ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಜಾಗೃತಿ ಪ್ರಾಯೋಗಕ್ಕೆ ಬರಲಿ: ನ್ಯಾಯಾಧೀಶರ ಸಲಹೆ

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ
Last Updated 5 ಜೂನ್ 2022, 11:41 IST
ಅಕ್ಷರ ಗಾತ್ರ

ಕಾರವಾರ: ‘ಪರಿಸರ ಸಂರಕ್ಷಣೆಯ ಬಗ್ಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಪಠ್ಯದ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಪ್ರಾಯೋಗಿಕವಾಗಿ ಮಾಡುವುದು ಕಡಿಮೆಯಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ವಿಷಾದ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ‘ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮದ ಅಂಗವಾಗಿ ಸಾಲು ಮರದ ತಿಮ್ಮಕ್ಕ ಉದ್ಯಾನದಲ್ಲಿ ಗಿಡ ನೆಟ್ಟು, ವಿವಿಧ ಮರಗಳ ಬೀಜಗಳ ಬಿತ್ತನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಪರಿಸರದಲ್ಲಿ ವ್ಯತ್ಯಯವಾದರೆ ಪ್ರಾಕೃತಿಕ ಪರಿಸರದಲ್ಲಿ ವ್ಯತ್ಯಯವಾಗುತ್ತದೆ. ಪರಿಸರವು ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆ. ಆದರೆ, ದುರಾಸೆಗಳನ್ನಲ್ಲ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಅವರು ಅಂದಿನ ಕಾಲದಲ್ಲೇ ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದರು’ ಎಂದು ಹೇಳಿದರು.

‘ಸೊಳ್ಳೆ ಕಾಟ ವಿಪರೀತ’:

‘ಕಾರವಾರ ಸುಂದರ ಪಟ್ಟಣ. ಆದರೆ, ಸೊಳ್ಳೆಗಳ ಕಾಟ ವಿಪರೀತವಿದೆ. ಕೋಣೆನಾಲೆಗೆ ಕಾಂಕ್ರೀಟ್ ಹೊದಿಕೆ ಹೊದಿಸುವ, ಆ ಪ್ರದೇಶದಲ್ಲಿ ಧೂಮೀಕರಣ ಮಾಡುವ ಬಗ್ಗೆ ಯಾರೂ ಹೆಚ್ಚು ಗಮನ ಹರಿಸಿಲ್ಲ ಎಂದು ಕಾಣುತ್ತದೆ. ಕಾನೂನಿಂದ ಮಾತ್ರ ಪರಿಣಾಮಕಾರಿಯಾಗಿ ಕೆಲಸಗಳಾಗುತ್ತವೆ ಎಂದು ಹೇಳುವಂತಿಲ್ಲ. ಸ್ವಚ್ಛತೆಯ ಕುರಿತು ಜನರಿಗೂ ಅರಿವು ಮೂಡಬೇಕು’ ಎಂದರು.

ಸಾಗರ ವಿಜ್ಞಾನ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ಜಗನ್ನಾಥ ರಾಥೋಡ್ ಮಾತನಾಡಿ, ‘ಮಾನವನ ಹಸ್ತಕ್ಷೇಪದಿಂದ ಪರಿಸರದ ಮೇಲಾಗುವ ಕೆಲವು ಪರಿಣಾಮಗಳನ್ನು ತಿಳಿಯಲು ದಶಕಗಳೇ ಬೇಕು. ನೀತಿ ನಿರೂಪಕರು ಇಂಥ ವಿಷಯಗಳತ್ತ ಹೆಚ್ಚು ಗಮನ ಹರಿಸುವ ಇಚ್ಛಾಶಕ್ತಿ ತೋರಿಸಬೇಕು’ ಎಂದರು.

ಉಪ ವಿಭಾಗಾಧಿಕಾರಿ ವಿಜಯಲಕ್ಷ್ಮಿ ರಾಯಕೊಡ ಮಾತನಾಡಿ, ‘ಪರಿಸರದ ವಿವಿಧ ಮಜಲುಗಳನ್ನು ಒಗ್ಗೂಡಿಸಿದಾಗ ಸಂರಕ್ಷಣೆ ಸಾಧ್ಯವಾಗುತ್ತದೆ. ಮಕ್ಕಳಿಗೆ ಲಸಿಕೆ ಕೊಟ್ಟು ದೈಹಿಕವಾಗಿ ಸದೃಢವಾಗಿಸುತ್ತಿದ್ದೇವೆ. ಆದರೆ, ಸಮಾಜದ ಒಳಿತಿಗಾಗಿ ಸಂಸ್ಕಾರವೆಂಬ ಮಾನಸಿಕ ಲಸಿಕೆ ಕೊಡಬೇಕಿದೆ. ಪರಿಸರ ಸಂರಕ್ಷಣೆಯೂ ಸಂಸ್ಕಾರವಾಗಿದೆ’ ಎಂದು ಹೇಳಿದರು.

ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್.ದರಗದ್ ವೇದಿಕೆಯಲ್ಲಿದ್ದರು. ಸಾಗರ ವಿಜ್ಞಾನ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎನ್.ನಾಯಕ ಉಪನ್ಯಾಸ ನೀಡಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಘಜಾಲಾ ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪರಿಸರ ಅಧಿಕಾರಿ ಡಾ.ಗಣಪತಿ ಹೆಗಡೆ ಸ್ವಾಗತಿಸಿದರು. ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT