ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಜಾಗೃತಿಯಿಂದ ನೆಲ ಕಾಳಜಿಯೆಡೆಗೆ

ಸ್ವಯಂ ಪ್ರೇರಣೆಯಿಂದ ನಗರದಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿರುವ ಉದ್ಯಮಿ ಶ್ರೀನಿವಾಸ ಹೆಬ್ಬಾರ
Last Updated 25 ಮೇ 2019, 19:30 IST
ಅಕ್ಷರ ಗಾತ್ರ

ಶಿರಸಿ: ಜೀವಜಲ ಕಾರ್ಯಪಡೆ ಅಧ್ಯಕ್ಷರಾಗಿ ನಗರದ ಹಲವಾರು ಕೆರೆಗಳನ್ನು ಹೂಳೆತ್ತಿ, ಜನರಿಗೆ ಜಲದಾತರಾಗಿರುವ ಉದ್ಯಮಿ ಶ್ರೀನಿವಾಸ ಹೆಬ್ಬಾರ ಅವರು, ಸ್ವಚ್ಛ ಶಿರಸಿಯ ಪಣತೊಟ್ಟು, ಸ್ವಂತ ವೆಚ್ಚದಲ್ಲಿ ಊರಿನ ಹೊರವಲಯದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದಾರೆ.

10 ದಿನಗಳಿಂದ ಒಂದು ಹಿಟಾಟಿ ಮತ್ತು ಒಂದು ಟಿಪ್ಪರ್ ಅನ್ನು ಈ ಕೆಲಸಕ್ಕೆಂದೇ ಮೀಸಲಿಟ್ಟಿದ್ದಾರೆ. ಸ್ವಚ್ಛತಾ ಕಾರ್ಯ ನಡೆಸುವಾಗಿನ ಅನುಭವವನ್ನು ಅವರು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

* ಸ್ವಚ್ಛತಾ ಕಾರ್ಯ ಮಾಡುವ ಪ್ರೇರಣೆ ಹೇಗೆ ಬಂತು ?

ಸ್ವಚ್ಛತೆ ಎಲ್ಲರ ಆದ್ಯತೆಯಾಗಬೇಕು. ಉಳಿದವರು ಮಾಡಲಿ ಎಂದು ನಾವು ಸುಮ್ಮನಿದ್ದರೆ ಕಾರ್ಯ ಕೈಗೆತ್ತಿಕೊಳ್ಳುವವರು ಯಾರು ಎಂಬ ಪ್ರಶ್ನೆ ಬರುತ್ತದೆ. ನಾನು ಯುರೋಪ್, ಅಮೆರಿಕ, ನ್ಯೂಝಿಲೆಂಡ್ ಮೊದಲಾದ ದೇಶಗಳಿಗೆ ಪ್ರವಾಸ ಹೋಗಿದ್ದೆ. ಅಲ್ಲಿನ ಸ್ವಚ್ಛತೆ ನೋಡಿದಾಗಲೆಲ್ಲ ನಮ್ಮ ಊರು ಯಾಕೆ ಹೀಗಿರಬಾರದೆಂದು ಯೋಚನೆ ಬರುತ್ತಿತ್ತು. ಅಲ್ಲಿ ಹುಡುಕಿದರೂ ಒಂದು ಸೊಳ್ಳೆ ಸಿಗದು. ಇದಕ್ಕೆ ಸ್ವಚ್ಛತೆಯೇ ಕಾರಣ.

* ಜಲ ಸೇವೆಯಿಂದ ಸ್ವಚ್ಛತೆಯೆಡೆಗೆ ಲಕ್ಷ್ಯ ಹೊರಳಿದ್ದು ಹೇಗೆ ?

ಮನುಷ್ಯ ಉತ್ತಮ ಆರೋಗ್ಯ ಹೊಂದಲು ಸ್ವಚ್ಛತೆ ಬೇಕೇಬೇಕು. ಇನ್ನು ಬರುವುದು ಮಳೆಗಾಲ. ಮಳೆ ನೀರಿನಲ್ಲಿ ತೇಲಿ ಬರುವ ಕಸಗಳು ಸೇರುವುದು ಜಲಮೂಲಕ್ಕೇ. ಆಗ ನಾವು ಮಾಡಿದ ಕೆರೆ ಕೆಲಸಗಳು ನಿಷ್ಪ್ರಯೋಜಕವಾಗುತ್ತವೆ. ಅದೇ ಕಾಳಜಿಯಿಂದ ಸ್ವಂತ ವೆಚ್ಚದಲ್ಲಿ ಕಸ ಸಂಗ್ರಹಿಸಿ, ವಿಲೇವಾರಿ ಮಾಡಿಸುತ್ತಿದ್ದೇನೆ.

* ಕೆಲಸ ನಡೆದಿದ್ದು ಎಲ್ಲೆಲ್ಲಿ ?

ಕಾಲೇಜು ರಸ್ತೆಯಲ್ಲಿ ಚಿಪಗಿವರೆಗೆ, ಬನವಾಸಿ ರಸ್ತೆ, ಆನೆಹೊಂಡದ ಸುತ್ತಮುತ್ತ ಚೊಕ್ಕ ಮಾಡಲಾಗಿದೆ. ಎಲ್ಲ ಕಡೆ ಸ್ವಚ್ಛಗೊಳಿಸುವವರೆಗೂ ಈ ಕೆಲಸ ಮುಂದುವರಿಯುತ್ತದೆ.

* ನಿಮ್ಮ ಕೆಲಸಕ್ಕೆ ಜನರ ಸ್ಪಂದನೆ ಸಿಕ್ಕಿದೆಯಾ ?

ಜನರು ಸ್ವಚ್ಛತಾ ಕಾರ್ಯ ನಡೆಸುತ್ತಿರುವುದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಆದರೆ, ಎಲ್ಲರಲ್ಲಿ ಅರಿವು ಮಾತ್ರ ಮೂಡಿಲ್ಲ ಎನ್ನುವುದು ಬೇಸರದ ಸಂಗತಿ. ರಾತ್ರಿ ಬೆಳಗಾಗುವುದರೊಳಗೆ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ ಬೀಳುತ್ತದೆ. ಸಮಾಜದಲ್ಲಿ ಪ್ರಜ್ಞಾವಂತರು, ವಿದ್ಯಾವಂತರೆನಿಸಿಕೊಳ್ಳುವವರೇ ಈ ಕೆಲಸ ಮಾಡುವುದು ನೋವಿನ ವಿಚಾರ. ಕೆಲವರನ್ನು ಹಿಡಿದಿದ್ದೂ ಆಗಿದೆ, ಮತ್ತೆ ಆ ಕೆಲಸ ಮಾಡದಂತೆ ಎಚ್ಚರಿಸಿದ್ದೂ ಆಗಿದೆ. ನಿರಂತರ ನಿಗಾ ವಹಿಸುವುದೂ ನಮ್ಮ ಗಂಭೀರ ಕಾರ್ಯಾಚರಣೆಗಳಲ್ಲಿ ಒಂದು.

* ಯಾವ ರೀತಿಯ ತ್ಯಾಜ್ಯ ಹೆಚ್ಚು ?

ಮದ್ಯದ ಬಾಟಲಿ, ನೀರಿನ ಬಾಟಲಿ, ಕುರುಕಲು ತಿಂಡಿಯ ಪ್ಯಾಕೆಟ್, ಕೋಳಿ–ಕುರಿ ತ್ಯಾಜ್ಯ.

* ನಗರಸಭೆಗೆ ನಿಮ್ಮ ಸಲಹೆ...

ನಗರಸಭೆ ಸ್ವಚ್ಛತೆ ಬಗ್ಗೆ ಲಕ್ಷ್ಯವಹಿಸಬೇಕು. ನಗರದ ಕಸಗಳೇ ಗ್ರಾಮೀಣ ವ್ಯಾಪ್ತಿಗೆ ಸೇರುವುದರಿಂದ ನಿರ್ಲಕ್ಷ್ಯ ತೋರಬಾರದು. ಕಸ ಹಾಕುವವರ ಮೇಲೆ ಕಠಿಣ ಕ್ರಮವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT