ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಾಗಿ ಮತ್ತೊಂದು ಸುತ್ತಿನ ಹೋರಾಟ; ಹೊನ್ನಾವರ ತಾಲ್ಲೂಕಿನ ಮಹಿಮೆ ಗ್ರಾಮ

ಹೊನ್ನಾವರ ತಾಲ್ಲೂಕಿನ ಮಹಿಮೆ ಗ್ರಾಮ: ಮಾತಿನಲ್ಲೇ ಉಳಿದ ಭರವಸೆ
Last Updated 30 ಸೆಪ್ಟೆಂಬರ್ 2021, 15:43 IST
ಅಕ್ಷರ ಗಾತ್ರ

ಕಾರವಾರ: ‘ಊರಿಗೆ ಸರ್ವಋತು ರಸ್ತೆ, ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಲಾಗುವುದು’ ಎಂಬ ಜನಪ್ರತಿನಿಧಿಗಳ ಆಶ್ವಾಸನೆಯಿಂದ ರೋಸಿ ಹೋಗಿರುವ ಮಹಿಮೆಯ ಗ್ರಾಮಸ್ಥರು ಮತ್ತೊಂದು ಸುತ್ತಿನ ಹೋರಾಟ ಆರಂಭಿಸಿದ್ದಾರೆ. ಮುಖ್ಯಮಂತ್ರಿಯೂ ಸೇರಿದಂತೆ ವಿವಿಧ ಸಚಿವರಿಗೆ ಪತ್ರ ಬರೆದು ಬೇಡಿಕೆ ಈಡೇರಿಸಲು ಆಗ್ರಹಿಸುತ್ತಿದ್ದಾರೆ.

ಹೊನ್ನಾವರ ತಾಲ್ಲೂಕಿನ ಉಪ್ಪೋಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಮೆ ಗ್ರಾಮವು ನಾಗರಿಕ ಸೌಲಭ್ಯಗಳಿಂದ ಸಾಕಷ್ಟು ಹಿಂದುಳಿದಿದೆ. ಗ್ರಾಮಕ್ಕೆ ಮೂಲ ಸೌಕರ್ಯ ಕೊಡುವಂತೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಶಿಕ್ಷಣ ಖಾತೆಗಳ ಸಚಿವರು, ಸಂಸದ, ಶಾಸಕ, ಜಿಲ್ಲಾಧಿಕಾರಿ ಹಾಗೂ ಹೊನ್ನಾವರ ತಾಹಶೀಲ್ದಾರ್‌ಗೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ.

ಗ್ರಾಮದ ರಸ್ತೆಯ ಪರಿಸ್ಥಿತಿಯ ಕುರಿತು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಎಂಟು ಕಿಲೋಮೀಟರ್ ನಡೆದುಕೊಂಡು ಬಂದು ಬಸ್ ಏರುವ ಬಗ್ಗೆ ‘ಪ್ರಜಾವಾಣಿ’ಯ ಮಾರ್ಚ್ 13ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದು ವಿಧಾನಪರಿಷತ್ತಿನಲ್ಲೂ ಚರ್ಚೆಯಾಗಿ ಗ್ರಾಮಕ್ಕೆ ತಕ್ಷಣದಿಂದಲೇ ಬಸ್ ಸಂಚಾರ ಆರಂಭವಾಗಿತ್ತು.

ಆದರೆ, ರಸ್ತೆಯ ದುಃಸ್ಥಿತಿಯಿಂದಾಗಿ ಸಾರಿಗೆ ಸೌಕರ್ಯ ಮುಂದುವರಿಯಲಿಲ್ಲ. ಹಾಗಾಗಿ ಗ್ರಾಮಸ್ಥರು ಪುನಃ ಎಂಟು ಕಿಲೋಮೀಟರ್ ನಡೆದುಕೊಂಡೇ ರಾಷ್ಟ್ರೀಯ ಹೆದ್ದಾರಿ 206ರ (69) ಮಹಿಮೆ ಕ್ರಾಸ್‌ಗೆ ಬರುತ್ತಿದ್ದಾರೆ. ಗ್ರಾಮದಲ್ಲಿರುವ ಸುಮಾರು 40 ವಿದ್ಯಾರ್ಥಿಗಳು ನಿತ್ಯವೂ ಇಲ್ಲಿಂದಲೇ ಶಾಲಾ ಕಾಲೇಜುಗಳಿಗೆ ಬಸ್ ಏರುತ್ತಿದ್ದಾರೆ. ತರಗತಿಗಳು ಮುಕ್ತಾಯವಾದ ಬಳಿಕ ಪುನಃ ಗಾಳಿ, ಮಳೆಯಲ್ಲಿ ಕಾಡಿನ ದಾರಿಯಲ್ಲಿ ಸಾಗಿ ಮನೆ ಸೇರುತ್ತಿದ್ದಾರೆ.

‘ಮಳೆಗಾಲದಲ್ಲಿ ಆರು ತಿಂಗಳು ನಮ್ಮ ಊರಿಗೆ ಇಂದಿಗೂ ಸಂಪರ್ಕವಿರುವುದಿಲ್ಲ. ಮಳೆಗಾಲದಲ್ಲಿ ರಸ್ತೆಯ ತುಂಬ ಕೆಸರು, ಬೇಸಿಗೆಯಲ್ಲಿ ದೂಳು. ಇದರಿಂದ ಸಂಚಾರ ದುಸ್ತರವಾಗಿದೆ. ರೈತರು ಫಸಲನ್ನು ಮಾರಾಟಕ್ಕೆ ತೆಗೆದುಕೊಂಡು ಹೋಗಲೂ ಆಗುತ್ತಿಲ್ಲ. ಕೂಲಿಯಾಳಿನ ದಿನದ ದುಡಿಮೆ ₹ 350 ಆಗಿದ್ದರೆ, ಕೆಲಸಕ್ಕೆ ಬರಲು ಆತ ಆಟೊರಿಕ್ಷಾಕ್ಕೆ ₹ 250 ಖರ್ಚು ಮಾಡಬೇಕಿದೆ. ಗರ್ಭಿಣಿಯರನ್ನು, ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮಸ್ಥ ರಾಜೇಶ ನಾಯ್ಕ ಅಳಲು ತೋಡಿಕೊಳ್ಳುತ್ತಾರೆ.

ಗ್ರಾಮಕ್ಕೆ ಹಲವು ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆದರೂ ರಸ್ತೆಯ ಬೇಡಿಕೆಗೆ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಕೊರಗು ಗ್ರಾಮಸ್ಥರದ್ದಾಗಿದೆ.

ಪ್ರತಿ ವರ್ಷದ ಖರ್ಚು!:

‘ಮಹಿಮೆಯ ರಸ್ತೆಗೆ ಉಪ್ಪೋಣಿ ಗ್ರಾಮ ಪಂಚಾಯಿತಿಯಿಂದ ಪ್ರತಿ ವರ್ಷ ಮರಳು, ಕಲ್ಲು ಸುರಿದು ದುರಸ್ತಿ ಮಾಡಲಾಗುತ್ತಿದೆ. ವರ್ಷವೂ ಸುಮಾರು ₹ 1.50 ಲಕ್ಷವನ್ನು ಖರ್ಚು ಮಾಡಲಾಗುತ್ತಿದೆ. ಆದರೆ, ಅದು ಮಳೆ ಬಂದಾಗ ಕೊಚ್ಚಿಕೊಂಡು ಹೋಗುತ್ತದೆ. ಹಾಗಾಗಿ ಎಲ್ಲವೂ ವ್ಯರ್ಥವಾಗುತ್ತಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ, ಮಹಿಮೆಯ ಗಣೇಶ ನಾಯ್ಕ.

‘ಗ್ರಾಮದ ರಸ್ತೆಯನ್ನು ಸರಿ ಮಾಡಿಸಿಕೊಟ್ಟರೆ ಬಸ್ ಸಂಚಾರ ಆರಂಭಿಸುವುದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು ಹೇಳುತ್ತಾರೆ. ಶಾಸಕರು, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಆದರೂ ರಸ್ತೆಯು ಡಾಂಬರು ಕಾಣುತ್ತಿಲ್ಲ. ಈ ಕಾಮಗಾರಿಯಾದರೆ ಹಲವು ಬಸ್ ಸೇರಿದಂತೆ ಹಲವು ಸೌಕರ್ಯಗಳು ತನ್ನಿಂತಾನೆ ಬರುತ್ತವೆ’ ಎಂದು ಅವರು ಹೇಳುತ್ತಾರೆ.

------

* ಗ್ರಾಮಕ್ಕೆ ರಸ್ತೆ ನಿರ್ಮಾಣ ವಿಚಾರದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರವು ಉದಾರ ಮನಸ್ಸು ತೋರಿಸಿ ಅನುಕೂಲ ಮಾಡಬೇಕು.

- ಡಾ.ಸತೀಶ ನಾಯ್ಕ‌, ಮಹಿಮೆ ಗ್ರಾಮಸ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT