ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತ ಗೆಲ್ತಾರಾ ಆನಂದ ಬರ್ತಾರಾ...; ಮತದಾರರ ಒಂದು ತಿಂಗಳ ಕುತೂಹಲಕ್ಕೆ ಇಂದು ಉತ್ತರ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ
Last Updated 22 ಮೇ 2019, 19:48 IST
ಅಕ್ಷರ ಗಾತ್ರ

ಕಾರವಾರ:‘ಈ ಸಲ ಏನಾಗ್ಬಹುದು? ಅನಂತಕುಮಾರ್ ಗೆಲ್ತಾರಾ ಇಲ್ಲಾ ಆನಂದ್ ಬರ್ತಾರಾ..?’

‘ಕೇಂದ್ರದಲ್ಲಿ ಮೋದಿ ಸರ್ಕಾರ ಪುನಃ ಬರುತ್ತಾ? ರಾಹುಲ್ ಗಾಂಧಿ ಪ್ರಧಾನಿ ಆಗ್ತಾರಾ?’

‘ಭಾರಿ ನಿಧಾನವಾಯ್ತಪ್ಪ... ವೋಟ್ ಮಾಡಿ ಯಾರು ಗೆಲ್ತಾರೆ ಅಂತ ನೋಡ್ಲಿಕ್ಕೆ ಒಂದು ತಿಂಗಳು ಕಾಯ್ಬೇಕು...!’

– ಲೋಕಸಭಾ ಚುನಾವಣೆಗೆಏಪ್ರಿಲ್ 23ರಂದು ನಡೆದ ಮತದಾನದನಂತರ ಜಿಲ್ಲೆಯ ಎಲ್ಲೇ ಹೋದರೂ ಕೇಳಿ ಬರುತ್ತಿದ್ದ ಮಾತುಗಳಿವು.ಬಸ್ ನಿಲ್ದಾಣ, ವಾರದ ಸಂತೆ, ಹೋಟೆಲ್‌ಗಳು, ಮದುವೆ ಸಮಾರಂಭದ ಮನೆಗಳು, ಗೆಳೆಯರ ಭೇಟಿಯ ಸಂದರ್ಭ.. ಹೀಗೆ ಕುಳಿತಲ್ಲಿ ನಿಂತಲ್ಲಿ ಇದೇ ಚರ್ಚೆಯಾಗಿತ್ತು.ಈ ಎಲ್ಲ ಕುತೂಹಲ, ಪ್ರಶ್ನೆಗಳಿಗೆ ಗುರುವಾರ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಉತ್ತರ ಸಿಗಲಿದೆ. ಇದಕ್ಕಾಗಿ ಇಡೀ ಜಿಲ್ಲೆ ಚಾತಕ ಪಕ್ಷಿಯಂತೆ ಕಾಯುತ್ತಿದೆ.

ಬಿಜೆಪಿಯಿಂದ ಸ್ಪರ್ಧಿಸಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಐದುಬಾರಿ ಸಂಸದರಾಗಿದ್ದಾರೆ. ಈ ಬಾರಿಯೂ ಗೆದ್ದರೆ ಆರನೇ ಬಾರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ. ಮೋದಿ ಅಲೆ, ಬಿಜೆಪಿ ಪರ ಮತದಾರರ ಒಲವು,ತಾವು ಕೈಗೊಂಡಕಾರ್ಯಗಳ ಬಗ್ಗೆ ವಿಶ್ವಾಸ ಹೀಗೆ ಹಲವು ಕಾರಣಗಳಿಂದ ಈ ಬಾರಿಯೂ ಗೆಲುವು ತಮ್ಮದೇ ಎಂಬ ವಿಶ್ವಾಸ ಅವರದ್ದಾಗಿದೆ.

ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ಕುದುರೆಯನ್ನು ಕಟ್ಟಿಹಾಕಲು ಪ್ರತಿಪಕ್ಷಗಳೂ ಸಾಕಷ್ಟು ರಣವ್ಯೂಹ ಮಾಡಿಕೊಂಡು ಪ್ರಚಾರ ಮಾಡಿದ್ದವು. ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟದಲ್ಲಿ ಮೈತ್ರಿಧರ್ಮದ ಭಾಗವಾಗಿ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿತು. ಜೆಡಿಎಸ್‌ನ ಆನಂದ ಅಸ್ನೋಟಿಕರ್ ಕಣಕ್ಕಿಳಿದರು. ಆರಂಭದಿಂದಲೂ ಅನಂತಕುಮಾರ ಹೆಗಡೆ ವಿರುದ್ಧ ನೇರ ವಾಗ್ದಾಳಿ ನಡೆಸುತ್ತ ಬಂದ ಆನಂದ, ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ಆಗಿಯೇ ಆಗುತ್ತದೆ ಎಂದು ಹೇಳುತ್ತಿದ್ದಾರೆ.

ಕ್ಷೇತ್ರದಲ್ಲಿಅನಂತಕುಮಾರ ಹೆಗಡೆ ವಿರುದ್ಧವಾದ ಅಲೆಯಿದೆ. ಈ ಕ್ಷೇತ್ರವನ್ನು ಬಿಜೆಪಿ ಕಳೆದುಕೊಳ್ಳಲಿದೆ. ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಮತಗಳು ತಮಗೇ ಸಿಗುತ್ತವೆ. ಆದ್ದರಿಂದ ತಮ್ಮದೇ ಗೆಲವು ಎಂಬ ವಿಶ್ವಾಸದಲ್ಲಿದ್ದಾರೆ. ಕಣದಲ್ಲಿ ಒಟ್ಟು 13 ಅಭ್ಯರ್ಥಿಗಳಿದ್ದರೂ ಇವರಿಬ್ಬರಿಗೆ ಸ್ವಲ್ಪವಾದರೂ ಪ್ರತಿಸ್ಪರ್ಧೆ ಒಡ್ಡಬಲ್ಲವರು ಯಾರೂ ಇರಲಿಲ್ಲ. ಹಾಗಾಗಿಇಬ್ಬರಲ್ಲಿ ಯಾರು ಗೆಲುವಿನ ನಗೆ ಬೀರುತ್ತಾರೆ ಎಂಬುದಷ್ಟೇ ಸದ್ಯದ ಕುತೂಹಲವಾಗಿದೆ.

ಸಂಭ್ರಮಾಚರಣೆಗೆ ಸಿದ್ಧತೆ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ಹಲವು ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಊಹಿಸಿವೆ. ಇದು ಪಕ್ಷದ ಜಿಲ್ಲೆಯ ಮುಖಂಡರು, ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದೆ. ಹೀಗಾಗಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

‘ಊಹೆಯ ಮೇಲೆ ನಡೆಯುವ ಈ ಸಮೀಕ್ಷೆಗಳು ನಿಜವಾಗುವುದಿಲ್ಲ, ನಿಜವಾದ ಫಲಿತಾಂಶ ಮತ ಎಣಿಕೆಯ ನಂತರ ತಿಳಿಯಲಿದೆ. ಹಾಗಾಗಿ ನಾವೂಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ’ಎನ್ನುತ್ತಾರೆ ಮೈತ್ರಿಕೂಟದ ಮುಖಂಡರೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT