ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ ಶೈಕ್ಷಣಿಕ ಜಿಲ್ಲೆ: ಬಿಸಿಯೂಟಕ್ಕೆ ಕಾಡುವ ನೀರಿನ ತುಟಾಗ್ರತೆ

ಹಲವು ಶಾಲೆಗಳಲ್ಲಿ ಬಾಳೆ ಎಲೆ ಊಟ, ಮಕ್ಕಳ ನೆರವಿಗೆ ಧಾವಿಸಿದ ಪಾಲಕರು
Last Updated 1 ಜೂನ್ 2019, 19:30 IST
ಅಕ್ಷರ ಗಾತ್ರ

ಶಿರಸಿ: ಜೂನ್ ತಿಂಗಳು ಆರಂಭವಾದರೂ ಮಳೆ ಸುರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈಗ ರೈತನ ಜೊತೆಗೆ ಶಿಕ್ಷಕರು, ಪಾಲಕರು ಸಹ ಆಗಸದತ್ತ ದೃಷ್ಟಿ ನೆಡುವ ಸಂದರ್ಭ ಎದುರಾಗಿದೆ. ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕೆ ನೀರಿನ ಕೊರತೆ ತೀವ್ರವಾಗಿ ಕಾಡುತ್ತಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಯ ಐದು ತಾಲ್ಲೂಕುಗಳ ಸುಮಾರು 141 ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀರಿನ ತೊಂದರೆ ಎದುರಾಗಿದೆ. ವಿಶೇಷವಾಗಿ ಮಲೆನಾಡಿನ ತಾಲ್ಲೂಕುಗಳಾದ ಶಿರಸಿ, ಸಿದ್ದಾಪುರ, ಕಾಡಿನ ನಡುವೆ ಇರುವ ಜೊಯಿಡಾ ತಾಲ್ಲೂಕುಗಳಲ್ಲಿ ಈ ಸಮಸ್ಯೆ ಉಲ್ಬಣಿಸಿದೆ. ಶಾಲಾಭಿವೃದ್ಧಿ ಸಮಿತಿಯವರು, ಶಿಕ್ಷಕರು ನಿತ್ಯದ ಬಿಸಿಯೂಟಕ್ಕೆ ನೀರು ಹುಡುಕಾಟ ನಡೆಸುವ ಪರಿಸ್ಥಿತಿ ಬಂದೊದಗಿದೆ.

ಶಿರಸಿ ತಾಲ್ಲೂಕಿನ ಪಶ್ಚಿಮ ಭಾಗದ ಕೆಲವು ಶಾಲೆಗಳಲ್ಲಿ ತಟ್ಟೆ ತೊಳೆಯುವ ನೀರನ್ನು ಉಳಿಸಲು ಬಿಸಿಯೂಟಕ್ಕೆ ಬಾಳೆ ಎಲೆ ಬಳಸುತ್ತಿದ್ದಾರೆ. ಬಾವಿ ಬರಿದಾಗಿರುವ ಕೆಲವು ಶಾಲೆಗಳಿಗೆ ಪಾಲಕರೇ ನೀರು ತಂದು ಕೊಡುತ್ತಾರೆ. ಶಿಕ್ಷಕರು, ಅಡುಗೆಯವರು ಸೇರಿ ಅಕ್ಕಪಕ್ಕದ ಮನೆಗಳಿಂದ ನೀರು ತಂದು ಬಿಸಿಯೂಟ ನಿಲ್ಲದಂತೆ ಶ್ರಮವಹಿಸುತ್ತಿದ್ದಾರೆ. ಹಲವಾರು ಕಡೆಗಳಲ್ಲಿ ಗ್ರಾಮ ಪಂಚಾಯ್ತಿಗಳು ನೀರು ಪೂರೈಕೆ ಮಾಡುತ್ತಿವೆ.

‘ಅನೇಕ ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀರಿಲ್ಲ. ಹಾಗೆಂದು ಎಲ್ಲಿಯೂ ಬಿಸಿಯೂಟ ನಿಂತಿಲ್ಲ. ಶಾಲೆಯ ಪ್ರಮುಖರು ವಿಶೇಷ ಕಾಳಜಿವಹಿಸಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಸಕಾಲದಲ್ಲಿ ಮಳೆಯಾಗದಿದ್ದರೆ ಸಮಸ್ಯೆ ಬಿಗಡಾಯಿಸುವ ಆತಂಕವಿದೆ. ಯಾವುದೇ ಶಾಲೆಯಲ್ಲಿ ನೀರಿನ ಕೊರತೆ ಎದುರಾದರೂ, ತಕ್ಷಣ ಸಂಬಂಧಪಟ್ಟ ಪಂಚಾಯ್ತಿಗೆ ತಿಳಿಸುವಂತೆ ಸೂಚಿಸಲಾಗಿದೆ’ ಎಂದು ಶಿರಸಿ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ತಿಳಿಸಿದರು.

ಶಿರಸಿಯ ನಂ.3 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎದುರಾಗಿದ್ದ ನೀರಿನ ಸಮಸ್ಯೆ ತಾತ್ಕಾಲಿಕ ಪರಿಹಾರ ದೊರೆತಿದೆ. ನಗರಸಭೆ ಟ್ಯಾಂಕರ್ ಮೂಲಕ ನೀರು ನೀಡುತ್ತದೆ ಎಂದು ಹೇಳಿದರು.

ಶೈಕ್ಷಣಿಕ ಜಿಲ್ಲೆಯಲ್ಲಿರುವ 1271 ಶಾಲೆಗಳಲ್ಲಿ, 1133 ಶಾಲೆಗಳಲ್ಲಿ ನೀರಿನ ಸೌಲಭ್ಯವಿದೆ. ಬಿಸಿಲಿನ ತಾಪಕ್ಕೆ ಕೆಲವು ಶಾಲೆಗಳ ಜಲಮೂಲಗಳು ಬತ್ತಿವೆ. ಮಕ್ಕಳಿಗೆ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಡಿಡಿಪಿಐ ದಿವಾಕರ ಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT