ಭಾನುವಾರ, ಸೆಪ್ಟೆಂಬರ್ 22, 2019
22 °C
ಮಳೆಗಾಲ ಆರಂಭಕ್ಕಾಗಿ ಕಾಯುತ್ತಿರುವ ಜನರು

ಭಟ್ಕಳ: ಬತ್ತಿದ ಜಲಮೂಲ; ಜನರ ನಿತ್ಯ ಪರದಾಟ

Published:
Updated:
Prajavani

ಭಟ್ಕಳ: ತಾಲ್ಲೂಕಿನ ವಿವಿಧೆಡೆ ಬಾವಿ, ನದಿ, ಹೊಳೆಯಲ್ಲಿದ್ದ ನೀರೆಲ್ಲ ಬತ್ತಿಹೋಗುತ್ತಿದೆ. ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. 15 ದಿನಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ನಂತರ ಬಿದ್ದ ನಾಲ್ಕೈದು ಸಣ್ಣ ಮಳೆಯಿಂದ ಭೂಮಿಯಲ್ಲಿ ಮತ್ತಷ್ಟು ಧಗೆ ಹೆಚ್ಚಿ ಜಲಮೂಲಗಳೆಲ್ಲ ಒಣಗುತ್ತಿವೆ.

ತಾಲ್ಲೂಕಿನ ಕಡವಿನಕಟ್ಟೆ ಡ್ಯಾಂನಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಮುಂಡಳ್ಳಿ ಚೌಥನಿ ಸೇರಿದಂತೆ ಹಲವು ಗ್ರಾಮೀಣ ಭಾಗಗಳ ಜೀವನದಿ ಶರಾಬಿ ಹೊಳೆಯಲ್ಲಿ ಹೂಳು ತುಂಬಿಕೊಂಡಿದೆ. ಪಟ್ಟಣದ ಎಲ್ಲೆಡೆ ಬಾವಿಗಳು ಬತ್ತಿಹೋಗಿವೆ. ಕೆಲವು ಬಾವಿಗಳಲ್ಲಿ ಇರುವ ನೀರನ್ನು ಬಳಸಿಕೊಳ್ಳಲು, ತುಂಬಿದ ಕೆಸರನ್ನು ತೆಗೆಯಲು ಹರಸಾಹಸ ಮಾಡಲಾಗುತ್ತಿದೆ. 

ಕಳೆದ ವರ್ಷ ಮೇ ತಿಂಗಳ ಆರಂಭದಲ್ಲೇ ಮುಂಗಾರು ಅಲ್ಲದಿದ್ದರೂ ಚಂಡಮಾರುತದ ಪ್ರಭಾವದಿಂದ ಸಾಕಷ್ಟು ಮಳೆಯಾಗಿ ನೀರಿಗಾಗಿ ಪರದಾಡುವುದು ತಪ್ಪಿತ್ತು. ಆದರೆ, ಈ ವರ್ಷ ಈವರೆಗೆ ಒಂದೇ ಒಂದು ದೊಡ್ಡ ಮಳೆ ಬಂದಿಲ್ಲ. ಮೋಡ ಆಗುತ್ತದೆ, ಆದರೆ, ಗಾಳಿ ಬೀಸಿದಾಗ ದೂರ ಸರಿಯುತ್ತವೆ. ಮಳೆಗಾಲ ಆರಂಭವಾಗಲು ಇನ್ನೂ ಒಂದು ತಿಂಗಳಿದೆ. ಅಲ್ಲಿಯವರೆಗೆ ನೀರಿನ ಬವಣೆ ತಪ್ಪಿದ್ದಲ್ಲ ಎಂದು ಪಟ್ಟಣದ ಆಸರಕೇರಿಯ ಮನಮೋಹನ ನಾಯ್ಕ ಆತಂಕ ವ್ಯಕ್ತಪಡಿಸುತ್ತಾರೆ.

ಬರಗಾಲ ಪೀಡಿತ ಪ್ರದೇಶ: ಭಟ್ಕಳ ತಾಲ್ಲೂಕನ್ನು ‘ಬರಗಾಲ ಪೀಡಿತ ಪ್ರದೇಶ’ ಎಂದು ಗುರುತಿಸಲಾಗಿದೆ. ನೀರಿನ ಸಮಸ್ಯೆ ನಿವಾರಣೆಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಈವರೆಗೆ 58 ಮಜರೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿನ ಅವಶ್ಯಕತೆ ಇದ್ದವರು ತಹಶೀಲ್ದಾರ್ ಕಚೇರಿಯ ದೂರವಾಣಿ ಸಂಖ್ಯೆ 08385– 226422 ಕರೆ ಮಾಡಬೇಕು. ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎನ್.ಬಿ.ಪಾಟೀಲ್ ಹೇಳಿದರು.

ಪಟ್ಟಣ ಪ್ರದೇಶದಲ್ಲಿ ಮುಸ್ಲಿಮ್ ಯೂಥ್ ಫೆಡರೇಶನ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ಪುರಸಭೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ತೋಟ, ಗದ್ದೆಗಳು ಇರುವ ಗ್ರಾಮೀಣ ಭಾಗದಲ್ಲಿ ಬಾವಿ, ಕೆರೆಯನ್ನೇ ನಂಬಿಕೊಂಡಿರುವ ರೈತರು ಗಿಡಗಳು ಒಣಗುತ್ತಿರುವುದನ್ನು ಕಂಡು ಮರುಕಪಡುತ್ತಿದ್ದಾರೆ. ಮಳೆಯೊಂದೇ ಇದಕ್ಕೆ ಪರಿಹಾರ ಎನ್ನುತ್ತಾರೆ ಮಾರುಕೇರಿಯ ಕೋಟಖಂಡದ ಕೃಷಿಕ ಲಕ್ಷ್ಮಿನಾರಾಯಣ ಎನ್ ಹೆಬ್ಬಾರ್.

ಕರೆ ಮಾಡಿದರೆ ಟ್ಯಾಂಕರ್ ನೀರು: ಅಗತ್ಯವುಳ್ಳ ಗ್ರಾಮೀಣ ಭಾಗದಲ್ಲಿ ನೀರು ಸರಬರಾಜು ಮಾಡಲು ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ನೀರು ಬೇಕು ಎಂದು ಎಲ್ಲಿಂದಲೇ ದೂರವಾಣಿ ಕರೆ ಬಂದರೂ ಅಲ್ಲಿಗೆ ಅಧಿಕಾರಿಗಳು ತೆರಳಿ, ಪರಿಶೀಲನೆ ನಡೆಸುತ್ತಾರೆ. ಕೂಡಲೇ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಉಪ ವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಹೇಳಿದರು.

Post Comments (+)