ಮಂಗಳವಾರ, ಏಪ್ರಿಲ್ 20, 2021
29 °C
ಕಾಡಿನ ನಡುವೆ ಸಾಗಿದ ತಂತಿಗಳು, ಪರಿವರ್ತಕಗಳ ನಿರ್ವಹಣೆಯ ಕೊರತೆ

ಕಾರವಾರ: ಹಳ್ಳಿಗಳಲ್ಲಿ ಇನ್ನೂ ಇದೆ ವಿದ್ಯುತ್ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ರಾಜ್ಯದಲ್ಲೇ ಅತಿಹೆಚ್ಚು ಜಲವಿದ್ಯುತ್ ಉತ್ಪಾದಿಸುವ ಜಿಲ್ಲೆಯೆಂಬ ಹೆಗ್ಗಳಿಕೆ ಉತ್ತರ ಕನ್ನಡಕ್ಕಿದೆ. ಆದರೆ, ವಿದ್ಯುತ್‌ಗಾಗಿ ಪರಿತಪಿಸುವುದು ಮಾತ್ರ ತಪ್ಪಿಲ್ಲ. ಪ್ರತಿ ವಾರವೂ ನಿರ್ದಿಷ್ಟ ದಿನದಂದು ತಂತಿ ನಿರ್ವಹಣೆಗೆಂದು ವಿದ್ಯುತ್ ಕಡಿತ ಮಾಡಿದರೂ ಇತರ ದಿನಗಳಲ್ಲೂ ಪದೇಪದೇ ಕೈಕೊಡುತ್ತಿರುತ್ತದೆ.

ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಅಧಿಕವಾಗಿದ್ದು, ಅನಿವಾರ್ಯವಾಗಿ ಅಲ್ಲೇ ವಿದ್ಯುತ್ ಮಾರ್ಗಗಳು ಹಾದು ಹೋಗಿರುವುದು ಕೂಡ ಇದಕ್ಕೆ ಪ್ರಮುಖ ಕಾರಣ. ಹೆಸ್ಕಾಂ ಸಿಬ್ಬಂದಿ ಮಳೆಗಾಲದಲ್ಲಿ ಕಾಡು ಮೇಡು ಅಲೆದು ವಿದ್ಯುತ್ ಮರು ಸಂಪರ್ಕಕ್ಕೆ ದಿನಗಟ್ಟಲೆ ಶ್ರಮಿಸಿದ ಉದಾಹರಣೆಗಳಿವೆ. ಆದರೆ, ಬೇಸಿಗೆಯಲ್ಲೂ ಈ ರೀತಿ ಆದಾಗ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕಾರವಾರ ತಾಲ್ಲೂಕಿನ ಕುಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಸ್ವಲ್ಪ ಹೆಚ್ಚಿದೆ. ಉಳಿದಂತೆ, ನಗರದಲ್ಲಿ ಗಂಭೀರ ಎನ್ನುವಂಥ ಪರಿಸ್ಥಿತಿ ಇನ್ನೂ ಆಗಿಲ್ಲ. ಎರಡು ವರ್ಷ ಗಳಿಂದ ಉತ್ತಮವಾಗಿ ಮಳೆಯಾಗಿದ್ದು, ಜಲಾಶಯಗಳು ಭರ್ತಿಯಾಗಿವೆ. ಹಾಗಾಗಿ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯೂ ಆಗುತ್ತಿದ್ದು, ಲೋಡ್‌ ಶೆಡ್ಡಿಂಗ್ ಮಾಡುವ ಸ್ಥಿತಿ ಸದ್ಯಕ್ಕಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಶಿರಸಿ: ಮಲೆನಾಡು, ಅರೆಮಲೆನಾಡು ಪ್ರದೇಶವನ್ನು ಒಳಗೊಂಡ ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಆಗಾಗ ತಲೆದೋರುತ್ತಿರುತ್ತದೆ. ಮಳೆಗಾಲದಲ್ಲಂತೂ ಕುಗ್ರಾಮಗಳು ವಾರಗಟ್ಟಲೆ ಕಗ್ಗತ್ತಲಲ್ಲಿ ಕಳೆಯಬೇಕಾದ ಸ್ಥಿತಿ ಇದೆ.

ಮುಂಚಿನ ದಿನಮಾನಕ್ಕೆ ಹೋಲಿಕೆ ಮಾಡಿದರೆ ಹೆಸ್ಕಾಂ ಈಚಿನ ದಿನಗಳಲ್ಲಿ ಸುಧಾರಿಸಿಕೊಂಡಿದೆ. ಸಿಬ್ಬಂದಿ ಕೊರತೆ ನಡುವೆಯೂ ಸಕಾಲಕ್ಕೆ ಜನರಿಗೆ ಸೇವೆ ನೀಡುತ್ತಿದೆ. ಆದರೆ, ಹೆಚ್ಚುವರಿ ಗ್ರಿಡ್ ಸ್ಥಾಪನೆಯಾಗದ ಕಾರಣ ಕೃಷಿಕರಿಗೆ ಪದೇ ಪದೇ ವಿದ್ಯುತ್ ವ್ಯತ್ಯಯ ತಲೆಬಿಸಿ ಹೆಚ್ಚಿಸಿದೆ.

‘ಬನವಾಸಿಯಲ್ಲಿ ಗ್ರಿಡ್ ಸ್ಥಾಪನೆಗೆ ಜಾಗ ಸಿಕ್ಕರೂ ಇನ್ನೂ ಯೋಜನೆ ಕಾರ್ಯರೂಪಗೊಳಿಸಿಲ್ಲ. ದಾಸನಕೊಪ್ಪ, ಎಸಳೆ ಗ್ರಿಡ್‍ಗಳಿಂದ ವಿದ್ಯುತ್ ಪೂರೈಕೆ ಆಗುತ್ತಿದೆ. ಇದರಿಂದ ಈ ಭಾಗದಲ್ಲಿ ಹೆಚ್ಚು ಒತ್ತಡವಿದ್ದು ಪದೇ ಪದೇ ಸಿಂಗಲ್ ಫೇಸ್ ಸಮಸ್ಯೆ ಎದುರಿಸುತ್ತಿದ್ದೇವೆ. ಇದು ಕೃಷಿ ಚಟುವಟಿಕೆಗೆ ಹಿನ್ನಡೆಯುಂಟು ಮಾಡುತ್ತಿದೆ’ ಎನ್ನುತ್ತಾರೆ ಬಿ.ಶಿವಾಜಿ.

‘ಹತ್ತರಗಿ, ಜಾನ್ಮನೆ ಭಾಗದಲ್ಲಿ ಗ್ರಿಡ್ ಸ್ಥಾಪಿಸುವ ಕನಸು ಈಡೇರಿಲ್ಲ. ಗ್ರಾಮಿಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮೊದಲಿನಂತೆ ಇದೆ. ಇದನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸ ಗ್ರಿಡ್ ಮತ್ತು ಫೀಡರ್‌ಗಳನ್ನು ಸ್ಥಾಪಿಸಬೇಕು’ ಎಂದು ಕರುಣಾಕರ ಆರ್.ಹೆಗಡೆ ಆಗ್ರಹಿಸಿದ್ದಾರೆ.

ಸಿದ್ದಾಪುರ: ತಾಲ್ಲೂಕಿನಲ್ಲಿ ವಿದ್ಯುತ್‌ ಪೂರೈಕೆಗಾಗಿ ಹೆಸ್ಕಾಂ ಹಲವು ರೀತಿಯಲ್ಲಿ ಸುಧಾರಣಾ ಕ್ರಮಕೈಗೊಂಡಿದ್ದರೂ ವಿದ್ಯುತ್ ಕಣ್ಣಾಮುಚ್ಚಾಲೆಯೇನೂ ಸಂಪೂರ್ಣವಾಗಿ ನಿಂತಿಲ್ಲ. ತಾಲ್ಲೂಕಿನಾದ್ಯಂತ ವಿದ್ಯುತ್‌ ವಿತರಣೆ ಮಾಡಲು ಪಟ್ಟಣದಲ್ಲಿ ಗ್ರಿಡ್‌ ಇದೆ. ಅದರೊಂದಿಗೆ ವಿವಿಧ ಪ್ರದೇಶಗಳಿಗೆ ವಿದ್ಯುತ್‌ ಪೂರೈಸಲು ಒಂಬತ್ತು ಫೀಡರ್‌ಗಳಿವೆ.

ಗುಡ್ಡ ಬೆಟ್ಟ, ಮರಗಳ ನಡುವೆ ವಿದ್ಯುತ್‌ ಲೈನ್‌ಗಳು ಹಾದು ಹೋಗಿರುವುದರಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಸಾಮಾನ್ಯ. ಅದರಲ್ಲಿಯೂ ಮಳೆಗಾಲದಲ್ಲಿ ತೊಂದರೆ ಜಾಸ್ತಿ ಎಂಬುದು ಹೆಸ್ಕಾಂ ಅಧಿಕಾರಿಗಳ ಹೇಳಿಕೆ. ತಾಲ್ಲೂಕಿನ ಹೇರೂರು ವಿಭಾಗದ ವ್ಯಾಪ್ತಿಯ ಪ್ರದೇಶಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಕಾನಸೂರಿನಲ್ಲಿ ಗ್ರಿಡ್‌ ಸ್ಥಾಪನೆ ಮಾಡುವ ಪ್ರಯತ್ನ ನಡೆದಿದ್ದರೂ ಅದು ಕಾಗದ ಪತ್ರಗಳ ಓಡಾಟದ ಹಂತದಲ್ಲಿಯೇ ಇದೆ.

ಅಂಕೋಲಾ: ತಾಲ್ಲೂಕಿನಲ್ಲಿ ಹೆಸ್ಕಾಂ ನಿರ್ವಹಣೆಗೆ ತಾಂತ್ರಿಕ ಅಡಚಣೆಗಳೇ ಹೆಚ್ಚು. ಪಟ್ಟಣ ಪ್ರದೇಶದಲ್ಲಿ ಪರಿವರ್ತಕಗಳೂ ರಸ್ತೆ ಪಕ್ಕದಲ್ಲಿವೆ. ಅವುಗಳಲ್ಲಿ ಕೆಲವು ಕೈಗೆಟುಕುವ ಅಂತರದಲ್ಲಿವೆ. ನಿರ್ವಹಣೆಯ ಸಮಸ್ಯೆ ಕಂಡುಬರುತ್ತದೆ.

ಸ್ಥಳದ ಕೊರತೆಯಿಂದ ಬೇರೆಡೆಗೆ ಬದಲಾಯಿಸಲು ಸಾಧ್ಯವಾಗುತ್ತಿಲ್ಲ. ಹಬ್ಬದ ಸಂದರ್ಭಗಳಲ್ಲಿ ವಿದ್ಯುತ್ ಬಳಕೆ ಒತ್ತಡದಿಂದ ಇತ್ತೀಚೆಗೆ ಕೈಕೊಡುತ್ತಿವೆ. ಪರಿವರ್ತಕಗಳ ಗುಣಮಟ್ಟವಿಲ್ಲ ಎಂಬ ಆರೋಪ ಜನರಿಂದ ಕೇಳಿ ಬರುತ್ತಿದೆ. ಕೆ.ಪಿ.ಟಿ.ಸಿ.ಎಲ್ ಅನುಮತಿಯೊಂದಿಗೆ ಹೆಚ್ಚು ಲೋಡ್ ಸಾಮರ್ಥ್ಯವಿರುವ ಪರಿವರ್ತಕಗಳನ್ನು ಹಂತಹಂತವಾಗಿ ಬದಲಾಯಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿ 3-4 ದಿನ ವಿದ್ಯುತ್ ವ್ಯತ್ಯಯವಾಗುವುದು ಸಾಮಾನ್ಯವಾಗಿದೆ.

ತಾಲ್ಲೂಕಿನ ಮಕ್ಕಿಗದ್ದೆ, ಮಾರುಗದ್ದೆ, ಅಂಗಡಿಬೈಲ್, ರಾಮನಗುಳಿ, ವಜ್ರಳ್ಳಿ, ನಾಗೂರು, ಕೂರ್ವೆ, ಜೂಗ, ಸಗಡಗೇರಿ, ಬಿಳಿಸಿರಿ ಪ್ರದೇಶಗಳಲ್ಲಿ ವಿದ್ಯುತ್ ತಂತಿಯ ಮೇಲೆ ಮರದ ರೆಂಬೆಗಳು ಚಾಚಿಕೊಂಡಿವೆ. ಕೆಲವು ದಿನಗಳ ಹಿಂದೆ ಮರದ ಟೊಂಗೆ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ತಾಲ್ಲೂಕಿನ ಶೆಟಗೇರಿಯಲ್ಲಿ ತಂತಿ ಪರಸ್ಪರ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡಿತ್ತು. ಸ್ಥಳೀಯರೊಬ್ಬರ ಜಮೀನಿನಲ್ಲಿ ಗಿಡಗಳು ಸುಟ್ಟು ಹೋಗಿದ್ದವು. ವಿದ್ಯುತ್ ಕಂಬಗಳ ಪೂರೈಕೆಯಲ್ಲೂ ಕೊರತೆಯಾಗುತ್ತಿದೆ. ತಾಲ್ಲೂಕಿನ ಬೆಳಸೆ ಶಿರೂರು ಭಾಗಗಳಲ್ಲಿ ಸಂಜೆಯ ವೇಳೆ ಮಂದಗತಿಯಲ್ಲಿ ವಿದ್ಯುತ್ ಪೂರೈಕೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಹಳಿಯಾಳ: ಎರಡು ವರ್ಷಗಳಿಂದ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ಶಿಥಿಲಾವಸ್ಥೆಯಲ್ಲಿದ್ದ  41 ಸಾವಿರ ವಿದ್ಯುತ್ ಕಂಬಗಳನ್ನು ಬದಲಾಯಿಸಿ ಹೊಸದನ್ನು ಅಳವಡಿಸಲಾಗಿದೆ. ಇವುಗಳ ಪೈಕಿ ಪಟ್ಟಣದಲ್ಲಿ 875 ಕಂಬಗಳು ಸೇರಿವೆ. ಈ ಹಿಂದೆ ನೆಲದಿಂದ 7.5 ಮೀಟರ್ ಎತ್ತರದ ವಿದ್ಯುತ್ ಕಂಬಗಳು ಇದ್ದವು. ಅವುಗಳನ್ನು ಈಗ 8 ಮೀಟರ್‌ನಿಂದ 9 ಮೀಟರ್‌ಗೆ ಎತ್ತರಿಸಿ ಅಳವಡಿಸಲಾಗಿದೆ.

’ಜೋತು ಬೀಳುವ ವಿದ್ಯುತ್ ತಂತಿಗಳನ್ನು ಸಹ ನೂತನ ಕಂಬಗಳ ಅಳವಡಿಕೆಯಿಂದ ಎತ್ತರಕ್ಕೆ ಜೋಡಿಸಲಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸುಮಾರು 4,000 ಕಿ.ಮೀ ಉದ್ದದ 11 ಕೆ.ವಿ ವಿದ್ಯುತ್ ವಾಹಕಗಳು ಹಾಗೂ ಎಲ್.ಟಿ.ವಾಹಕ ತಂತಿಗಳನ್ನು ಜೋಡಿಸಲಾಗಿದೆ. 1,900 ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗಿದೆ. ಎಲ್ಲಿಯೂ ಸಿಂಗಲ್ ಫೇಸ್‌ ಇಲ್ಲದೇ ಎಲ್ಲ ಕಡೆ ಮೂರು ಫೇಸ್ ವಿದ್ಯುತ್ ನೀಡಲಾಗುತ್ತಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ಸಂಪರ್ಕಕ್ಕೆ ಅಲೆದಾಟ: 
ಮುಂಡಗೋಡ: ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿ, ನಾಲ್ಕೈದು ವರ್ಷಗಳು ಕಳೆದರೂ, ವಿದ್ಯುತ್ ಸಂಪರ್ಕ ಸಿಗದೆ ಹಲವು ರೈತರು ಅತಂತ್ರರಾಗಿದ್ದಾರೆ. 100ರಷ್ಟು ರೈತರು ಅತಿಕ್ರಮಣ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿದರೂ ವಿದ್ಯುತ್ ಸಂಪರ್ಕಕ್ಕಾಗಿ ನಿತ್ಯವೂ ಇಲ್ಲಿನ ಹೆಸ್ಕಾಂ ಕಚೇರಿಗೆ ಅಲೆದಾಡುತ್ತಿದ್ದಾರೆ.

‘ಅತಿಕ್ರಮಣ ಜಮೀನು ಈಗಾಗಲೇ ಜಿ.ಪಿ.ಎಸ್ ಆಗಿದ್ದರೂ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ನೀಡಲು ಅಧಿಕಾರಿಗಳು ಕಾನೂನಿನ ನೆಪ ಹೇಳುತ್ತಿದ್ದಾರೆ. ಷರತ್ತುಗಳನ್ನು ಹಾಕಿ ವಿದ್ಯುತ್ ಸಂಪರ್ಕ ನೀಡಿದರೆ, ಬೇಸಿಗೆ ಬೆಳೆಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ರೈತ ಮಹದೇವಪ್ಪ.

‘ಕೊಳವೆಬಾವಿ ಕೊರೆಸಿದರೂ ವಿದ್ಯುತ್ ಪರಿವರ್ತಕ ಅಳವಡಿಸಲು ಹೆಚ್ಚು ದಿನಗಳು ಹಿಡಿಯುತ್ತವೆ. ಕೆಲವೊಮ್ಮೆ ಮಂಜೂರು ಆಗುವ ಟಿ.ಸಿ.ಗಳನ್ನು ಮತ್ತೊಬ್ಬರ ಹೊಲದಲ್ಲಿ ಅಳವಡಿಸಿದ ಘಟನೆಗಳೂ ಜರುಗಿವೆ’ ಎನ್ನುತ್ತಾರೆ ರೈತರು.

ಮುಂಡಗೋಡ ಪಟ್ಟಣದಲ್ಲಿ ಕೆಲವೊಮ್ಮೆ ವಿದ್ಯುತ್ ನಿಲುಗಡೆ ಆಗುತ್ತದೆ. ತುರ್ತು ಕೆಲಸದ ಸಲುವಾಗಿ ಕಡಿತಗೊಳ್ಳುವ ವಿದ್ಯುತ್, ಹೇಳಿದ ಸಮಯಕ್ಕೆ ಬರುವುದಿಲ್ಲ. ಗ್ರಾಮೀಣ ಭಾಗದಲ್ಲಿ ತಂತಿಗಳು ಜೋತುಬಿದ್ದರೂ, ಸಕಾಲಕ್ಕೆ ಸ್ಪಂದಿಸುವುದಿಲ್ಲ ಎಂದು ಸಾರ್ವಜನಿಕರು ಕೆ.ಡಿ.ಪಿ ಸಭೆಗಳಲ್ಲಿ ಪದೇಪದೇ ದೂರುತ್ತಾರೆ.

–––––

* ಐದು ಹೆಚ್ಚುವರಿ ಸ್ಥಾಪಿಸಿ, ವಿದ್ಯುತ್ ಪೂರೈಕೆಯಲ್ಲಿದ್ದ ಲೋಪ ಸರಿಪಡಿಸಿದ್ದೇವೆ. ಮೂರು ಗ್ರಿಡ್ ಸ್ಥಾಪನೆ ಪ್ರಸ್ತಾಪ ಅನುಮೋದನೆ ಹಂತದಲ್ಲಿದೆ.

– ಧರ್ಮರಾಜ್, ಶಿರಸಿ ಎ.ಇ.ಇ

***

* ಸಿಬ್ಬಂದಿ ಕೊರತೆಯಿಂದ ಮರದ ಟೊಂಗೆಗಳನ್ನು ಕತ್ತರಿಸಲು ತೊಂದರೆಯಾಗುತ್ತಿದೆ. ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವವರೇ ಹೆಚ್ಚಿದ್ದಾರೆ.

– ಗೀತಾ ಜಯರಾಮ್, ಹೆಸ್ಕಾಂ ಕಿರಿಯ ಎಂಜಿನಿಯರ್, ಅಂಕೋಲಾ

***

* ತಾಲ್ಲೂಕಿನಲ್ಲಿ ₹ 80 ಕೋಟಿ ವೆಚ್ಚದಿಂದ ವಿದ್ಯುತ್ ತಂತಿ, ಪರಿವರ್ತಕ, ಕಂಬಗಳ, ಪಂಪ್‌ಸೆಟ್ ಜೋಡಣೆ ಕಾರ್ಯಕ್ಕೆ ಅನುವು ಮಾಡಲಾಗಿದೆ.

– ರವೀಂದ್ರ ಮೆಟಗುಡ್, ಹಳಿಯಾಳ ಎ.ಇ.ಇ

***

* ಸಿದ್ದಾಪುರ ತಾಲ್ಲೂಕಿನಲ್ಲಿ ವಿದ್ಯುತ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದ ಪಟ್ಟಣದಲ್ಲಿರುವ ಗ್ರಿಡ್‌ನಲ್ಲಿ ಆಗಾಗ ವಿದ್ಯುತ್ ಸ್ಥಗಿತವಾಗುತ್ತಿದೆ.

– ಡಿ.ಟಿ.ಹೆಗಡೆ, ಸಿದ್ದಾಪುರ ಎ.ಇ.ಇ

–––––

ಪ್ರಜಾವಾಣಿ ತಂಡ: ಸದಾಶಿವ ಎಂ.ಎಸ್, ಗಣಪತಿ ಹೆಗಡೆ, ರವೀಂದ್ರ ಭಟ್ ಬಳಗುಳಿ, ಮಾರುತಿ ಹರಿಕಂತ್ರ, ಸಂತೋಷ ಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು