ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಗೆ ಹೋಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನೆಯಲ್ಲೇ ದಿಗ್ಬಂಧನ

Last Updated 12 ಮಾರ್ಚ್ 2022, 3:58 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನ ಕೆಂದಲಗೇರಿ ಗ್ರಾಮದ ಮನೆಯೊಂದರಲ್ಲಿ ದಾಳಿಗೆಂದು ಬಂದಿದ್ದ ವಲಯ ಅರಣ್ಯ ಅಧಿಕಾರಿ ಸಹಿತ ಸಿಬ್ಬಂದಿಯನ್ನು, ಗ್ರಾಮಸ್ಥರು ಶುಕ್ರವಾರ ರಾತ್ರಿ ಮನೆಯಲ್ಲಿಯೇ ಕೂಡಿ ಹಾಕಿ ಎರಡು ತಾಸು ದಿಗ್ಬಂಧನ ಹಾಕಿದ್ದಾರೆ.

ಗ್ರಾಮದ ಕೆಲವರು ಶುಕ್ರವಾರ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಮರಳಿದ್ದರು. ಇದನ್ನು ಕಂಡ ಕೆಲವರು ಅನುಮಾನಗೊಂಡು, ಜಿಂಕೆ ಬೇಟೆ ಆಡಿದ್ದಾರೆ ಎಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇದೇ ಮಾಹಿತಿ ಆಧರಿಸಿ, ಅರಣ್ಯ ಇಲಾಖೆಯ ಸಿಬ್ಬಂದಿ ಮನೆಯೊಂದರ ಮೇಲೆ ದಾಳಿ ಮಾಡಿದ್ದರು. ಆದರೆ, ಮನೆಯಲ್ಲಿ ಯಾವುದೇ ಬೇಟೆಯಾಡಿದ ಮಾಂಸ, ಇತರ ಸಾಮಗ್ರಿ ಪತ್ತೆಯಾಗಿಲ್ಲ. ದಾಳಿಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ದಾಳಿಯ ನೇತೃತ್ವ ವಹಿಸಿದ್ದ ಆರ್.ಎಫ್.ಒಸುರೇಶ ಕುಲ್ಲೋಳ್ಳಿ ಸಹಿತ ಅರಣ್ಯ ಸಿಬ್ಬಂದಿಗೆ ಮನೆಯಲ್ಲಿಯೇ ದಿಗ್ಬಂಧನ ಹಾಕಿದರು.

ಪಿ.ಎಸ್.ಐ ಬಸವರಾಜ ಮಬನೂರು ಹಾಗೂ ಪೊಲೀಸ್ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು. ನಂತರ ಅರಣ್ಯ ಸಿಬ್ಬಂದಿಯನ್ನು ಪೊಲೀಸ್ ಜೀಪಿನಲ್ಲಿ ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಅಣಿಯಾದರು. ಆದರೆ, ಗ್ರಾಮಸ್ಥರು ಮತ್ತೆ ಅರ್ಧ ಗಂಟೆ ಕಾಲ ಅರಣ್ಯ ಸಿಬ್ಬಂದಿ ಹೋಗದಂತೆ ಜೀಪನ್ನು ತಡೆದರು. ಮಾಹಿತಿ ಕೊಟ್ಟವರ ಹೆಸರು ಹೇಳಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಸುಮಾರು ಒಂದೂವರೆ ಗಂಟೆಗಳ ‍ಪ್ರಯತ್ನದ ಬಳಿಕ ಗ್ರಾಮಸ್ಥರ ಮನವೊಲಿಸಿದ ಪೊಲೀಸರು, ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕರೆದುಕೊಂಡು ಹೋದರು.

ಅರಣ್ಯ ಇಲಾಖೆಯವರು ಮಾರ್ಚ್ 12ರಂದು ಗ್ರಾಮಕ್ಕೆ ಮತ್ತೆ ಭೇಟಿ ನೀಡಬೇಕು. ಮಾಹಿತಿ ಕೊಟ್ಟವರ ಹೆಸರನ್ನು ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿ ಹೋರಾಟ ಮುಂದುವರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT