ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸುವುದೇ ಜಾತ್ಯತೀತ

ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಮತ
Last Updated 24 ಜೂನ್ 2019, 11:09 IST
ಅಕ್ಷರ ಗಾತ್ರ

ಶಿರಸಿ: ‘ದೇಶದ ಮುಂದಿರುವ ಸಮಸ್ಯೆ, ಸವಾಲುಗಳಿಗೆ ಸಂವಿಧಾನ ಕಾರಣವೆಂದು ಕೆಲವರು ಹೇಳುತ್ತಿದ್ದಾರೆ. ಈ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಸಂವಿಧಾನವನ್ನು ಜಾರಿಗೊಳಿಸುವವರು ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದಿರುವುದೇ ಇವೆಲ್ಲಕ್ಕೂ ಮೂಲ ಕಾರಣ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟರು.

ಸಮಾಜ ಕಲ್ಯಾಣ ಇಲಾಖೆ, ಕಾನೂನು ಸೇವೆಗಳ ಸಮಿತಿ ಜಂಟಿಯಾಗಿ ಸಹಯಾನ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಇಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ 'ಭಾರತದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ' ಕುರಿತು ಅವರು ಮಾತನಾಡಿದರು. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ದೇಶದ ಮುಂದೆ ಅನೇಕ ಸಮಸ್ಯೆಗಳಿವೆ. ಭಯೋತ್ಪಾದನೆ, ಮೂಲಭೂತವಾದ, ಭ್ರಷ್ಟಾಚಾರ, ಅಪರಾಧೀಕರಣ, ಅತಿಯಾದ ವ್ಯಾಪಾರೀಕರಣ, ಸಾಂಸ್ಕೃತಿಕ ದಿವಾಳಿತನದಂತಹ ಅನೇಕ ಸವಾಲುಗಳಿವೆ. ಪ್ರಜಾಪ್ರಭುತ್ವವೆಂದರೆ ಕೇವಲ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸುವ ರಾಜಕೀಯ ಪ್ರಜಾಪ್ರಭುತ್ವವಲ್ಲ. ರಾಜಕೀಯ, ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವದ ನಡುವಿನ ಕೊಂಡಿ ಬಲವಾಗಬೇಕು. ಇವುಗಳ ನಡುವೆ ಸಂಬಂಧ ಬೆಸೆಯದ ವಿನಾ ನಿಜವಾದ ಪ್ರಜಾಪ್ರಭುತ್ವ ಕಾಣಲು ಸಾಧ್ಯವಾಗದು’ ಎಂದರು.

‘ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸುವುದೇ ಜಾತ್ಯತೀತ. ಸರ್ಕಾರಕ್ಕೆ ತನ್ನದೇ ಆದ ಧರ್ಮ ಇರಬಾರದು. ಸರ್ಕಾರ ರೂಪಿಸುವ ಕಾನೂನು, ಕಾರ್ಯಕ್ರಮಗಳುಯಾವುದೇ ಧರ್ಮಕ್ಕೆ ಅಡಿಯಾಳಾಗಿರಬಾರದು. ಜನರ ಕಲ್ಯಾಣಕ್ಕೆ ಅಡಿಯಾಳಾಗಿರಬೇಕು. ಆಗ ಮಾತ್ರ ಜಾತ್ಯತೀತಕ್ಕೆ ಅರ್ಥ ಬರುತ್ತದೆ. ಮೀಸಲಾತಿಯೊಂದೇ ಸಾಮಾಜಿಕ ನ್ಯಾಯವಲ್ಲ. ದೇಶದಲ್ಲಿ ಕೋಟ್ಯಂತರ ನಿರುದ್ಯೋಗಿಗಳಿದ್ದಾರೆ. 20 ವರ್ಷಗಳಲ್ಲಿ 3.5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೇ 70ರಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ಬದುಕಿಗೆ ಸ್ಪಂದಿಸುವುದು ಸಾಮಾಜಿಕ ನ್ಯಾಯ’ ಎಂದು ಹೇಳಿದರು.

‘ವ್ಯಕ್ತಿಗೆ ಅಕ್ಷರ ಜ್ಞಾನವಿದ್ದರೆ ಸಾಲದು ಕಾನೂನಿನ ಅರಿವು ಬೇಕು. ಇದರ ಜೊತೆಗೆ ಸಂವಿಧಾನದ ಅರಿವು ಮತ್ತು ಅದರ ಅರ್ಥೈಸಿಕೊಳ್ಳುವಿಕೆ ಹೆಚ್ಚು ಮಹತ್ವದ್ದಾಗಿದೆ. ಕಲ್ಯಾಣ ರಾಷ್ಟ್ರ ನಿರ್ಮಾಣಕ್ಕೆ ಸಂವಿಧಾನ ಅಗತ್ಯವಾಗಿದೆ. ಜಗತ್ತಿನ ನ್ಯಾಯಶಾಸ್ತ್ರ ತಜ್ಞರು, ಭಾರತದ ಸಂವಿಧಾನ ಅತ್ಯುತ್ತಮ ಸಂವಿಧಾನವೆಂಬ ಹೆಮ್ಮೆಯ ಮಾತನ್ನು ಹೇಳಿದ್ದಾರೆ. ಎಲ್ಲ ಭಾರತೀಯರಿಗೆ ಸಂವಿಧಾನ ಮಹಾಗ್ರಂಥವಾಗಿದೆ. ಇಂತಹ ಮಹತ್ವದ ಗ್ರಂಥವನ್ನು ಅರ್ಥಮಾಡಿಕೊಂಡು ನಡೆದುಕೊಳ್ಳಬೇಕಾಗಿದೆ’ ಎಂದು ಕರೆ ನೀಡಿದರು. ನಂತರ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಶಾಂತವೀರ ಶಿವಪ್ಪ, ಸಿವಿಲ್ ನ್ಯಾಯಾಧೀಶರಾದ ಸುನೀತಾ, ದಿವ್ಯಶ್ರಿ ಸಿ.ಎಂ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣಕುಮಾರ್ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ನಾಯ್ಕ ಇದ್ದರು. ಉಪನ್ಯಾಸಕಿ ಮಾಧವಿ ಭಂಡಾರಿ ಗೀತೆ ಹಾಡಿದರು. ವಿಠ್ಠಲ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸನ್ನ ಹೆಗಡೆ ಸ್ವಾಗತಿಸಿದರು. ಉಮೇಶ ನಾಯ್ಕ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT