ಬುಧವಾರ, ಸೆಪ್ಟೆಂಬರ್ 22, 2021
21 °C
ಜೊಯಿಡಾ: ಕಾತೇಲಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿ

ತೆಲೋಲಿ ಗ್ರಾಮದಲ್ಲಿ ಸಮಸ್ಯೆ: ಬತ್ತಿದ ಝರಿ, ಬಾವಿ, ನೀರಿಗೆ ಅಲೆದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೊಯಿಡಾ: ತಾಲ್ಲೂಕಿನ ಕಾತೇಲಿ ಗ್ರಾಮ ಪಂಚಾಯ್ತಿಯ ತೆಲೋಲಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಯ ಮೂಲವಾಗಿದ್ದ ಝರಿ ಬತ್ತಿದೆ. ಗ್ರಾಮದಲ್ಲಿದ್ದ ಒಂದು ತೆರೆದ ಬಾವಿಯೂ ಒಣಗಿದ್ದರಿಂದ ಗ್ರಾಮಸ್ಥರಿಗೆ ಸಮಸ್ಯೆ ಎದುರಾಗಿದೆ. ಮಹಿಳೆಯರು, ಮಕ್ಕಳು ದೂರದಿಂದ ನೀರು ಹೊತ್ತುತಂದು ದೈನಂದಿನ ಕೆಲಸಕ್ಕೆ ಬಳಸುವಂತಾಗಿದೆ.

ಗ್ರಾಮದಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಮೊದಲು ಬಳಕೆ ಮಾಡುತ್ತಿದ್ದ ತೆರೆದ ಬಾವಿ ಸಂಪೂರ್ಣವಾಗಿ ಬತ್ತಿದ್ದರಿಂದ ಸರ್ಕಾರದಿಂದ ನೈಸರ್ಗಿಕ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಮತ್ತೊಂದು ಕಾಮಗಾರಿ ಮಾಡಲಾಯಿತು.  ಈಗ ಈ ಯೋಜನೆಯ ಝರಿ ಮೂಲವೇ ಬತ್ತಿರುವುದರಿಂದ ನೀರು ಪೈಪ್ ಮೂಲಕ ಹರಿದು ಟ್ಯಾಂಕ್‌ಗೆ ಬರುತ್ತಿಲ್ಲ. 

ತೆಲೋಲಿ ಗ್ರಾಮದ ಮಹಿಳೆಯರು, ಮಕ್ಕಳು ಸೇರಿ ಪ್ರತಿ ನಿತ್ಯ ಬೆಳಗಾಗುತ್ತಿದ್ದಂತೆ ಗ್ರಾಮದಿಂದ ದೂರವಿರುವ ಹೊಂಡದ ನೀರನ್ನು ತುಂಬಿಕೊಳ್ಳಲು ಹೋಗುತ್ತಾರೆ. ಅದನ್ನೇ ಕೊಡಗಳಲ್ಲಿ ತಂದು ಕುಡಿಯಲು, ಅಡುಗೆ ಮಾಡಲು, ಬಟ್ಟೆ ತೊಳೆಯಲು  ಬಳಸುತ್ತಿದ್ದಾರೆ. ಸಂಜೆಯೂ ಇದೇ ಕೆಲಸವಾಗುತ್ತದೆ. ಇದರಿಂದ ಕೂಲಿ ಕೆಲಸ ಮಾಡಲಿಕ್ಕಾಗದೇ ನೀರಿಗಾಗಿ ಅಲೆದಾಡುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ರೋಗದ ಭೀತಿ

ಸಾರ್ವಜನಿಕರಿಗೆ ಸ್ನಾನಕ್ಕೆ, ಬಟ್ಟೆ ತೊಳೆಯಲು ನೀರು ಇಲ್ಲದಂತಾಗಿದೆ. ಜಾನುವಾರಿಗೂ ಕುಡಿಯಲು ನೀರಿನ ಸಮಸ್ಯೆಯಿದೆ. ಹೊಂಡದ ನೀರಿನಲ್ಲಿ ನೈರ್ಮಲ್ಯದ ಕೊರತೆಯಾಗುತ್ತಿದ್ದು, ಅದರ ನೀರಿನಿಂದ ರೋಗ ರುಜಿನಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ.

ಹಾಗಾಗಿ ಗ್ರಾಮಕ್ಕೆ ಕುಡಿಯು ನೀರು ಪೂರೈಸಬೇಕೆಂದು ತಹಶೀಲ್ದಾರ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ, ಕುಡಿಯುವ ನೀರು ಇಲಾಖೆಯ ಕಚೇರಿ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ವಾಟ್ಸ್‌ ಆ್ಯಪ್ ಮೂಲಕ ಅಹವಾಲು ಸಲ್ಲಿಸಲಾಗಿದೆ ಎಂದು ಗ್ರಾಮದ ಪ್ರಮುಖರಾದ ಸುರೇಶ ಗಾವಡಾ, ರವಿದಾಸ ಗಾವಡಾ, ವಿನಯ ಗಾವಡಾ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು