ಬುಧವಾರ, ಸೆಪ್ಟೆಂಬರ್ 18, 2019
23 °C

ಜಾತಿ ಪ್ರಮಾಣಪತ್ರ ರದ್ದು: ಕಾನೂನು ಹೋರಾಟ ಮುಂದುವರಿಕೆ– ಜಯಶ್ರೀ

Published:
Updated:

ಭಟ್ಕಳ: ‘ಅನುಸೂಚಿತ ಜಾತಿ ಪ್ರಮಾಣಪತ್ರ ರದ್ದು ಪಡಿಸುವಂತೆ ಭಟ್ಕಳ ಉಪವಿಭಾಗಾಧಿಕಾರಿ ಆದೇಶದ ಬಗ್ಗೆ ಕಾನೂನು ಹೋರಾಟ ಮುಂದುವರಿಸುತ್ತೇವೆ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ್ ಹೇಳಿದರು.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಮೊಗೇರ ಸಮಾಜಕ್ಕೆ ಸಂವಿಧಾನ ಬದ್ದವಾಗಿ ನೀಡಿರುವ ಜಾತಿ ಪ್ರಮಾಣಪತ್ರದ ಕುರಿತಾಗಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಸೆ. 6ರಂದು ಪುನಃ ವಿಚಾರಣೆ ನಡೆಯಲಿದೆ. ಹೈಕೋರ್ಟ್ ಆದೇಶ ಬರುವ ಮೊದಲೇ ಭಟ್ಕಳದ ಉಪವಿಭಾಗಾಧಿಕಾರಿ ಜಾತಿ ಪ್ರಮಾಣಪತ್ರ ರದ್ದುಪಡಿಸಲು ಆದೇಶ ನೀಡಿರುವುದು ಕಾನೂನು ಬಾಹೀರವಾಗಿದೆ. ನ್ಯಾಯದ ಮೇಲೆ ನಮಗೆ ನಂಬಿಕೆ ಇದ್ದು ಕಾನೂನು ಹೋರಾಟ ಮುಂದುವರಿಸುತ್ತೇವೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ್ ಅವರದ್ದಷ್ಟೇ ಅಲ್ಲದೇ ಮೊಗೇರ ಸಮುದಾಯಕ್ಕೆ ಸೇರಿದ ಒಟ್ಟು ಎಂಟು ಜನರ ‘ಅನುಸೂಚಿತ ಜಾತಿ’ ಪ್ರಮಾಣಪತ್ರ ರದ್ದು ಪಡಿಸುವಂತೆ ಉಪವಿಭಾಗಾಧಿಕಾರಿ ನ್ಯಾಯಾಲಯ ತಹಶೀಲ್ದಾರ್‌ಗೆ ಆದೇಶಿಸಿದೆ.

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರುಗಳಾದ ಗೌರಿ ಮೊಗೇರ್, ಶಾಂತಿ ಸುಕ್ರನಮನೆ, ಮಾದೇವಿ ಅಳ್ವೆಕೋಡಿ, ಭವಾನಿ ದೈಮನೆ, ದಮಯಂತಿ ಮೊಗೇರ್, ನಂದಿನಿ ಕನ್ಯಾ ಎಂಬುವರ ಅನುಸೂಚಿತ ಜಾತಿ ಪ್ರಮಾಣಪತ್ರ ರದ್ದುಪಡಿಸುವಂತೆ ಉಪವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಗುರುವಾರ ತಹಶೀಲ್ದಾರ್ ಗೆ ಆದೇಶಿಸಿದ್ದಾರೆ.

ಕೇವಲ ಮೂರು ತಿಂಗಳ ಹಿಂದಷ್ಟೇ ಉಪವಿಭಾಗಾಧಿಕಾರಿಗಳು ಗೀತಾ ರಾಮ ಮೊಗೇರ್ ಅಳ್ವೆಕೋಡಿ, ಹರಿಣಿ ತಿಮ್ಮಪ್ಪ ಮೊಗೇರ್ ಶಿರಾಲಿ, ಮಾಸ್ತಮ್ಮ ನಾರಾಯಣ ಮೊಗೇರ್ ಹಡೀನ್ ಇವರುಗಳು ಜಾತಿ ಪ್ರಮಾಣಪತ್ರವನ್ನೂ ರದ್ದುಗೊಳಿಸಿ ಆದೇಶಿಸಿದ್ದರು. ಸುಳ್ಳು ಜಾತಿ ಪ್ರಮಾಣಪತ್ರವನ್ನು ಪಡೆದು, ನೈಜ ಪರಿಶಿಷ್ಟರಿಗೆ ದೊರಕಬೇಕಾದ ಸೌಲಭ್ಯವನ್ನು ದುರುಪಯೋಗ ಮಾಡಿಕೊಂಡಿದ್ದು, ಇವರ ಜಾತಿ ಪ್ರಮಾಣಪತ್ರ ರದ್ದುಪಡಿಸುವಂತೆ ನಾರಾಯಣ ಶಿರೂರ್ ಎಂಬುವರು ಹೈಕೋರ್ಟ ಮೊರೆ ಹೋಗಿದ್ದರು.

ಹೈಕೋರ್ಟ ಆದೇಶದಂತೆ ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ನಾರಾಯಣ ಅವರು ಮರುವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ಮರುವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ಅಂತಿಮವಾಗಿ ಅನುಸೂಚಿತ ಜಾತಿ ಪ್ರಮಾಣಪತ್ರ ರದ್ದುಪಡಿಸುವಂತೆ ತಹಶೀಲ್ದಾರ್‌ಗೆ ಆದೇಶಿಸಿದ್ದಾರೆ.

Post Comments (+)