ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ್ಲಿಕಲ್ಲು ಮೇಲೆ ದಿನವೂ ಸಂಚಾರ

ಒಂದೂವರೆ ವರ್ಷವಾದರೂ ಮುಗಿಯದ ನಾಲ್ಕೂವರೆ ಕಿ.ಮೀ ರಸ್ತೆ ಕಾಮಗಾರಿ
Last Updated 8 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಮುಂಡಗೋಡ: ಈ ರಸ್ತೆಯಲ್ಲಿ ಒಂದೂವರೆ ವರ್ಷದ ಹಿಂದೆ ಜಲ್ಲಿಕಡಿ ಸುರಿದರೂ ಡಾಂಬರು ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಜಲ್ಲಿ ಹರಡಿರುವ ರಸ್ತೆಯಲ್ಲಿಯೇ ಬೈಕ್ ಸವಾರರು ಬಿದ್ದು, ಎದ್ದು ಸಂಚರಿಸುತ್ತಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಟೈರ್‌ಗಳೂ ಕೆಡುತ್ತಿವೆ. ವಾಹನ ಸವಾರರು ಹೈರಾಣಾಗುತ್ತಿದ್ದಾರೆ.

ಇದು ತಾಲ್ಲೂಕಿನ ಗುಂಜಾವತಿ ಗ್ರಾಮದಿಂದ ಯರೇಬೈಲ್‌ವರೆಗೆ ಸಾಗುವ ರಸ್ತೆಯೊಂದರ ದುರವಸ್ಥೆ. ನಾಲ್ಕೂವರೆ ಕಿಲೋಮೀಟರ್ ಉದ್ದದ ಈ ರಸ್ತೆಯ ಕಾಮಗಾರಿಯು ಒಂದೂವರೆ ವರ್ಷದ ಹಿಂದೆ ಆರಂಭವಾದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಜಲ್ಲಿಕಡಿಯ ಮೇಲೆಯೇ ಗ್ರಾಮಸ್ಥರು ಹರಸಾಹಸ ಮಾಡಿಕೊಂಡು ಸಾಗುತ್ತಿದ್ದಾರೆ. ಕಾಮಗಾರಿಯು ಪಂಚವಾರ್ಷಿಕ ಯೋಜನೆಗಳ ಪಟ್ಟಿಗೆ ಸೇರ್ಪಡೆಯಾಗುತ್ತದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.

‘ಕಾಡಿನ ಮಧ್ಯೆ ಹಾದು ಹೋಗಿರುವ ರಸ್ತೆಯಲ್ಲಿ, ಜಲ್ಲಿ ಕಡಿಗಳನ್ನು ಹರಡಿದ್ದು ಬಿಟ್ಟರೆ, ಮತ್ತೇನೂ ಅಭಿವೃದ್ಧಿ ಮಾಡಿಲ್ಲ. ಬೈಕ್ ಸವಾರರು ನಿಧಾನವಾಗಿ ಚಲಿಸುವುದು ಅನಿವಾರ್ಯವಾಗಿದೆ. ರಾತ್ರಿ ವೇಳೆಯಲ್ಲಿ ಕರಡಿ ಸಹಿತ ಇತರ ಕಾಡುಪ್ರಾಣಿಗಳು ಬೆನ್ನು ಹತ್ತಿದರೂ, ವೇಗವಾಗಿ ಹೋಗಲು ಆಗದಂಥ ಪರಿಸ್ಥಿತಿಯಿದೆ. ಜೀವ ಕೈಯಲ್ಲಿ ಹಿಡಿದುಕೊಂಡೇ ಊರು ಸೇರಬೇಕಾಗಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂತೋಷ ವರಕ್.

‘ಮೊದಲು ರಸ್ತೆಯ ಅಲ್ಲಲ್ಲಿ ತಗ್ಗು ಬಿದ್ದಿತ್ತು. ಈಗಿರುವ ರಸ್ತೆಗಿಂತ ಅದುವೇ ಉತ್ತಮವಾಗಿತ್ತು. ಕಾಮಗಾರಿ ಮಾಡುವ ಭರದಲ್ಲಿ ಇದ್ದ ರಸ್ತೆಯನ್ನೂ ಅಗೆದು ತಿಂಗಳುಗಟ್ಟಲೇ ಬಿಟ್ಟರು. ಜನರ ಒತ್ತಡ ಹೆಚ್ಚಾದಾಗ ಜಲ್ಲಿ ಕಡಿ ತಂದು ಹರಡಿದರು. ಅದರ ನಂತರ ಮತ್ತೇನೂ ಕೆಲಸ ನಡೆಯಲಿಲ್ಲ’ ಎಂದು ಗ್ರಾಮಸ್ಥ ವಿಠ್ಠು ಬೇಸರಿಸುತ್ತಾರೆ.

‘30ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮುಂಡಗೋಡ ಹಾಗೂ ಮೈನಳ್ಳಿ ಶಾಲೆ, ಕಾಲೇಜುಗಳಿಗೆ ಹೋಗುತ್ತಾರೆ. ಒಂದೊಂದು ಸಲ ಬಸ್ ತಪ್ಪಿದರೆ, ಬೈಕ್ ಮೇಲೆ ಕರೆದುಕೊಂಡು ಬರಬೇಕು. ಕೆಲವು ಮಕ್ಕಳು ರಸ್ತೆ ಸಮಸ್ಯೆಯಿಂದ ಶಾಲೆಗೆ ಹೋಗಲೂ ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ದುರಸ್ತಿಗೆ ಒತ್ತಾಯಿಸಿದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ಗ್ರಾಮಸ್ಥ ಭಾಗು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಗುತ್ತಿಗೆದಾರರಿಗೆ ಸೂಚನೆ:‘ಕೋವಿಡ್ ಹಾಗೂ ನೆರೆಹಾವಳಿಯಿಂದ ರಸ್ತೆ ದುರಸ್ತಿಗೆ ವಿಳಂಬವಾಗಿದೆ. ಕೂಡಲೇ ರಸ್ತೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು’ ಎಂದು ಲೋಕೋಪಯೋಗಿ ಎಂಜಿನಿಯರ್ ಎಚ್.ರಾಜು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT