ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಂಕೃತ ಬಂಡಿಯಲ್ಲಿ ಬಂದ ದಿಮ್ಮಿ

ಮಾರಿಕಾಂಬೆಯ ರಥ ಕಟ್ಟಲು ಬಳಕೆ
Last Updated 25 ಫೆಬ್ರುವರಿ 2020, 12:38 IST
ಅಕ್ಷರ ಗಾತ್ರ

ಶಿರಸಿ: ಮಾರಿಕಾಂಬಾದೇವಿ ಕಲ್ಯಾಣಿಯಾಗಿ ಮೆರವಣಿಗೆಯಲ್ಲಿ ಸಾಗುವ ರಥವನ್ನು ನಿರ್ಮಿಸಲು, ಕಾಡಿನಿಂದ ತಂದಿರುವ ಕಟ್ಟಿಗೆಯನ್ನು ಮಂಗಳವಾರ ದೇವಾಲಯದ ಮುಂಭಾಗಕ್ಕೆ ತಂದು ಪೂಜಿಸಲಾಯಿತು. ಗುಡಿ ಪ್ರವೇಶ ದ್ವಾರದ ಎದುರು ಬಂಡಿಗಳು ಬರುತ್ತಿದ್ದಂತೆ ಭಕ್ತರು ’ಮಾರಿಕಾಂಬೆಗೆ ಜೈ’ ಎಂದು ಜಯಘೋಷ ಕೂಗಿದರು.

ಮಾ.3ರಿಂದ ನಡೆಯುವ ದೇವಿಯ ಜಾತ್ರೆಯ ಪೂರ್ವಭಾವಿಯಾಗಿ ಕಳೆದ ಶುಕ್ರವಾರ ಬಿಕನಳ್ಳಿಯ ಮಾಲ್ಕಿ ಜಮೀನಿನಲ್ಲಿದ್ದ ತಾರೆ ಮರವನ್ನು ಕಡಿದು, ದಿಮ್ಮಿ ತಯಾರಿಸಲಾಗಿತ್ತು. ಈ ದಿಮ್ಮಿಗಳನ್ನು ಅಲಂಕೃತ ಎರಡು ಬಂಡಿ, ಮೂರು ಚಕ್ಕಡಿ ಗಾಡಿಗಳಲ್ಲಿ ದೇವಾಲಯಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಅರ್ಚಕರು, ಬಾಬುದಾರ ಪ್ರಮುಖ ಜಗದೀಶ ಗೌಡ ಹಾಗೂ ಇತರರು ಪೂಜಿಸಿ, ಬರಮಾಡಿಕೊಂಡರು.

‘ದೇವಾಲಯದ ಪ್ರಮುಖ ಐದು ಗೌಡ ಬಾಬುದಾರ ಕುಟುಂಬಗಳಲ್ಲಿ ರಥದ ಕಟ್ಟಿಗೆ ತರುವುದು ಕಟ್ಟೇರ ಗೌಡರು ಹಾಗೂ ಗುಡ್ಡದಮನೆ ಗೌಡರ ಕುಟುಂಬದ ಜವಾಬ್ದಾರಿ. ರಥದ ಮೂಕದ ಮರ (ರಥ ನಿಯಂತ್ರಿಸುವ ಸಾಧನ) ಹಾಗೂ ಸನ್ನೆ ತಯಾರಿಸುವ ತಾರಿ ಮರದ ದಿಮ್ಮಿಗಳನ್ನು ಈ ಎರಡು ಬಾಬುದಾರ ಕುಟುಂಬದವರು ಬಂಡಿಗಳಲ್ಲಿ ತರುತ್ತಾರೆ. ಈ ಎರಡು ಬಂಡಿಗಳಿಗೆ ವಿಶೇಷ ಪೂಜೆ ನೆರವೇರುತ್ತದೆ’ ಎನ್ನುತ್ತಾರೆ ಬಾಬುದಾರ ಕುಟಂಬದ ಅಣ್ಣಪ್ಪ ಆಚಾರಿ.

ಜಾತ್ರೆಗೆ ಏಳು ದಿನ ಮೊದಲು ಬಾಬುದಾರ ಆಚಾರಿಗಳು, ಬಡಿಗೇರರು, ಉಪ್ಪಾರರು ಸಂಪ್ರದಾಯದಂತೆ ದೇವಿ ಜಾತ್ರಾ ಗದ್ದುಗೆಗೆ ತೆರಳುವ ರಥ ನಿರ್ಮಾಣ ಕಾರ್ಯ ಪ್ರಾರಂಭಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT