ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ ತಾಲ್ಲೂಕಿನಲ್ಲಿ ಅಂತರ್ಜಲ ಕುಸಿತ: ಉಲ್ಬಣಿಸುತ್ತಿರುವ ಸಮಸ್ಯೆ

ಖಾಸಗಿ ಕೊಳವೆಬಾವಿ, ಟ್ಯಾಂಕರ್ ನೀರು ಪೂರೈಕೆ
Last Updated 4 ಜೂನ್ 2019, 19:45 IST
ಅಕ್ಷರ ಗಾತ್ರ

ಮುಂಡಗೋಡ:ತಾಲ್ಲೂಕಿನ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಹೊಸ ಸಾಲಗಾಂವ ಮತ್ತು ಕರಗಿನಕೊಪ್ಪ ಗ್ರಾಮಗಳಲ್ಲಿ ಸದ್ಯ ಟ್ಯಾಂಕರ್‌ ಮೂಲಕ ದಿನಕ್ಕೆ ಮೂರು ಬಾರಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ತಾಲ್ಲೂಕಿನ ಚವಡಳ್ಳಿ, ತೇಗಿನಕೊಪ್ಪ, ನಂದಿಪುರ ಮತ್ತು ಆಲಳ್ಳಿ ಗ್ರಾಮಗಳಲ್ಲಿ ಸಮಸ್ಯೆ ಬಗೆಹರಿಸಲು, ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಮೇಲೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಪಸ್ವಲ್ಪ ನೀರು ಚಿಮ್ಮುತ್ತಿರುವ ಕೊಳವೆಬಾವಿಗಳು ಸಹ ಬತ್ತುತ್ತಿವೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಒಂದು ಗ್ರಾಮದಿಂದ ಮತ್ತೊಂದು ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿದೆ.

‘ಬತ್ತಿರುವ ಕೊಳವೆಬಾವಿಗಳನ್ನು ಪುನಃಶ್ಚೇತನಗೊಳಿಸಿ ನೀರು ಕೊಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಕೆಲವೆಡೆ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಸಿದರೂ ದೂಳು ಮಾತ್ರ ಹಾರುತ್ತಿದೆ. ಕೊಳವೆಬಾವಿಯಿಂದ ಮಿನಿ ಟ್ಯಾಂಕ್‌ಗೆ ಲಿಫ್ಟ್ ಮಾಡದಷ್ಟು ನೀರಿನ ವೇಗ ಕಡಿಮೆಯಾಗಿದೆ. ಕೆಲವೆಡೆ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದೆ’ ಎಂದುಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಸಂತೋಷ ಹಜೇರಿ ಹೇಳಿದರು.

ಹೊಸ ಪ್ರಯೋಗ: ಚಿಗಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕೊಳವೆಬಾವಿಯ ನೀರಿನ ವೇಗ ಕಡಿಮೆ ಆಗಿದೆ. ಇದರಿಂದ ಕೊಳವೆಬಾವಿಯ ಪಕ್ಕದಲ್ಲಿಯೇ ಪ್ಲಾಸ್ಟಿಕ್ ಟ್ಯಾಂಕ್ ಇಟ್ಟು ಅದರಲ್ಲಿ ನೀರು ತುಂಬಿಸಲಾಗುತ್ತಿದೆ. ಆ ಟ್ಯಾಂಕಿನಿಂದ ಗ್ರಾಮಸ್ಥರು ನೀರು ತುಂಬಿಕೊಳ್ಳುತ್ತಿದ್ದಾರೆ. ಇದು ನೀರಿನ ಮಿತ ಬಳಕೆಗೂ ಸಹಾಯ ಆಗಲಿದೆ ಎನ್ನಲಾಗಿದೆ.

‘ನೀರಿನ ಸಮಸ್ಯೆ ಕಂಡುಬರುವ ಗ್ರಾಮಗಳನ್ನು ಮತ್ತಷ್ಟು ಗುರುತಿಸಲಾಗಿದ್ದು, ಖಾಸಗಿಕೊಳವೆಬಾವಿಗಳಿಂದ ಕೊಡಲು ನಿರ್ಧರಿಸಲಾಗಿದೆ. ಸಮಸ್ಯೆ ಕಂಡುಬಂದರೆ ಸಹಾಯವಾಣಿ (08301–222122) ಮೂಲಕ ತಿಳಿಸಬಹುದು. ಸಮಸ್ಯೆ ಬಗೆಹರಿಸಲು ತಾಲ್ಲೂಕು ಆಡಳಿತ ಸಜ್ಜಾಗಿದೆ’ ಎಂದು ತಹಶೀಲ್ದಾರ್ ಶಂಕರ ಗೌಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶುಂಠಿಯಿಂದ ನೀರಿಗೂ ಬರ:ತಾಲ್ಲೂಕಿನಲ್ಲಿ ಈ ವರ್ಷ ಹೆಚ್ಚಿನ ರೈತರು ಶುಂಠಿ ಬೆಳೆದಿದ್ದಾರೆ. ರೈತರಕೊಳವೆಬಾವಿಗಳಿಂದ ನೀರು ಪಡೆಯಲು ಹೋದರೆ, ‘ಶುಂಠಿಗೇ ನೀರು ಸಾಕಾಗುತ್ತಿಲ್ಲ. ಬೆಳೆ ಒಣಗಿಸಿ ನೀರು ಕೊಡಲು ಆಗುವುದಿಲ್ಲ’ ಎಂಬ ಉತ್ತರ ರೈತರಿಂದ ಕೇಳಿಬರುತ್ತಿದೆ. ಬಲವಂತವಾಗಿ ನೀರು ಪಡೆಯಲು ಮುಂದಾದರೆ, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಎದುರಿಸಬೇಕಾಗಿದೆ ಎನ್ನುತ್ತಾರೆಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT