ಮಂಗಳವಾರ, ಸೆಪ್ಟೆಂಬರ್ 21, 2021
21 °C
ಅಲ್ಲಲ್ಲಿ ಕುಸಿಯುತ್ತಿರುವ ಪಿಚ್ಚಿಂಗ್

ಅಪೂರ್ಣವಾದ ಸೇತುವೆ ಕಾಮಗಾರಿ: ಸಾಲ್ಕೋಡು ಹಳ್ಳ ದಾಟಲು ಸಾಹಸ

ಸದಾಶಿವ ಎಂ.ಎಸ್. Updated:

ಅಕ್ಷರ ಗಾತ್ರ : | |

ಕಾರವಾರ: ಈ ಊರಿನ ಹಳ್ಳದ ಎರಡೂ ಕಡೆ ಸೇತುವೆ ಕಾಮಗಾರಿ ಶುರುವಾಗಿ ನಾಲ್ಕೈದು ವರ್ಷಗಳಾದವು. ಆದರೆ, ಪೂರ್ಣಗೊಳಿಸಲು ಇನ್ನೂ ಕಾಲ ಕೂಡಿಬಂದಿಲ್ಲ. ಹಾಗಾಗಿ ಗ್ರಾಮಸ್ಥರು ಮಳೆಗಾಲದಲ್ಲಿ ಆತಂಕದಲ್ಲೇ ಕಾಲುಸಂಕ ದಾಟುವುದು ತಪ್ಪಿಲ್ಲ.

ಹೊನ್ನಾವರ ತಾಲ್ಲೂಕಿನ ಸಾಲ್ಕೋಡಿನಿಂದ ಕವಲಕ್ಕಿಗೆ ಬರುವ ದಾರಿಯಲ್ಲಿ ಸಿಗುವ ಹಳ್ಳದ ಸೇತುವೆಯ ಕಾಮಗಾರಿ ಅರ್ಧಕ್ಕೇ ನಿಂತಿದೆ. ಸಾಲ್ಕೋಡು ಗ್ರಾಮದವರಿಗೆ ರಾಷ್ಟ್ರೀಯ ಹೆದ್ದಾರಿ 206ನ್ನು ಸಂಪರ್ಕಿಸಲು ಸಮೀಪದ ದಾರಿ ಇದಾಗಿದೆ. ‌ಸಾಲ್ಕೋಡು– ಹಮ್ಮೋಡಿ–ಗಾಂಗೇರಿ ಮೂಲಕ ಕವಲಕ್ಕಿಯನ್ನು ಕೇವಲ ಏಳೆಂಟು ಕಿಲೋಮೀಟರ್ ಅಂತರದಲ್ಲಿ ಸಂಪರ್ಕಿಸಲು ಸಾಧ್ಯವಾಗಲಿದೆ. ಕವಲಕ್ಕಿ ಭಾಗದಲ್ಲೇ 24x7 ಆರೋಗ್ಯ ಕೇಂದ್ರ, ಪಶು ಆಸ್ಪತ್ರೆಯಿದೆ. ಆದರೆ, ಈಗ ಅರೆ ಅಂಗಡಿ– ಭಾಸ್ಕೇರಿ ಮೂಲಕ ಸುಮಾರು 15 ಕಿಲೋಮೀಟರ್ ಸಂಚರಿಸಬೇಕಿದೆ.

‘ಹಳ್ಳದ ಆರಂಭ ಮತ್ತು ಕೊನೆಯಲ್ಲಿ ಎರಡೂ ಕಡೆಗಳಲ್ಲಿ ಸೇತುವೆಗಳ ಕಾಮಗಾರಿ ಅರ್ಧಂಬರ್ಧ ಮಾಡಲಾಗಿದೆ. ಹಳ್ಳದಲ್ಲಿ ಪಿಲ್ಲರ್‌ಗಳನ್ನು ಅಳವಡಿಸಲಾಗಿದೆ. ಸಮೀಪದಲ್ಲಿರುವ ಖಾಸಗಿ ಜಮೀನಿನ ಅಂಚಿನಲ್ಲಿ ಪಿಚ್ಚಿಂಗ್ ನಿರ್ಮಿಸಲಾಗಿದೆ. ಈಗ ಅದು ಅಲ್ಲಲ್ಲಿ ಕುಸಿಯಲು ಆರಂಭಿಸಿದೆ. ಒಂದುವೇಳೆ, ಕಾಮಗಾರಿಯ ಮುಂದುವರಿಸಲು ಸಮಸ್ಯೆಯಿದ್ದರೆ ಸ್ಥಳ ಬದಲಾವಣೆ ಮಾಡಲಿ’ ಎನ್ನುತ್ತಾರೆ ಕವಲಕ್ಕಿಯ ವಿನಯ ಶೆಟ್ಟಿ.

‘ಸಾಲ್ಕೋಡಿನಲ್ಲಿ ಶಾಲೆಯಿದೆ. ಗ್ರಾಮ ಕೇಂದ್ರಕ್ಕೆ, ಮತದಾನ ಕೇಂದ್ರಕ್ಕೆ ಕೂಡ ಇದೇ ದಾರಿಯಿಂದ ಹೋಗಬೇಕಿದೆ. ಮಳೆಗಾದಲ್ಲಿ ಹಳ್ಳ ಉಕ್ಕಿ ಹರಿಯುತ್ತದೆ. ಗ್ರಾಮದವರು ಸೇರಿಕೊಂಡು ಪಿಲ್ಲರ್‌ಗಳಿಗೆ ಅಡಿಕೆ ಮರದ ದಬ್ಬೆ ಕಟ್ಟಿ ಕಾಲುಸಂಕ ನಿರ್ಮಿಸಿಕೊಳ್ಳುತ್ತಾರೆ. ಆದರೆ, ಅದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತದೆ. ಅಂಥದ್ದರಲ್ಲಿ ಶಾಲಾ ಮಕ್ಕಳು, ಹಿರಿಯರು, ಮಹಿಳೆಯರು ಆತಂಕದಲ್ಲೇ ದಾಟುತ್ತಾರೆ’ ಎಂದು ವಿವರಿಸುತ್ತಾರೆ.

ಮತ್ತೊಬ್ಬ ಗ್ರಾಮಸ್ಥ ಮಂಜುನಾಥ ಐ. ಕೊಡಿಯಾ, ‘ಸಾಲ್ಕೋಡಿನಿಂದ ಕವಲಕ್ಕಿಗೆ ವಾಹನ ಸಂಚರಿಸುವುದಿಲ್ಲ.  ದೈನಂದಿನ ಕೆಲಸಕ್ಕೆ ಹೋಗಲು ಅದೇ ದಾರಿಯಾಗಿದೆ. ಸಾಲ್ಕೋಡು ಹಳ್ಳದ ಆರಂಭದಲ್ಲಿ ಹಲವು ಸಣ್ಣ ಸೇತುವೆ ನಿರ್ಮಿಸಲಾಗಿದೆ. ಅಲ್ಲಿ ಕಿರು ಜಲಾಶಯ ನಿರ್ಮಾಣವೂ ಆಗುತ್ತಿದೆ. ಅಲ್ಲಿಂದ ಮುಂದೆ ಸೇತುವೆ ಪೂರ್ಣಗೊಂಡರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ.

‘ಮನವಿ ಮಾಡಲಾಗಿದೆ’: ‘ಹಳ್ಳದಲ್ಲಿ ಸೇತುವೆಯ ಮುಂದುವರಿದ ಕಾಮಗಾರಿ ಹಮ್ಮಿಕೊಳ್ಳುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ. ಹಳ್ಳದ ಆರಂಭದಲ್ಲಿ ಮಾಡಿದಂತೆ ನಾಲ್ಕು ಚಕ್ರಗಳ ವಾಹನ ಸಾಗುವಷ್ಟು ಅಗಲದ ಸೇತುವೆ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ. ಶಾಸಕ ದಿನಕರ ಶೆಟ್ಟಿ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ’ ಎಂದು ಸಾಲ್ಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ನಾಯ್ಕ ಪ್ರತಿಕ್ರಿಯಿಸಿದ್ದಾರೆ.

------

ಸಾಲ್ಕೋಡು ಹಳ್ಳಕ್ಕೆ ಸೇತುವೆಯ ಮುಂದುವರಿದ ಕಾಮಗಾರಿ ನಡೆಸಿ ಅನುಕೂಲ ಮಾಡಿಕೊಡಲಾಗುವುದು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.

- ದಿನಕರ ಶೆಟ್ಟಿ, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು