ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಲಾಕ್‌ಡೌನ್ ಪರಿಣಾಮ ಹಿತ್ತಲ ತರಕಾರಿಗೆ ಹೆಚ್ಚಿದ ಒಲವು

ಹಳ್ಳಿಗಳಲ್ಲಿ ಪೇಟೆ ತರಕಾರಿಗೆ ಸ್ವಯಂ ಪ್ರೇರಣೆ
Last Updated 11 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಶಿರಸಿ: ಕೊರೊನಾ ವೈರಸ್‌ ಭೀತಿ ಆವರಿಸಿದ ಮೇಲೆ ಅನೇಕ ಕಡೆಗಳಲ್ಲಿ ಹಳ್ಳಿಗರು ಇಡೀ ಹಳ್ಳಿಗೆ ದಿಗ್ಬಂಧನ ಹಾಕಿಕೊಂಡಿದ್ದಾರೆ. ನಗರವಾಸಿಗಳು ಹಳ್ಳಿಗೆ ಬರದಂತೆ ಊರ ಬಾಗಿಲಲ್ಲಿ ಫಲಕ ಹಾಕಿದ್ದಾರೆ. ಈಗ ಪೇಟೆ ತರಕಾರಿ ಅವಲಂಬನೆಯೂ ಕಡಿಮೆಯಾಗಿದೆ. ಮನೆ ಹಿತ್ತಲಿನ ಸೊಪ್ಪು, ನಾಟಿ ತರಕಾರಿಯತ್ತ ಒಲವು ಹೆಚ್ಚಿದೆ.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಹಿಳೆಯರು ಹೂ ಗಿಡಗಳ ಹಿತ್ತಲಿನ ಜತೆಗೆ, ತರಕಾರಿ ಹಿತ್ತಲು ಬೆಳೆಸುತ್ತಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಂಪರ್ಕ ಸಾಧನಗಳ ವ್ಯವಸ್ಥೆ ಸುಧಾರಣೆ ಕಂಡ ಮೇಲೆ ಪೇಟೆ ಮತ್ತು ಹಳ್ಳಿಗಳ ನಡುವಿನ ಅಂತರ ಕಡಿಮೆಯಾಗಿ, ಪೇಟೆಗೆ ಬಂದ ಹಳ್ಳಿಗರು ವಾಪಸ್ಸಾಗುವಾಗ ತರಕಾರಿ ಕೊಂಡೊಯ್ಯುತ್ತಿದ್ದರು. ಈಗ ಕೊರೊನಾ, ಹಳ್ಳಿಗರನ್ನು ದಶಕದ ಹಿಂದಿನ ಜೀವನ ಶೈಲಿಗೆ ಮರಳಿಸಿದೆ.

ಸಾಂಪ್ರದಾಯಿಕ ಅಡುಗೆಯ ಘಮ ಹಳ್ಳಿ ಮನೆಗಳನ್ನು ಆವರಿಸಿದೆ. ಹಲಸಿನಕಾಯಿ, ಪಪ್ಪಾಯಿ, ಮೊಗೆಕಾಯಿ, ಕುಂಬಳ, ಮುಳ್ಳು ಸವತೆ, ಬಸಳೆಯಂತಹ ಮಲೆನಾಡ ತರಕಾರಿಗಳು, ಹಿತ್ತಲಿನ ಬೆಳೆಸಿದ ಹರಿವೆ, ಮೆಂತೆಸೊಪ್ಪು, ತೊಂಡೆಕಾಯಿ, ಬದನೆ, ಬೆಂಡೆ, ಟೊಮೆಟೊ ಬಳಸಿ ಹಳ್ಳಿಗಳಲ್ಲಿ ಅಡುಗೆ ಸಿದ್ಧವಾಗುತ್ತಿದೆ. ಬಿರು ಬೇಸಿಗೆಯಲ್ಲಿ ಅಂಗಳದ ಕಣದಲ್ಲಿ ಹಸಿರು ಹಾಸು ಕಣ್ಣಿಗೆ ತಂಪು ನೀಡುತ್ತಿದೆ.

‘ಹಳ್ಳಿಗೆ ತರಕಾರಿ ಮಾರಾಟಕ್ಕೆ ಬರುತ್ತದೆ. ತರಕಾರಿ ತರುವವರಲ್ಲಿ ಬಹಳಷ್ಟು ಜನರು ಒಳ್ಳೆಯವರೇ ಇರುತ್ತಾರೆ. ಆದರೆ, ಹೊರಗಿನಿಂದ ಬರುವ ತರಕಾರಿಗೆ ಸೋಂಕು ತಗುಲಿರಬಹುದೆಂದು ಭಯವಾಗುತ್ತದೆ. ಹಳ್ಳಿಯಲ್ಲಿ ಜಾಗದ ಅಭಾವವಂತೂ ಇಲ್ಲ. ಹೀಗಾಗಿ, ಮನೆಯಲ್ಲೇ ಬೆಳೆಸಿಕೊಳ್ಳುವ ಉಪಾಯ ಕಂಡುಕೊಂಡು, ಪೇಟೆಯ ತರಕಾರಿಗೆ ಬಹುತೇಕ ಲಾಕ್‌ಡೌನ್ ಮಾಡಿದ್ದೇವೆ. ಪೇಟೆಯಿಂದ ತರುವುದಿದ್ದರೆ ಈರುಳ್ಳಿ, ಬೆಳ್ಳುಳ್ಳಿ ಮಾತ್ರ’ ಎನ್ನುತ್ತಾರೆ ಗೃಹಿಣಿ ಮಹಾದೇವಿ ಹೆಗಡೆ.

‘ಡಬ್ಬದಲ್ಲಿರುವ ತರಕಾರಿ ಬೀಜಗಳು ಹಿತ್ತಲಿನಲ್ಲಿ ಮೊಳಕೆಯೊಡೆದು ಹಸಿರನ್ನು ಚಿಗುರಿಸಿವೆ. ಇದು ಉಳಿತಾಯದ ಜೊತೆಗೆ, ಆರೋಗ್ಯ ಕಾಳಜಿಯ ಉಪಾಯವೂ ಹೌದು. ತರಕಾರಿ ಹಿತ್ತಲು ಮಾಡುವುದು ಕಷ್ಟವೇನಲ್ಲ. ತಿಂಗಳೊಪ್ಪತ್ತಿನಲ್ಲಿ ಫಲವೂ ಸಿಗುತ್ತದೆ. ದಿನಕ್ಕೆ ಒಂದು ತಾಸು ಸಮಯ ಮೀಸಲಿಟ್ಟರೆ ಸಾಕು’ ಎನ್ನುತ್ತಾರೆ ಯಲ್ಲಾಪುರ ಕಳಚೆಯ ಸುಜಾತಾ ಗದ್ದೆ.

‘ಬೆಲ್ಲ ಹಾಕಿ ಮಾಡಿದ ಸೌತೆಕಾಯಿ ಸಿರಾದ ರುಚಿ ಸವಿದವರಿಗೇ ಗೊತ್ತು. ಪೇಟೆ ತಿಂಡಿಯ ನಡುವೆ ಮರೆಯಾಗಿದ್ದ, ಬೆಲ್ಲದ ಅಕ್ಕಿ ಉಂಡೆ, ಮುಳಕ, ಎಳ್ಳು, ಹೆಸರು, ಉದ್ದಿನ ಕಾಳಿನ ತಂಪು ಪಾನೀಯ ಹೀಗೆ ಸಾಂಪ್ರದಾಯಿಕ ತಿನಿಸುಗಳು ಮತ್ತೆ ಮುನ್ನಲೆಗೆ ಬಂದಿವೆ. ಒಂದೆಲಗ, ಸೂರಲಕುಡಿ, ಎಲೆಗುರಿಗೆ, ಮಜ್ಜಿಗೆಹುಲ್ಲು, ತೊಂಡೆಕುಡಿ, ಬಿಲ್ವಪತ್ರೆ ಹೀಗೆ ನಾನಾ ಬಗೆಯ ಸೊಪ್ಪಿನ ತಂಬುಳಿ ಬಿಸಿಲ ಧಗೆಗೆ ತಂಪು ನೀಡುತ್ತದೆ. ಇವೆಲ್ಲ ಸ್ವಾದಿಷ್ಟ ಮಾತ್ರವಲ್ಲ, ಶಕ್ತಿವರ್ಧಕವೂ ಹೌದು’ ಎನ್ನುತ್ತಾರೆ ಮಲವಳ್ಳಿಯ ಸೀತಾ ಭಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT