ಶನಿವಾರ, ಸೆಪ್ಟೆಂಬರ್ 18, 2021
21 °C
ಪಂಚಾಯಿತಿಯಿಂದ ಪರಿಹಾರಕ್ಕೆ ಯತ್ನ

ಶಿವಪುರ ಗ್ರಾಮದಲ್ಲಿ ತೀವ್ರಗೊಂಡ ಸಮಸ್ಯೆ: ದಿನಕ್ಕೆ 25 ಸಾವಿರ ಲೀಟರ್ ನೀರು ಪೂರೈಕೆ

ಸುಕುಮಾರ್ ಮುನಿಯಾಲ್ Updated:

ಅಕ್ಷರ ಗಾತ್ರ : | |

Prajavani

ಹೆಬ್ರಿ: ಈ ಊರಿನಲ್ಲಿರುವ ಯಾವುದೇ ರಸ್ತೆ ಬದಿಯಲ್ಲಿ ನೋಡಿದರೂ ನೀರು ಸಂಗ್ರಹಿಸಲು ಬಳಸುವ ಸಣ್ಣ ಪುಟ್ಟ ಪ್ಲಾಸ್ಟಿಕ್‌ ಟ್ಯಾಂಕ್‌ಗಳು, ಕೊಡ ಹಾಗೂ ಬಕೆಟ್‍ಗಳು ಇರುವುದು ಕಾಣಿಸುತ್ತದೆ. ಈ ದೃಶ್ಯ ಶಿವಪುರ ಗ್ರಾಮದಲ್ಲಿ ಇರುವಂತಹ ನೀರಿನ ಸಮಸ್ಯೆಯ ತೀವ್ರತೆಯನ್ನು ತೋರಿಸುತ್ತದೆ.

‘ಊರಿನಲ್ಲಿ ನೀರು ಇಲ್ಲದಿದ್ದರೂ ಬೇರೆಡೆಯಿಂದ ಸಂಗ್ರಹಿಸಿ ತಂದು ಜನರಿಗೆ ನೀರು ಕೊಡುತ್ತಿದ್ದೇವೆ’ ಎಂದು ನೀರಿನ ಸಮಸ್ಯೆಯ ಗಂಭೀರತೆಯನ್ನು ಪಂಚಾಯಿತಿ ಅಧ್ಯಕ್ಷೆ ಸುಗಂಧಿ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರಿಗಾಗಿ ಪರಿತಪಿಸುತ್ತಿರುವ ಜನರ ಕಷ್ಟವನ್ನು ಅರಿತುಕೊಂಡ ಇಲ್ಲಿನ ಸ್ಥಳೀಯ ಆಡಳಿತ, ಜನರಿಗೆ ಅಗತ್ಯವಿರುಷ್ಟು ನೀರು ಪೂರೈಸಿ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಸರ್ಕಾರದ ಸುತ್ತೋಲೆ ಪ್ರಕಾರ ಒಂದು ಕುಟುಂಬಕ್ಕೆ ದಿನಕ್ಕೆ 40 ಲೀಟರ್ ನೀರು ಕೊಡಬೇಕು ಎಂಬ ನಿರ್ದೇಶನ ಇದೆ. ಆದರೆ, ಇಲ್ಲಿನ ಗ್ರಾಮ ಪಂಚಾಯಿತಿ ಪ್ರತಿಮನೆಗೆ 200 ಲೀಟರ್ ನೀರು ಕೊಡುತ್ತಿರುವುದರ ಜತೆಗೆ, ಮನೆಮಂದಿಯೆಲ್ಲಾ ತಂದಿಡುವ ಪಾತ್ರೆ ಪಗಡೆಗಳಿಗೂ ಟ್ಯಾಂಕರ್‌ನಿಂದ ನೀರು ತುಂಬಿಸಿಕೊಟ್ಟು ಜನರನ್ನು ತೃಪ್ತಿಪಡಿಸುತ್ತಿದೆ.

‘ವಿದ್ಯುತ್ ಸಮಸ್ಯೆ, ನೌಕರರ ಕೊರತೆಯ ನಡುವೆಯೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಪ್ರತಿದಿನವೂ 25 ಸಾವಿರ ಲೀಟರ್ ನೀರನ್ನು ಇಲ್ಲಿನ ಮನೆಮನೆಗೆ ಟ್ಯಾಂಕರ್‌ ಮೂಲಕ ವಿತರಿಸಲಾಗುತ್ತಿದೆ. ಫೆಬ್ರುವರಿಯಲ್ಲಿ 350 ಕುಟುಂಬಗಳು ನೀರಿಗೆ ಬೇಡಿಕೆ ಸಲ್ಲಿಸಿದ್ದವು. ಇದೀಗ ನೀರಿನ ಕೊರತೆ ಹೆಚ್ಚಾಗಿ 7 ಸಾವಿರ ಮಂದಿಯಿಂದ ಬೇಡಿಕೆ ಬಂದಿದೆ. ಇಲ್ಲಿ 1,500 ಮಂದಿಗೆ ಪೂರೈಸುವಷ್ಟು ಮಾತ್ರ ನೀರಿನ ಲಭ್ಯತೆ ಇದೆ. ಮನೆಮನೆಗೆ ಹೋಗಿ ನೀರು ವಿತರಣೆ ಮಾಡುವುದು ಕಷ್ಟವಾಗುತ್ತಿದೆ. ಆದರೂ ವಿಶೇಷ ಶ್ರಮವಹಿಸಿ ನೀರು ನೀಡುತ್ತಿದ್ದೇವೆ’ ಎಂದು ಸುಗಂಧಿ ನಾಯ್ಕ್ ಹೇಳಿದರು.

‘ಮುಕ್ಕಾಣಿ, ಯಡ್ದೆ, ಅಸ್ರಂಬಳ್ಳಿ, ಬೋರ್ಕಲ್ಲುಕುಂಜ ಪರಿಸರದಲ್ಲಿ ಬೋಲ್‍ವೆಲ್ ನೀರು ಲಭ್ಯವಿದ್ದರೂ ಕುಡಿಯುವ ನೀರಿಗೆ ಸಮಸ್ಯೆ ಇದೆ. ಕೆಳಖಜಾನೆಯಲ್ಲಿ ಕಳೆದ ವರ್ಷ ಬೋರ್‍ವೆಲ್ ಕೊರೆದು ನೀರಿನ ಸಮಸ್ಯೆ ನಿವಾರಿಸಲಾಗಿದೆ. ಗ್ರಾಮದ ಉಳಿದ ಭಾಗಗಳಿಗೆ ಟ್ಯಾಂಕರ್‌ ಮೂಲಕ ನೀರು ವಿತರಿಸಲಾಗುತ್ತಿದೆ. ನಾವು ಈ ವರ್ಷ ಪಂಚಾಯಿತಿ ವತಿಯಿಂದ ಕೊರೆಸಿದ ಎಂಟು ಬೋರ್‌ವೆಲ್‍ಗಳಲ್ಲಿ ಐದರಲ್ಲಿ ನೀರು ಬಂದಿಲ್ಲ. ಎಂಟು ಬೋರ್‌ವೆಲ್‌ಗಳಲ್ಲಿ ನೀರು ಬಂದಿರುತ್ತಿದ್ದರೆ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗುತ್ತಿತ್ತು’ ಎಂದು ಅವರು ಹೇಳಿದರು.

‘ಪಶ್ಚಿಮವಾಹಿನಿ 2ನೇ ಹಂತದ ನೀರಿನ ಯೋಜನೆ, ಹೆಬ್ರಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಸೂರಿಮಣ್ಣು ಯಾಂತ್ರೀಕೃತ ಪಂಪ್ ಹೌಸ್ ಕಾರ್ಯಗತವಾದರೆ ಬಟ್ಟಂಬಳ್ಳಿ ವೆಂಟೆಡ್ ಡ್ಯಾಂನಲ್ಲಿ ನೀರು ನಿಲ್ಲುವಂತೆ ಮಾಡಿದರೆ ಕಷ್ಟ ಬಗೆಹರಿಯುತ್ತದೆ. ಈ ಯೋಜನೆಗಳು ಪೂರ್ಣವಾಗಿ ಅನುಷ್ಠಾನಗೊಂಡರೆ 2020ರ ವೇಳೆಗೆ ಶಿವಪುರ ಗ್ರಾಮದ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗುತ್ತದೆ’ ಎಂದು ಹಿರಿಯ ಮುಖಂಡ ಹುಣ್ಸೆಯಡಿ ಸುರೇಶ ಶೆಟ್ಟಿ ಮಾಹಿತಿ ನೀಡಿದರು.

‘ಉಡುಪಿ, ಹೆಬ್ರಿ, ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಶಿವಪುರ ಸೇತುವೆ ನಿರ್ಮಾಣಕ್ಕೆ ₹13 ಕೋಟಿ ಅನುದಾನ ಮಂಜೂರಾಗಿದ್ದು, ಇದೇ ಯೋಜನೆಯಲ್ಲಿ ಸೇತುವೆ ಜತೆಗೆ ಡ್ಯಾಂ ನಿರ್ಮಿಸಿದರೆ ಅಣೆಕಟ್ಟೆಯಲ್ಲಿ ನೀರು ನಿಂತು ಜಲಮೂಲ ವೃದ್ಧಿಯಾಗಿ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ’ ಎಂದು ತಿಳಿಸಿದರು.

7 ವರ್ಷಗಳಿಂದ ನೀರು ಕೊಡುತ್ತಿರುವ ಅಮ್ಲಾಜೆ ಸಾಧು ಶೆಟ್ಟಿ

ಹಚ್ಚ ಹಸುರಿನಿಂದ ನಳನಳಿಸುತ್ತಿದ್ದ ತೋಟ ಬಿಸಿಲ ಝಳಕ್ಕೆ ಬಾಡಿ ಹೋಗುತ್ತಿದ್ದರೂ ಕಳೆದ 7 ವರ್ಷಗಳಿಂದ ಗ್ರಾಮದ ಜನರಿಗಾಗಿ ದಿನಕ್ಕೆ 25 ಸಾವಿರ ಲೀಟರ್ ನೀರು ಕೊಟ್ಟು ಸಹೃದಯತೆ ಮೆರೆಯುತ್ತಿದ್ದಾರೆ ಶಿವಪುರ ಅಮ್ಲಾಜೆಯ ಸಾಧು ಶೆಟ್ಟಿ.

‘ಸಾಧು ಶೆಟ್ಟಿ ಅವರ ಸಹಕಾರ ಇಲ್ಲದಿದ್ದರೆ ಜನತೆಗೆ ನೀರು ಹಂಚಿಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಪಂಚಾಯಿತಿಯ ಹಿರಿಯ ಸದಸ್ಯ ಹುಣ್ಸೆಯಡಿ ಸುರೇಶ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.

‘ಊರಿನ ಕೆರೆ, ತೋಡು, ನದಿಗಳಲ್ಲಿ ಹೂಳು ತುಂಬಿ ನೀರು ನಿಲ್ಲುತ್ತಿಲ್ಲ, ಸರ್ಕಾರ ಹೂಳು ಎತ್ತುವ ಕೆಲಸಗಳಿಗೆ ವಿಶೇಷ ಯೋಜನೆ ರೂಪಿಸಬೇಕು. ಆಗ ನೀರು ನಿಲ್ಲುತ್ತದೆ, ಮುಂದೆ ಸ್ವಲ್ಪವಾದರೂ ನೀರಿನ ಸಮಸ್ಯೆ ಕಡಿಮೆಯಾಗಬಹುದು’ ಎಂದು ಸುರೇಶ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷರ ಮನೆಯಿಂದಲೂ ನೀರು ಪೂರೈಕೆ

‘ಹಲವು ದಿನಗಳಿಂದ ನಮ್ಮ ಮನೆಯಿಂದಲೂ 40ಕ್ಕೂ ಹೆಚ್ಚು ಮನೆಯವರು ದಿನಕ್ಕೆ 5ರಿಂದ 8 ಸಾವಿರ ಲೀಟರ್ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ನೀರಿನ ಸಮಸ್ಯೆ ಹೆಚ್ಚಾಗಿದ್ದರಿಂದ ತೋಟಕ್ಕೆ ನೀರು ಬಿಡುತ್ತಿಲ್ಲ. ಬದಲಾಗಿ ಜನತೆಗೆ ಕೊಡುತ್ತಿದ್ದೇವೆ’ ಎಂದು ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಂಧಿ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು