ನೀರು ಕೊಟ್ಟರೆ ವೋಟು ಕೊಟ್ಟೇವು: ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

ಬುಧವಾರ, ಏಪ್ರಿಲ್ 24, 2019
30 °C
ನಾಖುದಾ ಮೊಹಲ್ಲಾ ಗ್ರಾಮಸ್ಥರಿಂದ ನಿರ್ಣಯ

ನೀರು ಕೊಟ್ಟರೆ ವೋಟು ಕೊಟ್ಟೇವು: ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

Published:
Updated:
Prajavani

ಕಾರವಾರ: ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಿಲ್ಲ ಎಂದು ಲೋಕಸಭಾ ಚುನಾವಣೆ ಬಹಿಷ್ಕರಿಸಲು ಚಿತ್ತಾಕುಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಖುದಾ ಮೊಹಲ್ಲಾದ ನಿವಾಸಿಗಳು ಮುಂದಾಗಿದ್ದಾರೆ.

ಈ ಬಗ್ಗೆ ಗ್ರಾಮ ಪಂಚಾಯ್ತಿಗೂ ಲಿಖಿತವಾಗಿ ಹೇಳಿಕೆ ನೀಡಿದ್ದು, ‘ನೀರು ಕೊಟ್ಟರೆ ಮಾತ್ರ ವೋಟು ಕೊಡುವೆವು’ ಎಂದು ಪಟ್ಟು ಹಿಡಿದಿದ್ದಾರೆ. 200ಕ್ಕೂ ಅಧಿಕ ಮನೆಗಳು ಇರುವ ಈ ಮೊಹಲ್ಲಾದಲ್ಲಿ ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ.

ಅಲ್ಪಸಂಖ್ಯಾತರೇ ಇಲ್ಲಿದ್ದು, ಗ್ರಾಮಸ್ಥ ಫಕ್ರುದ್ದೀನ್ ದಾವೂದ್ ಅವರ ಸ್ವಂತ ಬಾವಿಯೂ ಇದೆ. ಆದರೆ, ಇದರಲ್ಲಿ ತೈಲದ ಅಂಶ ಸೇರಿಕೊಂಡಿದ್ದು, ಮಲಿನಗೊಂಡಿದೆ. ಹೀಗಾಗಿ ಗ್ರಾಮದಲ್ಲಿರುವ ಇದ್ರಿಸಿಯಾ ಮಸೀದಿಯ ಬಾವಿಯ ನೀರನ್ನೇ ಇಲ್ಲಿನ ನಿವಾಸಿಗಳು ದಿನನಿತ್ಯ ಬಳಕೆ ಮಾಡುತ್ತಿದ್ದಾರೆ.

ಒಂದೇ ಬಾವಿ ಆಧಾರ:

‘ಗ್ರಾಮದಲ್ಲಿ ಎಲ್ಲಿಯೂ ಸಿಹಿ ನೀರಿನ ಮೂಲವಿಲ್ಲ. ಎಲ್ಲಿಯಾದರೂ ಬಾವಿ ತೋಡಿದರೆ, ಉಪ್ಪು ಮಿಶ್ರಿತ, ಬಳಸಲು ಯೋಗ್ಯವಲ್ಲದ ಜಲ ಬರುತ್ತದೆ. ಹೀಗಾಗಿ ಬಾವಿಯನ್ನು ನಿರ್ಮಿಸಲು ಯಾರೂ ಆಸಕ್ತಿ ತೋರಿಲ್ಲ. ಹಲವು ವರ್ಷಗಳಿಂದ ಗ್ರಾಮದ ನಿವಾಸಿಗಳು ಮಸೀದಿಯ ಬಾವಿಯ ನೀರನ್ನು ಬಳಕೆ ಮಾಡುತ್ತಿದ್ದಾರೆ. ಆದರೆ, ಈ ಬಾವಿಯ ನೀರು ಕೂಡ ಸದ್ಯ ಬತ್ತಿ ಹೋಗುವ ಪರಿಸ್ಥಿತಿಯಲ್ಲಿದೆ’ ಎನ್ನುವುದು ಗ್ರಾಮಸ್ಥ ಫಕ್ರುದ್ದೀನ್ ದಾವೂದ್ ಅವರ ಆತಂಕ.

‘ಚುನಾವಣೆಯ ಸಮಯದಲ್ಲಿ ಪ್ರಚಾರಕ್ಕಾಗಿ ಬರುವ ರಾಜಕೀಯ ಮುಖಂಡರು, ಪ್ರತಿ ಬಾರಿಯೂ ನಮಗೆ ಬೆಟ್ಟದಷ್ಟು ಆಶ್ವಾಸನೆಗಳನ್ನು ನೀಡಿ ತೆರಳುತ್ತಾರೆ. ಈ ನೀರಿನ ಸಮಸ್ಯೆ ಬಗೆಹರಿಸಿಕೊಡಲು ಹಲವು ಬಾರಿ ಜನಪ್ರತಿನಿಧಿಗಳನ್ನು ಕೇಳಿಕೊಂಡೆವು. ಅಧಿಕಾರಿಗಳಿಗೆ, ಗ್ರಾಮ ಪಂಚಾಯ್ತಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ನಮಗೆ ಈ ಆಡಳಿತ ವ್ಯವಸ್ಥೆಯ ಮೇಲೆ ಜಿಗುಪ್ಸೆ ಬಂದಿದೆ. ಹೀಗಾಗಿ ಈ ಬಾರಿ ಸಾಮೂಹಿಕವಾಗಿ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ’ ಎನ್ನುತ್ತಾರೆ ಗ್ರಾಮದ ನಿವಾಸಿ ಸುಮಯ್ಯಾ ಬಾನು.

‘ನೀರಿನ ಮೂಲಗಳಿಲ್ಲ’: ‘ನಾಖುದಾ ಮೊಹಲ್ಲಾದ ನಿವಾಸಿಗಳು ನೀರಿನ ಸಮಸ್ಯೆಯ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಅದನ್ನು ಬಗೆಹರಿಸಿಕೊಡಲು ನಮ್ಮಲ್ಲೂ ಯಾವುದೇ ಮೂಲಗಳಿಲ್ಲ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಚಿತ್ತಾಕುಲಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ನಾಯ್ಕ.

‘ಈ ಗ್ರಾಮಕ್ಕೆ ಗೋಟೆಗಾಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಂಪರ್ಕ ನೀಡಲು ಪೈಪ್‌ಲೈನ್ ಹಾಕಲಾಗಿದೆ. ಆದರೆ, ಅದು ಅರ್ಧಕ್ಕೆ ನಿಂತಿದೆ. ಉಳಿದಂತೆ ಅಲ್ಲಿ ನೀರು ಪೂರೈಕೆ ಮಾಡಲು ಸಮೀಪದಲ್ಲಿ ಅಥವಾ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿನ ಮೂಲಗಳು ಇಲ್ಲ’ ಎಂದು ಹೇಳುತ್ತಾರೆ.

‘ಮನವಿಯ ಆಧಾರದ ಮೇರೆಗೆ ಗುರುವಾರ ಗ್ರಾಮ ಲೆಕ್ಕಾಧಿಕಾರಿ ಅವರೊಂದಿಗೆ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸುತ್ತೇವೆ. ಯಾವ ರೀತಿ ನೀರಿನ ಸಂಪರ್ಕ ನೀಡಬಹುದು ಎಂಬ ಬಗ್ಗೆಯೂ ಗ್ರಾಮಸ್ಥರ ಜತೆ ಚರ್ಚೆ ನಡೆಸುತ್ತೇವೆ’ ಎಂದು ಅವರು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !