ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ದಿನಕ್ಕೆ ಅರ್ಥಕೊಟ್ಟ ‘ವನಮಹೋತ್ಸವ ಚಾಲೆಂಜ್’

ಗಿಡ ನೆಡುವ ಅಭಿಯಾನ: 4 ಸಾವಿರ ಬೀಜ ಬಿತ್ತನೆ, ನೂರಾರು ಗಿಡ ನಾಟಿ ಮಾಡಿದ ಯುವಕರು
Last Updated 6 ಜೂನ್ 2021, 4:16 IST
ಅಕ್ಷರ ಗಾತ್ರ

ಶಿರಸಿ: ಲಾಕ್‍ಡೌನ್ ಅವಧಿಯಲ್ಲಿ ಸಮಯ ಕಳೆಯಲು ಸಾಮಾಜಿಕ ಜಾಲತಾಣಗಳಲ್ಲಿ ‘ಸೀರೆ ಚಾಲೆಂಜ್’ ಆರಂಭಿಸಿದ್ದ ನಾರಿಯರಿಗೆ ಪರಿಸರ ದಿನದಂದು ತಾಲ್ಲೂಕಿನ ಸಾಲ್ಕಣಿ, ಸೋಂದಾ ಭಾಗದ ಯುವಕರು ‘ವನಮಹೋತ್ಸವ ಚಾಲೆಂಜ್’ ಮೂಲಕ ಸೆಡ್ಡು ಹೊಡೆದಿದ್ದಾರೆ.

ಜೂನ್‌ 5ರ ವಿಶ್ವ ಪರಿಸರ ದಿನ ವಾಟ್ಸ್‌ ಆ್ಯಪ್, ಫೇಸ್‍ಬುಕ್‍ನಲ್ಲಿ ವನಮಹೋತ್ಸವ ಚಾಲೆಂಜ್ ಹ್ಯಾಶ್ ಟ್ಯಾಗ್ ಬಳಸಿ ಗಿಡ ನೆಡುವ ಅಭಿಯಾನ ಆರಂಭಿಸಿದ ಸೀಮಿತ ಸಂಖ್ಯೆಯ ಯುವಕರು, ಸಮಾನ ಮನಸ್ಕರ ಗುಂಪಿನ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ.

ನೂರಾರು ಗ್ರಾಮಗಳಲ್ಲಿ ಯುವಕರು, ಯುವತಿಯರು, ಮಕ್ಕಳು ಗಿಡ ನೆಟ್ಟಿದ್ದಾರೆ. ಹ್ಯಾಶ್ ಟ್ಯಾಗ್ ಮೂಲಕ ಪರಸ್ಪರ ಚಾಲೆಂಜ್ ನೀಡುತ್ತ ಹಲಸು, ಮಾವು, ಅಂಟವಾಳ, ಬಿಳಿಮುರುಗಲ, ದಾಲ್ಚಿನ್ನಿ, ಉಪ್ಪಾಗೆ, ಗೇರು ಮುಂತಾದ ಗಿಡಗಳನ್ನು ನೆಟ್ಟಿದ್ದಾರೆ. ಮನೆ ಅಂಗಳ, ತೋಟದ ಅಂಚು, ಬೆಟ್ಟ, ರಸ್ತೆ ಬದಿಗಳಲ್ಲಿ ಹಣ್ಣಿನ ಬೀಜಗಳನ್ನೂ ಬಿತ್ತಿದ್ದಾರೆ.

‘ಕೇವಲ ಫೋಟೊಗಾಗಿ ಗಿಡ ನೆಟ್ಟಿಲ್ಲ. ಮರವಾಗಿ ಬೆಳೆಯುವವರೆಗೂ ಪೋಷಿಸುವ ಸಂಕಲ್ಪ ಮಾಡಿದ್ದೇವೆ’ ಎನ್ನುತ್ತಾರೆ ಅಭಿಯಾನ ಆರಂಭಿಸಿದ ಹುಳಸೆಮಕ್ಕಿಯ ಚಿನ್ಮಯ ಭಟ್ಟ.

‘ಲಾಕ್‍ಡೌನ್ ಕಾರಣದಿಂದ ಬಹುತೇಕ ಮಂದಿ ಮನೆಯಲ್ಲಿದ್ದಾರೆ. ಉದ್ಯೋಗದಲ್ಲಿದ್ದವರೂ ಊರಿಗೆ ಮರಳಿದ್ದಾರೆ. ಈಚೆಗೆ ಜಾಲತಾಣಗಳಲ್ಲಿ ಮಹಿಳೆಯರು ಸೀರೆ ತೊಟ್ಟ ಫೋಟೊ ಹರಿಬಿಡುವ ಸೀರೆ ಚಾಲೆಂಜ್ ಟ್ರೆಂಡ್ ಆಗಿತ್ತು. ಇದೇ ಮಾದರಿಯಲ್ಲಿ ಪರಿಸರಕ್ಕೆ ಒಳಿತಾಗುವಂತೆ ಟ್ರೆಂಡ್ ಸೃಷ್ಟಿಸಲು ಪಣತೊಟ್ಟಿದ್ದು ವಿಶಿಷ್ಟ ರೀತಿಯಲ್ಲಿ ವನಮಹೋತ್ಸವ ಆಚರಣೆಗೆ ಕಾರಣವಾಯಿತು’ ಎಂದರು.

‘ನಮ್ಮದೆ ಗ್ರಾಮದ ಶಶಾಂಕ ಬೆಳ್ಳಿಮನೆ ಎಂಬುವವರು ಮೂರು ವರ್ಷದಿಂದ ರಸ್ತೆ ಬದಿಯಲ್ಲಿ ದಿನವೂ ಹಣ್ಣಿ ಬೀಜ ಬಿತ್ತಿ ಗಿಡ ಬೆಳೆಸಲು ಕಾರಣರಾಗಿದ್ದಾರೆ. ಅವರನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಅಭಿಯಾನ ಏರ್ಪಡಿಸಲಾಗಿತ್ತು. ಹೀಗಾಗಿ ಯುವಜನತೆಯನ್ನು ಸೆಳೆಯುವುದು ಸುಲಭವಾಯಿತು’ ಎಂದುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT