ದುರಸ್ತಿಗೆ ಕಾದಿವೆ ತರಗತಿ ಕೊಠಡಿಗಳು

7
ಶಿಕ್ಷಣ ಇಲಾಖೆಯಿಂದ 180 ಶಾಲೆಗಳ ಕಟ್ಟಡ ದುರಸ್ತಿ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಕೆ

ದುರಸ್ತಿಗೆ ಕಾದಿವೆ ತರಗತಿ ಕೊಠಡಿಗಳು

Published:
Updated:
Deccan Herald

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ 180ಕ್ಕೂ ಅಧಿಕ ಶಾಲೆಗಳ ಕೊಠಡಿಗಳು ದುರಸ್ತಿಗಾಗಿ ಸರ್ಕಾರದ ಅನುದಾನಕ್ಕೆ ಕಾದುಕುಳಿತು ವರ್ಷಗಳು ಕಳೆದಿವೆ. ಕೆಲವು ಶಾಲೆಗಳ ತರಗತಿ ಕೊಠಡಿ ಶಿಥಿಲಾವಸ್ಥೆಯಲ್ಲಿದ್ದರೆ, ಇನ್ನು ಕೆಲವು ಶಾಲೆಗಳಲ್ಲಿ ಶೌಚಾಲಯ ದುರವಸ್ಥೆಯಲ್ಲಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳಲ್ಲಿ ಪ್ರೌಢಶಾಲೆಗಳಿಗಿಂತ ಸರ್ಕಾರಿ ಪ್ರಾಥಮಿಕ ಶಾಲೆಗಳು ದುಃಸ್ಥಿತಿಯಲ್ಲಿವೆ. ಶಿರಸಿ ತಾಲ್ಲೂಕು ಒಂದರಲ್ಲೇ 46 ಶಾಲೆಗಳ 42 ಕೊಠಡಿಗಳು ದುರಸ್ತಿಗೆ ಕಾದಿದ್ದರೆ, ಎಂಟು ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಈ ಬಾರಿ ಮಳೆಗಾಲದಲ್ಲಿ ಏಳು ಕೊಠಡಿಗಳಿಗೆ ಹಾನಿಯಾಗಿದೆ. ಕೊಠಡಿ ಹಾನಿಯಾಗಿರುವ ಶಾಲೆಗಳಲ್ಲಿ ಹೆಚ್ಚಿನವು ತಾಲ್ಲೂಕು ಕೇಂದ್ರದಿಂದ ದೂರದಲ್ಲಿರುವವೇ ಆಗಿವೆ.

ಪ್ರಾಥಮಿಕ ಶಾಲೆಗಳ ಒಟ್ಟು 112 ಕೊಠಡಿಗಳ ದುರಸ್ತಿಗೆ ₹ 1.25 ಕೋಟಿ, ಶಿಥಿಲಾವಸ್ಥೆಯಲ್ಲಿರುವ ಒಟ್ಟು 75 ಕೊಠಡಿಗಳ ಪುನರ್ ನಿರ್ಮಾಣಕ್ಕೆ ₹ 6.43 ಕೋಟಿ, ಮಳೆಯಿಂದ ಹಾನಿಯಾಗಿರುವ 38 ಕೊಠಡಿಗಳನ್ನು ಸರಿಪಡಿಸಲು ₹ 50.90 ಲಕ್ಷ, ಸುಮಾರು 92 ಶೌಚಾಲಯಗಳ ದುರಸ್ತಿಗೆ ₹ 58.30 ಲಕ್ಷ ಅಂದಾಜು ಲೆಕ್ಕ ಹಾಕಿ, ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಶಾಲೆಗಳಲ್ಲಿ 10,300ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

ಸಿದ್ದಾಪುರ ತಾಲ್ಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ 22 ಕೊಠಡಿಗಳು ಇದ್ದರೆ, ಮುಂಡಗೋಡಿನಲ್ಲಿ 21 ಇಂತಹ ತರಗತಿ ಕೊಠಡಿಗಳು ಇವೆ. ಕೆಲವು ಗೋಡೆ ಬಿರುಕು ಬಿಟ್ಟಿದ್ದರೆ, ಕೆಲವೆಡೆಗಳಲ್ಲಿ ಚಾವಣಿ ಕುಸಿದು ಬೀಳುವ ಹಂತದಲ್ಲಿದೆ. ಮುಂಡಗೋಡ ತಾಲ್ಲೂಕಿನ ಎರಡು, ಹಳಿಯಾಳದ ಒಂದು ಪ್ರೌಢಶಾಲೆಯ ಒಟ್ಟು ಮೂರು ಕೊಠಡಿಗಳ ದುರಸ್ತಿಗೆ, ಶಾಲಾಭಿವೃದ್ಧಿ ಸಮಿತಿಯವರು ಅನುದಾನಕ್ಕಾಗಿ ಕಾಯುತ್ತಿದ್ದಾರೆ.

‘ಈ ಹಿಂದೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಂಬಂಧಿಸಿ ಶೇ 50ರಷ್ಟು ಹಣ ಮಂಜೂರು ಆಗಿದೆ. ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತದೆ. 180 ಶಾಲೆಗಳ ಪ್ರಸ್ತಾವವನ್ನು ಕಳೆದ ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಅನುದಾನ ಮಂಜೂರು ಆಗಬೇಕಾಗಿದೆ’ ಎಂದು ಪ್ರಭಾರಿ ಡಿಡಿಪಿಐ ಸಿ.ಎಸ್.ನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶಿಕ್ಷಣಕ್ಕೆ ಒತ್ತು ನೀಡುವುದಾಗಿ ಹೇಳುವ ಸರ್ಕಾರ, ಸರ್ಕಾರಿ ಶಾಲೆಗಳ ದುರಸ್ತಿಗೊಳಿಸಲು ನಿರಾಸಕ್ತಿ ತೋರಿದೆ. ದುಃಸ್ಥಿತಿಯಲ್ಲಿರುವ ಕೊಠಡಿಗಳನ್ನು ನೋಡಿದರೆ, ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಪಾಲಕರೊಬ್ಬರು ಹೇಳಿದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !