿಯೊಳಗೆ ಬಂದರೆ ಬಂದೂಕಿನಿಂದ ಅರಿವಳಿಕೆ ಔಷಧಿ ತುಂಬಿದ ಗುಂಡಿನ ಮೂಲಕ ದಾಳಿ ನಡೆಸಿ ಮತ್ತು ಬರುವಂತೆ ಪ್ರಯತ್ನಿಸಬಹುದು. ಅರಿವಳಿಕೆ ಔಷಧಿಯ ಗುಂಡು ಹಾರಿಸಿದಾಗ ಸಾಮಾನ್ಯವಾಗಿ ಕಾಡು ಪ್ರಾಣಿಗಳಿಗೆ ಬೇಗ ನಾಟುತ್ತದೆ. ಮಂಗ ಮತ್ತು ಚಿಂಪಾಂಜಿ ಸಿರಿಂಜ್ ಅನ್ನು ಶೀಘ್ರವಾಗಿ ದೇಹದಿಂದ ಬೇರ್ಪಡಿಸಿಕೊಳ್ಳುತ್ತವೆ. ಕೆಂಪು ಮುಖದ ಮಂಗವಾದರೆ ಸೆರೆಹಿಡಿಯುವುದು ಸುಲಭ. ಕಪ್ಪು ಮುಖದ ಮಂಗವನ್ನು ಸೆರೆ ಹಿಡಿಯುವುದು ಕಷ್ಟದ ಕಾರ್ಯ’ ಎಂದು ಅಂಕೋಲಾ ವಲಯ ಅರಣ್ಯ ಅಧಿಕಾರಿ ಗಣಪತಿ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಗಂಗಾವತಿಯಿಂದ ಪರಿಣತರ ತಂಡ

‘ಬೋನು, ಬಲೆ, ಅರಿವಳಿಕೆ ಔಷಧೀಯ ಮಾತ್ರೆ ಇವುಗಳು ಪ್ರಯೋಜನಕಾರಿ ಆಗುವುದಿಲ್ಲ. ಸ್ಥಳೀಯ ವನ್ಯಜೀವಿ ತಜ್ಞರು ಹಲವು ಪ್ರಯತ್ನಗಳನ್ನು ನಡೆಸಿದ್ದಾರೆ. ಶಿವಮೊಗ್ಗದಿಂದ ವಿಶೇಷ ಪರಿಣತರನ್ನು ಆಹ್ವಾನಿಸಲಾಗಿತ್ತು. ಕಪ್ಪು ಮುಖದ ಮಂಗವನ್ನು ಸೆರೆಹಿಡಿಯಲು ಕಷ್ಟ ಎಂದು ಹಿಂದೆ ಸರಿದಿದ್ದಾರೆ. ಗಂಗಾವತಿಯಿಂದ ಪರಿಣಿತರನ್ನು ಕರೆಸಿಕೊಳ್ಳಲಾಗುವುದು. ಸಾರ್ವಜನಿಕರು ಕಾರ್ಯಾಚರಣೆ ಮುಗಿಯುವವರೆಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸಹಕರಿಸಬೇಕು’ ಎಂದು ವಲಯ ಅರಣ್ಯ ಅಧಿಕಾರಿ ಗಣಪತಿ ನಾಯಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT