ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವು ಉಳಿದರೆ ಮಾನವನ ಉಳಿವು!

ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವ ಉರಗದ ರಕ್ಷಣೆಗೆ ಆದ್ಯತೆ ಅಗತ್ಯ
Last Updated 15 ಜುಲೈ 2021, 15:39 IST
ಅಕ್ಷರ ಗಾತ್ರ

ಕಾರವಾರ: ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವ ಹಾವುಗಳು, ಪರಿಸರದ ಸಮತೋಲನಕ್ಕೂ ಸಹಾಯ ಮಾಡುತ್ತವೆ. ಇಲಿ, ಹೆಗ್ಗಣದಂತಹ ಪ್ರಾಣಿಗಳನ್ನು ಬೇಟೆಯಾಡಿ ಕೃಷಿ ಉತ್ಪನ್ನಗಳನ್ನು ಉಳಿವಿಗೆ ನೆರವಾಗುತ್ತವೆ. ಜುಲೈ 16 ‘ವಿಶ್ವ ಉರಗ ದಿನಾಚರಣೆ’. ಈ ಸಂದರ್ಭದಲ್ಲಿ ಅವುಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಹಾವುಗಳು ಮನೆಗಳ ಸುತ್ತಮುತ್ತ ಹೆಚ್ಚಾಗಿ ಕಾಣಿಸಿಕೊಳ್ಳಲು ಮುಖ್ಯ ಕಾರಣವೇ ಇಲಿಗಳು. ಮನೆಯ ವ್ಯರ್ಥ ಆಹಾರ ಪದಾರ್ಥಗಳು ಇಲಿಗಳನ್ನು ಆಕರ್ಷಿಸುತ್ತವೆ. ಅವುಗಳನ್ನು ಅರಸಿಕೊಂಡು ಹಾವುಗಳು ಬರುತ್ತವೆ. ಹಾಗಾಗಿ ತ್ಯಾಜ್ಯ ವಸ್ತುಗಳನ್ನು ಮನೆಯಿಂದ ನಿರ್ದಿಷ್ಟ ದೂರದಲ್ಲಿ ಎಸೆಯಬೇಕು. ಮರ, ಗಿಡಗಳ ಕೊಂಬೆಗಳು ಮನೆಯ ಮಹಡಿಗೆ ಅಥವಾ ಕಿಟಿಕಿಗೆ ತಾಗುವಂತಿದ್ದರೆ ಅವುಗಳ ಮೂಲಕ ಹಾವುಗಳು ಮನೆಯೊಳಗೆ ಪ್ರವೇಶಿಸಬಹುದು. ಇದಕ್ಕೆ ಅವಕಾಶ ಕೊಡಬಾರದು ಎನ್ನುತ್ತಾರೆ ವನ್ಯಜೀವಿ ಪ್ರೇಮಿ, ಕುಮಟಾದ ಓಂಕಾರ ಪೈ.

‘ಭಾರತದ ಕೆಲವೇ ಹಾವುಗಳು ವಿಷಪೂರಿತವಾಗಿದ್ದು, ಬಹಳಷ್ಟು ನಿರುಪದ್ರವಿಗಳಾಗಿವೆ. ನಮ್ಮ ಜಿಲ್ಲೆಯಲ್ಲಿ ವಿಷಪೂರಿತ ನಾಲ್ಕು ಪ್ರಭೇದಗಳ ಹಾವುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ನಾಗರ ಹಾವು, ಕಟ್ಟು ಹಾವು (ಕಡಂಬಳ ಹಾವು), ಕೊಳಕು ಮಂಡಲ ಹಾಗೂ ರಕ್ತ ಮಂಡಲ (ಬುಕ್ರ್ಯಾ) ಹಾವುಗಳು ಈ ನೆಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ’ ಎನ್ನುತ್ತಾರೆ ಅವರು.

‘ಮನೆಯ ಸುತ್ತಮುತ್ತ ಹಾವು ಕಂಡರೆ ಅವುಗಳ ಚಲನವಲನದ ಮೇಲೆ ಗಮನವಿಡಬೇಕು. ತುಂಬಾ ಜನ ಸೇರದಂತೆ ನೋಡಿಕೊಳ್ಳಬೇಕು. ಹಾವು ಹೆದರಿ ಅಲ್ಲೇ ಅವಿತು ಕೂರಬಹುದು. ಹಾವು ಹೊರಗೆ ಹೋಗಲು ಯತ್ನಿಸುತ್ತಿದ್ದರೆ, ಯಾವುದೇ ತೊಂದರೆ ಕೊಡದೆ ಅದನ್ನು ಹೋಗಲು ಬಿಡಬೇಕು. ಹಾವು ನಮಗೆ ತೊಂದರೆ ಕೊಡಲು ನಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ. ತಮ್ಮ ಆಹಾರವನ್ನು ಹುಡುಕಿ ಬರುತ್ತವೆ. ಹಾಗೆಯೇ ಹೊರಟು ಹೋಗುತ್ತವೆ. ಇದೇವೇಳೆ, ಅರಣ್ಯ ಇಲಾಖೆಗೆ ಹಾಗೂ ಸ್ಥಳೀಯ ಉರಗ ರಕ್ಷಕರಿಗೆ ವಿಷಯ ತಿಳಿಸಲು ಮರೆಯಬಾರದು’ ಎಂದು ಅವರು ಸಲಹೆ ನೀಡುತ್ತಾರೆ.

*****

ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆ:

* ಕಡಿತಕ್ಕೊಳಗಾದ ಭಾಗವನ್ನು ಆದಷ್ಟು ಅಲುಗಾಡಿಸದಿರಿ

* ಬಳೆ, ಕೈಗಡಿಯಾರ, ಗೆಜ್ಜೆ, ಉಂಗುರದಂತಹ ರಕ್ತ ಸಂಚಾರಕ್ಕೆ ಅಡ್ಡಿ ಮಾಡಬಲ್ಲ ವಸ್ತುಗಳನ್ನು ತೆಗೆಯಬೇಕು

* ಕಡಿತಕ್ಕೊಳಗಾದ ಭಾಗಕ್ಕಿಂತ ಸ್ವಲ್ಪ ಮೇಲೆ ಬ್ಯಾಂಡೇಜ್ ಕಟ್ಟುವುದು (ತೀರಾ ಗಟ್ಟಿಯಾಗಿ ಬೇಡ)

* ರಕ್ತ ಸಂಚಾರವನ್ನು ನಿಯಂತ್ರಿಸಬೇಕೇ ಹೊರತು, ಸ್ಥಗಿತ ಗೊಳಿಸಬಾರದು

* ಆದಷ್ಟು ಬೇಗ ಆಸ್ಪತ್ರೆಗೆ ತೆರಳಬೇಕು

* ಕಡಿತದ ನಂತರದ ಲಕ್ಷಣಗಳನ್ನು ವೈದ್ಯರಿಗೆ ತಿಳಿಸಬೇಕು

––––––––

ಏನನ್ನು ಮಾಡಬಾರದು?:

* ಹಾವಿನ ಕಡಿತಕ್ಕೊಳಗಾದ ವ್ಯಕ್ತಿಯನ್ನು ಹೆದರಿಸದಿರಿ

* ಕೋಳಿ ಪ್ರಯೋಗ, ಮಂಜುಗಡ್ಡೆ ಉಪಚಾರ ಮಾಡಬೇಡಿ

* ಗಾಯದ ಗಾತ್ರ ಹಿಗ್ಗಿಸಿ, ಕಚ್ಚಿ ವಿಷ ಹೀರುವ ಪ್ರಯತ್ನ ಮಾಡಬೇಡಿ

* ವಿಷದ ಪ್ರವಾಹವನ್ನು ಉತ್ತೇಜಿಸುವ ಯಾವುದೇ ಕ್ರಿಯೆ ಮಾಡಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT